ಮಂಡ್ಯ ರಾಜಕೀಯ: ಅಂಬರೀಶ್ ಆಪ್ತ ಚಂದ್ರು ಜೆಡಿಎಸ್ ಸೇರ್ಪಡೆ
ಮಂಡ್ಯ, ಮೇ 11: ಮಂಡ್ಯದಲ್ಲಿ ರಾಜಕೀಯ ಚಟುವಟಿಕೆ ಇನ್ನು ಕೂಡ ನಡೆಯುತ್ತಲೇ ಇದೆ. ಮತದಾರರು ಇನ್ನೇನು ನಾಳೆ ಮತ ಚಲಾಯಿಸಲು ಮತಗಟ್ಟೆಯತ್ತ ತೆರಳಲು ಸಿದ್ಧತೆ ನಡೆಸುತ್ತಿರುವಾಗಲೇ ಹೊಸದೊಂದು ಬೆಳವಣಿಗೆಯಾಗಿದೆ. ಅದೇನೆಂದರೆ ಅಂಬರೀಶ್ ಅವರ ಆಪ್ತ ಮಾರಗೌಡನಹಳ್ಳಿ ಚಂದ್ರು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವ ಅಂಬರೀಶ್ ಅವರು ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿಗಳು ಹರಡುತ್ತಿರುವ ಬೆನ್ನಲ್ಲೇ ಅವರ ಬೆಂಬಲಿಗ ಜೆಡಿಎಸ್‌ಗೆ ಸೇರ್ಪಡೆಗೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಅಂಬರೀಶ್ ಅವರು ಮಾತ್ರ ಮೌನವಾಗಿಯೇ ಇದ್ದಾರೆ.
ಮಾರಗೌಡನಹಳ್ಳಿ ಚಂದ್ರು ಅವರು ಜಿಲ್ಲಾ ಕಾಂಗ್ರೆಸ್ ಮುಖಂಡರಾಗಿ ಗುರುತಿಸಿಕೊಂಡಿದ್ದರು ಅಷ್ಟೇ ಅಲ್ಲ ಮಾಜಿ ಸಚಿವ ಅಂಬರೀಶ್ ಅವರ ಆಪ್ತ ಬೆಂಬಲಿಗ ಎಂದೇ ಗುರುತಿಸಿ ಕೊಂಡಿದ್ದಾರೆ. ಅವರು ಇದೀಗ ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

ಜೆಡಿಎಸ್‌ಗೆ ಸೇರ್ಪಡೆಗೊಂಡ ಬಳಿಕ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಅವರನ್ನು ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಒಟ್ಟಾರೆ ಈ ಬೆಳವಣಿಗೆ ಒಂದಷ್ಟು ಕುತೂಹಲ ಕೆರಳಿಸಿದೆ.
ಮಂಡ್ಯದ ಕಾಂಗ್ರೆಸ್ ಮುಖಂಡ ಅಂಬರೀಶ್ ಅವರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು ಅಲ್ಲದೇ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಹೇಳಿದ್ದರು. ಅವರು ಕಾಂಗ್ರೆಸ್ ರಾಜ್ಯ ನಾಯಕರ ಮೇಲೆ ಮುನಿಸು ಹೊಂದಿದ್ದಾರೆ ಅವರು ಜೆಡಿಎಸ್ ಸೇರುತ್ತಾರೆ ಎಂಬ ಊಹಾಪೋಹ ಹರಿದಾಡುತ್ತಿದೆ.
ಇದಕ್ಕೆ ಸರಿಯಾಗಿ ಕೆಲವು ದಿನಗಳ ಹಿಂದೆಯಷ್ಟೆ ಅಂಬರೀಶ್ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಹೊಟೆಲ್ ಒಂದರಲ್ಲಿ ಭೇಟಿ ಆಗಿ ಮಾತುಕತೆ ಸಹ ನಡೆಸಿದ್ದರು.











Click it and Unblock the Notifications