Bengaluru-Mysuru Expressway: ಮತ್ತೆ ಅವ್ಯವಸ್ಥೆಯ ಆಗರವಾದ್ವಾ ಎಕ್ಸ್‌ಪ್ರೆಸ್‌ವೇನ ಅಂಡರ್‌ಪಾಸ್‌ಗಳು?
ಮಂಡ್ಯ, ಫೆಬ್ರವರಿ, 21: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಆದಾಗಿನಿಂದಲೂ ಈ ಹೆದ್ದಾರಿಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ತಲೆದೂರುತ್ತಲೇ ಇವೆ. ಹಾಗೆಯೇ ಇದೀಗ ಮಂಡ್ಯ ಜಿಲ್ಲೆ ಬಳಿಯ ಈ ಹೆದ್ದಾರಿಯ ಅಂಡರ್‌ಪಾಸ್‌ಗಳು ಪಾರ್ಕಿಂಗ್ ಸ್ಥಳ ಮತ್ತು ಮಿನಿ ಮಾರುಕಟ್ಟೆಯಂತೆ ಆಗಿವೆ.
ಹೆದ್ದಾರಿ ಆರಂಭವಾದಾಗ ಟೋಲ್ ವಿಚಾರವಾಗಿ ಹಲವು ಹೋರಾಟಗಳು, ಗಲಾಟೆಗಳು ನಡೆದ್ವು. ಇದೀಗ ಮೈಸೂರಿನಿಂದ-ಬೆಂಗಳೂರಿನವರೆಗಿನ ಬಹುತೇಕ ಅಂಡರ್‌ಪಾಸ್‌ಗಳು ದುರ್ಬಳಕೆ ಆಗುತ್ತಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲೇ ಇದು ಹೆಚ್ಚಾಗಿದೆ. ಹಳೇ ಹೆದ್ದಾರಿ ಬದಲಿಗೆ ಹೊಸದಾಗಿ ಎಕ್ಸ್‌ಪ್ರೆಸ್ ವೇ ನಿರ್ಮಾಣವಾದ ಬಳಿಕ ಬಹುತೇಕ ರಸ್ತೆಬದಿ ವ್ಯಾಪಾರಿಗಳ ವ್ಯಾಪಾರ-ವಹಿವಾಟಿಗೆ ಸಮಸ್ಯೆ ಉಂಟಾಗಿತ್ತು. ಆದ್ದರಿಂದ ಹೊಸ ಹೆದ್ದಾರಿಯ ಬದಿಯಲ್ಲಿ ಮತ್ತೆ ಈಗ ವ್ಯಾಪಾರ ಆರಂಭಿಸಿದ್ದಾರೆ.

ಆರಂಭದಲ್ಲಿ ಹೊಟ್ಟೆಪಾಡಿಗಾಗಿ ಕಾಫಿ, ಟಿ, ತಿಂಡಿ, ಆಹಾ ಮಾರಾಟ ಮಾಡಲಾಗುತ್ತಿತ್ತು. ಹೆದ್ದಾರಿಯ ಆಗಮನ-ನಿರ್ಗಮನ ಸ್ಥಳಗಳು, ಟೋಲ್ ಪ್ಲಾಜಾಗಳು ಹಾಗೂ ವಿಶಾಲವಾದ ರಸ್ತೆ ಬದಿಗಳಲ್ಲಿ ಫಾಸ್ಟ್‌ಫುಡ್ ಸೆಂಟರ್‌ಗಳು, ಕಾಫಿ-ಟೀ ಕ್ಯಾಂಟೀನ್‌ಗಳು, ಎಳನೀರು ವ್ಯಾಪಾರ, ವಹಿವಾಟು ನಡೆಯುತ್ತಿತ್ತು. ಇದೀಗ ಮಿನಿ ಮಾರುಕಟ್ಟೆಗಳು, ಪಾರ್ಕಿಂಗ್ ಲಾಟ್‌ಗಳು ಹುಟ್ಟಿಕೊಂಡಿವೆ.
ಇನ್ನು ಮದ್ದೂರು, ಶ್ರೀರಂಗಪಟ್ಟಣದಲ್ಲಿ ಹೆದ್ದಾರಿ ಸರ್ವೀಸ್ ರಸ್ತೆಯ ಬದಿಗಳಲ್ಲೇ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೆ ಹಳ್ಳಿಗಳಲ್ಲಿ ಹೆದ್ದಾರಿ ಕೆಳಗಿನ ಅಂಡರ್‌ಪಾಸ್‌ಗಳಲ್ಲೂ ಅಕ್ಕಪಕ್ಕದ ನಿವಾಸಿಗಳು ಕಾರು ಹಾಗೂ ಇತರ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ. ಮೊದಲೇ ಚಿಕ್ಕದಾಗಿರುವ ಸರ್ವೀಸ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ದೇಶದ ಬೇರೆ ರಾಜ್ಯಗಳ ನೋಂದಣಿ ಸಂಖ್ಯೆಯುಳ್ಳ ದೊಡ್ಡ ದೊಡ್ಡ ವಾಹನಗಳು, ಸ್ಥಳೀಯ ಗೂಡ್ಸ್ ಟ್ಯಾಂಕರ್‌ಗಳು, ಗೂಡ್ಸ್ ವಾಹನಗಳು ಹೆದ್ದಾರಿಯ ಅಂಡರ್‌ಪಾಸ್‌ಗಳಲ್ಲಿ ಸಲಾಗಿ ನಿಂತಿರುತ್ತವೆ. ಸ್ಥಳೀಯವಾಗಿ ಗೂಡ್ಸ್ ವಾಹನಗಳಲ್ಲಿ ರೈತರು, ಎಳನೀರು ವ್ಯಾಪಾರಿಗಳು ಎಳನೀರು ಗೊನೆಗಳನ್ನು ತಂದು, ಹೊರ ರಾಜ್ಯಗಳಿಗೆ ಎಳನೀರು ಕೊಂಡೊಯ್ಯುವ ವರ್ತಕರೊಂದಿಗೆ ಎಳನೀರು ವ್ಯಾಪಾರ ಮಾತುಕತೆ ಮಾಡುತ್ತಿದ್ದಾರೆ.
ಆದ್ದರಿಂದ ಪ್ರತಿನಿತ್ಯವೂ ಅಂಡರ್‌ಪಾಸ್‌ಗಳಲ್ಲೇ ಮೂರ್ನಾಲ್ಕು ವಾಹನಗಳಿಗೆ ಎಳನೀರು ಲೋಡಿಂಗ್-ಅನ್‌ಲೋಡಿಂಗ್ ಮಾಡುತ್ತಿದ್ದಾರೆ. ಒಂದು ದೊಡ್ಡ ವಾಹನಕ್ಕೆ ಎಳನೀರು ಲೋಡಿಂಗ್ ಮಾಡಲು ನಾಲ್ಕೈದು ಗೂಡ್ಸ್ ಆಟೋಗಳಲ್ಲಿ ಎಳನೀರು ತುಂಬಿಕೊಂಡು ಬಂದು ಅಂಡರ್‌ಪಾಸ್‌ಗಳಲ್ಲೇ ನಿಲ್ಲಿಸಲಾಗುತ್ತಿದೆ. ಇದು ಒಂದು ರೀತಿಯಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಇದರಿಂದ ಜನರು ಹಾಗೂ ಜಮೀನುಗಳಿಗೆ ಹೋಗುವ ರೈತರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಪೊಲೀಸರು ಗಮನ ಹರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications