ದೊಡ್ಡರಸಿನಕೆರೆಯಲ್ಲಿ ಅಂಬರೀಶ್ 70ನೇ ಹುಟ್ಟುಹಬ್ಬ ಆಚರಣೆ
ಮಂಡ್ಯ, ಮೇ 30: ಚಿತ್ರನಟ ದಿ. ಅಂಬರೀಶ್ ಅವರ ಹುಟ್ಟೂರು ದೊಡ್ಡರಸಿನಕೆರೆ ಗ್ರಾಮದಲ್ಲಿ ಭಾನುವಾರ ಅಂಬಿ ಅವರ 70ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಅಂಬರೀಶ್ ಪತ್ನಿ ಸುಮಲತಾ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ನಟ ದೊಡ್ಡಣ್ಣ ಅಂಬರೀಶ್ ಸಮಾದಿಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಕೇಕ್ ಕತ್ತರಿಸಿ ಸಮಾದಿ ಬಳಿ ನೆರೆದಿದ್ದ ಮಕ್ಕಳಿಗೆ ಕೇಕ್ ತಿನ್ನಿಸಿ ಸಂಭ್ರಮಿಸಿದರು.
ನಂತರ ಮಾತನಾಡಿದ ಸುಮಲತಾ ಅಂಬರೀಶ್, ಕಳೆದ 30 ವರ್ಷಗಳಿಂದ ತನ್ನ ಪತಿ ಅಂಬರೀಶ್ ಅವರ ಹುಟ್ಟುಹಬ್ಬವನ್ನು ನೋಡಿಕೊಂಡು ಬಂದಿದ್ದೇನೆ. ಈ ದಿನ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಅವರು ಇದ್ದಾಗ ಪ್ರೀತಿಗಾಗಿ ಮುಗಿಬಿದ್ದು ಕೇಕ್ ತಿನ್ನಿಸುತ್ತಿದ್ದರು. ಅವರು ಪ್ರೀತಿಯಿಂದ ಬೈಯುತ್ತಿದ್ದರೂ ಸಹ ಅಭಿಮಾನಿಗಳು ಕೇಕೆ ಹಾಕಿ ನಗುತ್ತಿದ್ದರು ಎಂದು ಅಂಬರೀಶ್ ಅವರ ಒಡನಾಟವನ್ನು ಮೆಲುಕುಹಾಕಿದರು.

ಪುತ್ರ ಅಭಿಷೇಕ್ ತಮ್ಮ ತಂದೆ ಸಮಾದಿ ಬಳಿ ನಿರ್ಮಿಸಿರುವ ಪುತ್ಥಳಿಗೆ ಕೇಕ್ ತಿನ್ನಿಸಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳು ಅಂಬರೀಶ್ ಅವರಿಗೆ ಜೈಕಾರ ಹಾಕಿದರು.
ಪುತ್ರ ಅಭಿಷೇಕ್ ಅಂಬರೀಶ್ ಮಾತನಾಡಿ, ನಮ್ಮ ತಂದೆ ನಮ್ಮನ್ನಗಲಿ ಇಂದಿಗೆ ನಾಲ್ಕು ವರ್ಷಗಳಾಗಿವೆ. ಅವರು ಇನ್ನೂ ಜನಮಾನಸದಲ್ಲಿ ಜೀವಂತವಾಗಿರುವ ರೀತಿಯಲ್ಲಿ ಅವರ ಅಭಿಮಾನಿಗಳು ಜನ್ಮ ದಿನ ಆಚರಿಸುತ್ತಿದ್ದಾರೆ. ಇಂತಹ ಪ್ರೀತಿಯನ್ನು ನಮ್ಮ ತಂದೆ ಸಂಪಾದಿಸಿದ್ದಾರೆ. ಇದು ಹೀಗೆಯೇ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು. ಗ್ರಾಮದ ಮುಖಂಡರು, ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕೇಕ್ ಕತ್ತರಿಸಿ ಭಾವುಕ ಸಾಲು ಬರೆದ ಪತ್ನಿ ಸುಮಲತಾ
ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನ..ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯದಾದ್ಯಂತ ಆಚರಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಕೂಡ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸಂಪೂರ್ಣ ಮನೆಯನ್ನು ಹೂವಿನಿಂದ ಅಲಂಕಾರ ಮಾಡಿರುವ ಸುಮಲತಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.ಕೇಕ್ ಕತ್ತರಿಸಿ ಪತಿಯ ಹುಟ್ಟುಹಬ್ಬ ಆಚರಿಸಿದ ಸುಮಲತಾ ವಿಶೇಷ ಮಾತುಗಳನ್ನು ಹಂಚಿಕೊಂಡಿದ್ದಾರೆ. 'ಆಕಾಶಕ್ಕೆ ಯಾವುದೇ ಮಿತಿ ಇಲ್ಲ. ಅಂಬರೀಷ್ ಎಂದರೆ ಆಕಾಶದ ದೇವರು. ಹಾಗಾಗಿ ನಿಮ್ಮ ಪ್ರೀತಿಗೂ ಕೂಡ ಮಿತಿ ಇಲ್ಲ' ಎಂದು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಪತಿಯ ಹುಟ್ಟುಹಬ್ಬ ಆಚರಿಸಿದ ಸುಮಲತಾ
'ಸಾಕಷ್ಟು ನೆನಪುಗಳು, ಜೀವಮಾನಕ್ಕಾಗುವಷ್ಟು ಖುಷಿ ಮತ್ತು ಅಪರಿಮಿತವಾದ ಪ್ರೀತಿಯನ್ನು ನೀಡಿ ನೀವು ನಮ್ಮನ್ನು ಬಿಟ್ಟು ಹೋದ್ರಿ' ಎಂದು ಸುಮಲತಾ ಹೇಳಿದ್ದಾರೆ. 'ವಿಶಾಲ ಹೃದಯದ ವ್ಯಕ್ತಿಗೆ 70 ವರ್ಷ ಎಂಬುದು ಸಣ್ಣ ಸಂಖ್ಯೆ. ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಅಂಬಿ ಫಾರೆವರ್. ಅಂಬಿ ಅಮರ' ಎನ್ನುತಾ ಪ್ರೀತಿಯ ಪತಿಯ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿದ್ದಾರೆ. ಇನ್ನು ಅಭಿಮಾನಿಗಳು ಸಹ ನೆಚ್ಚಿನ ನಟ, ಪ್ರೀತಿಯ ಅಂಬಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇಂದು ಜನ್ಮದಿನದ ಪ್ರಯುಕ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications