ಮಂಡ್ಯದಲ್ಲಿ ನರೇಂದ್ರ ಮೋದಿ ಸ್ವಾಗತಕ್ಕೆ ನಿರ್ಮಿಸಿದ ಕಮಾನಿಗೆ ಆಕ್ರೋಶ
ಮಂಡ್ಯ, ಮಾರ್ಚ್ 11: ಮಾರ್ಚ್ 12ರಂದು ಬೆಂಗಳೂರು ಮೈಸೂರು ಹೆದ್ದಾರಿ ಉದ್ಘಾಟಿಸಲು ಮಂಡ್ಯಕ್ಕೆ ಬರುತ್ತಿರುವ ನರೇಂದ್ರ ಮೋದಿ ಅವರ ಸ್ವಾಗತಕ್ಕೆ ಹಾಕಿರುವ ಸ್ವಾಗತ ಕಮಾನು ವಿವಾದವನ್ನು ಹುಟ್ಟುಹಾಕಿದೆ. ಮಂಡ್ಯ ಜಿಲ್ಲೆಯ ಹಲವಾರು ಮಂದಿ ಹಾಗೂ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯದಲ್ಲಿ 118 ಕಿಲೋ ಮೀಟರ್ ಉದ್ದದ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಲು ಬರುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಬಿಜೆಪಿಯಿಂದ ನಿರ್ಮಿಸಿರುವ ಸ್ವಾಗತ ಕಮಾನು ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಏಕೆಂದರೆ ಈ ಸ್ವಾಗತ ಕಮಾನಿಗೆ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ಎಂಬ ಹೆಸರನ್ನು ಬಿಜೆಪಿ ಇಟ್ಟಿದೆ.

ಬಿಜೆಪಿಯವರು ನಿರ್ಮಿಸಿರುವ ಈ ಕ್ರಮಕ್ಕೆ ಈಗ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದೆ. ಇದನ್ನು ಖಂಡಿಸಿರುವ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ ಎಂದಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ರೀತಿಯ ಕಮಾನು ಮಂಡ್ಯದ ಜನತೆಗೆ ಮಾಡಿದ ಅವಮಾನ. ಈ ಬಗೆಯ ಸ್ವಾಗತ ಕಮಾನು ತರವಲ್ಲ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ಪ್ರಧಾನಿಯವರು ಜಿಲ್ಲೆಗೆ ಆಗಮಿಸುತ್ತಿರುವ ಹೊತ್ತಿನಲ್ಲಿ ಬಿಜೆಪಿ ಪಕ್ಷವು ಕಪೋಲಕಲ್ಪಿತವಾದ ಉರಿಗೌಡ ಮತ್ತು ನಂಜೇಗೌಡ ಹೆಸರಿಲ್ಲಿ ಹಾಕಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರೆವು ಗೊಳಿಸಿ ಎಲ್ಲವೂ ಶಾಂತಿಯುತವಾಗಿ ನಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು.
ಸದರಿ ಫ್ಲೆಕ್ಸ್ ಬೋರ್ಡ್ ನಲ್ಲಿ ಕೋಮು ಪ್ರಚೋದಿತ ಸುಳ್ಳು ಮತ್ತು ಅಶಾಂತಿ ಹರಡುವ ಉದ್ದೇಶಗಳು ಇರುವ ಕಾರಣ ಅದನ್ನ ಹಾಕಲು ಜಿಲ್ಲಾಡಳಿತವು ಅವಕಾಶ ನೀಡಬಾರದಿತ್ತು. ಸರ್ಕಾರದ ಸಾರ್ವಜನಿಕ ಕಾರ್ಯಕ್ರಮಗಳಲ್ಲೇ ಇಂತಹ ಕೋಮುವಾದಿ ಮತ್ತು ಸುಳ್ಳಿನ ಪೋಸ್ಟರ್ ಗಳನ್ನು ಬಳಸುವುದು, ಪ್ರಚಾರ ಮಾಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ.
ತಾವು ಸಂಜೆಯೊಳಗೆ ಈ ವಿವಾದಾತ್ಮಕ ಫ್ಲೆಕ್ಸ್ ಬೋರ್ಡ್ ಗಳನ್ನು ತೆರೆವುಗೊಳಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್, ಜೆಡಿಎಸ್, ರೈತ ಸಂಘ ಮತ್ತು ಪ್ರಗತಿಪರ ಸಂಘಟನೆಗಳ ರಾಜಕೀಯ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇಂತಹ ಕೇಡಿನ ಕೆಲಸಗಳ ವಿರುದ್ದ ತೀವ್ರವಾದ ಪ್ರತಿಭಟನೆಯನ್ನ ನಾಳೆ ಹಮ್ಮಿಕೊಳ್ಳಲು ಕಾರಣವಾಗುತ್ತದೆ. ತಾವು ಇದಕ್ಕೆ ಅವಕಾಶ ಕೊಡದೇ ಯಾವುದೇ ಮುಲಾಜುಗಳಿಗೆ ಒಳಗಾಗದೇ ಸಕ್ಕರೆ ಕಾರ್ಖಾನೆ ವೃತ್ತದಲ್ಲಿರುವ (ಬಿ.ಜಿ ದಾಸೇಗೌಡ ವೃತ್ತ) ಫ್ಲೆಕ್ಸ್ ಬೋರ್ಡ್ ಗಳನ್ನ ತೆರೆವು ಗೊಳಿಸಬೇಕು ಎಂದು ಮಂಡ್ಯದ ಲೇಖಕ ರಾಜೇಂದ್ರ ಪ್ರಸಾದ್ ಆಗ್ರಹಿಸಿದ್ದಾರೆ.












Click it and Unblock the Notifications