ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಕಬಳಿಕೆಗೆ ಯತ್ನ: ಜಂಟಿ ತನಿಖೆಗೆ ಡಿಸಿ ಸೂಚನೆ
ಮಂಡ್ಯ, ನವೆಂಬರ್ 21 : ಜಿಲ್ಲೆಯಲ್ಲಿ ಸರ್ಕಾರಕ್ಕೆ ಭೂ ಸ್ವಾಧೀನವಾದ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಪರಭಾರೆ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಯೊಬ್ಬರು ಮತ್ತೊಬ್ಬರಿಗೆ ಮಾರಾಟ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.
ಸತ್ತವನ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿರುವ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಅದೇ ಮಾದರಿಯ ಮತ್ತೊಂದು ಪ್ರಕರಣ ಬಹಿರಂಗವಾಗಿದೆ.
ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಈ ಅಕ್ರಮವನ್ನು ಬಯಲಿಗೆಳೆದು ಭೂ ಸ್ವಾಧೀನವಾದ ಸರ್ಕಾರಿ ಜಮೀನನ್ನು ದಾಖಲೆಗಳನ್ನು ಪರಿಶೀಲಿಸದೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಜಂಟಿ ತನಿಖೆಗೆ ಆದೇಶಿಸಿದ ಮಂಡ್ಯ ಜಿಲ್ಲಾಧಿಕಾರಿ
ಅಕ್ರಮ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ, ಭೂ ದಾಖಲೆಗಳ ಉಪ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ತಾಂತ್ರಿಕಕ ಸಹಾಯಕರ ತಂಡವೊಂದನ್ನು ರಚಿಸಿ ಜಂಟಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಮಂಡ್ಯ ತಾಲೂಕು ಕಸಬಾ ಹೋಬಳಿ ಮಂಡ್ಯ ಗ್ರಾಮದ ಸರ್ವೆ ನಂ. 174, 175, 176, 177 ಇತರೆ ಸರ್ವೆ ನಂ. ಒಟ್ಟು 17.27 ಎಕರೆ ವಿಸ್ತೀರ್ಣದ ಜಮೀನನ್ನು 29 ಜೂನ್ 1965ರಲ್ಲಿ ಟೌನ್ ಎಕ್ಸ್‌ಟೆನ್ಷನ್‌ಗಾಗಿ ಭೂಸ್ವಾಧೀನಪಡಿಸಿಕೊಂಡು ನಗರಸಭೆ ವತಿಯಿಂದ ಬಂದೀಗೌಡ ಬಡಾವಣೆ ಎಂದು ಘೋಷಿಸಿ ನಿವೇಶನಗಳನ್ನು ವಿಂಗಡಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಸರ್ವೆ ನಂ. 174/14ರಲ್ಲಿ 8 ಗುಂಟೆ ಸರ್ಕಾರಿ ಜಮೀನಿದ್ದು, ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ ಬಂದೀಗೌಡ ಬಡಾವಣೆಯ 30 ಅಡಿ ಸೇವಾ ರಸ್ತೆ ಹಾಗೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಿಂದ 21 ಮೀಟರ್ ಒಳಗಡೆ ಬರುವ ಸರ್ಕಾರಿ ಜಮೀನಾಗಿದೆ ಎಂದು ನಗರಸಭೆಯವರು ಭೂಸ್ವಾಧೀನ ನಡವಳಿ ನಡೆಸಿರುವುದು ಕಂಡುಬಂದಿದೆ.

ದಾಖಲೆಗಳ ಸಹಿತ ದೂರು ಸಲ್ಲಿಸಿದ ಕೆ.ಆರ್.ರವೀಂದ್ರ
ಮಂಡ್ಯ ಗ್ರಾಮದ ಸರ್ವೆ ನಂ. 174/14ರಲ್ಲಿನ 8 ಗುಂಟೆ ಜಮೀನನ್ನು 1976-77ನೇ ಸಾಲಿನಿಂದ 1980-81ನೇ ಸಾಲಿನವರೆಗೆ ಇರುವ ಕೈಬರವಣಿಗೆ ಆರ್‌ಟಿಸಿಯಲ್ಲಿ ಸರ್ಕಾರಿ ಎಂದು ದಾಖಲಾಗಿದೆ. ಸರ್ವೆ ನಂ.174/14ರ 8 ಗುಂಟೆ ಜಮೀನು ಪಿಸಿ ಶ್ರೀನಿವಾಸಯ್ಯ ಮತ್ತು ಬಿ.ಎಂ.ಸಿದ್ದೇಗೌಡರ ಹೆಸರಿನಲ್ಲಿದೆ.
ಸರ್ಕಾರಕ್ಕೆ ಭೂಸ್ವಾಧೀನವಾದ ನಂತರ ಸರ್ಕಾರ ಎಂದು ಆರ್‌ಟಿಸಿಯಲ್ಲಿ ದಾಖಲಿಸಿದ್ದರೂ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಭೂಕಬಳಿಕೆ ಮಾಡುವ ದೃಷ್ಟಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬಿ.ಎಸ್.ಕೃಷ್ಣಸ್ವಾಮಿ ಮತ್ತು ಇವರ ಕುಟುಂಬದವರು ಬಿ.ಮಂಜುನಾಥ್ ಬಿನ್ ಬಿ.ಬಸವೇಗೌಡಗೆ ಸರ್ಕಾರಿ ಜಮೀನನ್ನು ಕಾನೂನು ಬಾಹೀರವಾಗಿ ಮಾರಾಟ ಮಾಡಿದ್ದಾರೆ. ಅಲ್ಲದೆ, ಮಂಡ್ಯ ತಾಲೂಕು ತಹಶೀಲ್ದಾರ್ ಹಾಗೂ ಅವರ ಅಧೀನ ಸಿಬ್ಬಂದಿ 22 ಜೂನ್ 2022ರಂದು ಸರ್ಕಾರಿ ಜಮೀನನ್ನು ಅಕ್ರಮವಾಗಿ ಬಿ.ಮಂಜುನಾಥ್ ಬಿನ್ ಬಸವೇಗೌಡ ಎಂಬುವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದಾಗಿ ದಾಖಲೆಗಳ ಸಹಿತ ದೂರಿನಲ್ಲಿ ತಿಳಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಒತ್ತಾಯ
ಈ ಖಾತೆ ಆಧಾರದ ಮೇಲೆ ಬಿ.ಮಂಜುನಾಥ್ ಕೂಡ 14.07.2022ರಂದು 8 ಗುಂಟೆ ಜಮೀನನ್ನು ತಮ್ಮ ತಾಯಿ ಜಯಲಕ್ಷ್ಮಮ್ಮ ಹೆಸರಿಗೆ ಮಂಡ್ಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ದಾನಪತ್ರ ಮಾಡಿಸಿರುತ್ತಾರೆ. ಇದರ ಆಧಾರದ ಮೇರೆಗೆ ಮಂಡ್ಯ ತಹಶೀಲ್ದಾರ್ ಬಿ.ಮಂಜುನಾಥ್ ಅವರಿಂದ ಜಯಲಕ್ಷ್ಮಮ್ಮ ಹೆಸರಿಗೆ ಸರ್ಕಾರಿ ಜಮೀನನ್ನು ಸ್ಥಳ ಪರಿಶೀಲನೆ ಮಾಡದೆ, ದಾಖಲೆಗಳನ್ನು ಪರಿಶೀಲಿಸದೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಶೇಷ ಭೂ ಸ್ವಾಧೀನಾಧಿಕಾರಿ ಅವರು ಟೌನ್ ಎಕ್ಸ್‌ಟೆನ್‌ನ್ಷನ್‌ಗಾಗಿ ಭೂ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದ ವೇಳೆಯೂ ಮಂಡ್ಯ ಗ್ರಾಮದ ಸರ್ವೆ ನಂ. 174, 175, 176, 177, ಇತರೆ 17-27 ಎಕರೆ ವಿಸ್ತೀರ್ಣ ಜಮೀನನ್ನು ಟೌನ್ ಎಕ್ಸ್‌ಟೆನ್ಷನ್‌ಗಾಗಿ ಭೂಸ್ವಾಧೀನಪಡಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ.
ಭೂ ಸ್ವಾಧೀನವಾಗಿರುವ ಸರ್ಕಾರಿ ಜಮೀನನ್ನು ಮಾರಾಟ ಮಾಡಿರುವ ಬಿ.ಎಸ್.ಕೃಷ್ಣಸ್ವಾಮಿ, ಕ್ರಯಕ್ಕೆ ಪಡೆದಿರುವ ಬಿ.ಮಂಜುನಾಥ್ ಅವರೊಂದಿಗೆ ಶಾಮೀಲಾಗಿ ಕ್ರಯ ಮತ್ತು ದಾನಪತ್ರ ಮಾಡಿಕೊಟ್ಟಿರುವ ಉಪನೋಂದಣಾಧಿಕಾರಿ, ಕಾನೂನು ಬಾಹೀರವಾಗಿ ಸರ್ಕಾರಿ ಜಮೀನನ್ನು ಖಾತೆ ಮಾಡಿಕೊಟ್ಟಿರುವ ತಹಶೀಲ್ದಾರ್ ಹಾಗೂ ಅಧೀನ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

15 ದಿನಗಳೊಳಗೆ ಪೂರಕ ದಾಖಲೆ ಸಲ್ಲಿಸುವಂತೆ ಸೂಚನೆ
ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿರುವ ಅಧಿಕಾರಿಗಳು-ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾಖಲೆಗಳ ಸಹಿತ ಕೆ.ಆರ್.ರವೀಂದ್ರ ಸಲ್ಲಿಸಿರುವ ದೂರನ್ನು ಆಧರಿಸಿ, ಜಂಟಿ ತನಿಖೆ ನಡೆಸಲು ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಸೂಚಿಸಿದ್ದಾರೆ.
ಮಂಡ್ಯ ಉಪವಿಭಾಗಾಧಿಕಾರಿ, ಭೂದಾಖಲೆಗಳ ಉಪ ನಿರ್ದೇಶಕರು, ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರಿಗೆ ಪತ್ರ ಬರೆದಿರುವ ಅವರು, ದೂರಿನಲ್ಲಿರುವ ಪ್ರತಿಯೊಂದು ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ತನಿಖೆ ನಡೆಸಿ ವಿವರವಾದ ಜಂಟಿ ತನಿಖಾ ವರದಿಯನ್ನು ಪೂರಕ ದಾಖಲೆಗಳೊಂದಿಗೆ 15 ದಿನಗಳೊಳಗೆ ಕಚೇರಿಗೆ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.
ಭೂಸ್ವಾಧೀನವಾಗಿರುವ ಸರ್ಕಾರಿ ಜಾಗವನ್ನು ಖಾತೆ ಮಾಡಿರುವ ತಹಶೀಲ್ದಾರ್ ಮತ್ತು ಸಿಬ್ಬಂದಿಯನ್ನು ತಕ್ಷಣ ಅಮಾನತ್ತು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಖಾತೆ ಮಾಡಿರುವುದನ್ನು ರದ್ದು ಮಾಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.












Click it and Unblock the Notifications