Darshan Puttannaiah: ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಪರ ಪ್ರಚಾರ ನಡೆಸಿದ ಡಿಬಾಸ್!
ಮಂಡ್ಯ, ಏಪ್ರಿಲ್ 21; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಮೇ 10ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಬೇಸಿಗೆಯ ಬಿಸಿಲಿನ ಝಳದ ನಡುವೆಯೂ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ವಿವಿಧ ಸಿನಿಮಾ ನಟರು ಸಹ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ.
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಅಭ್ಯರ್ಥಿ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಅವರು ನಾಮಪತ್ರನ್ನು ಸಲ್ಲಿಕೆ ಮಾಡಿದರು. ಸಾವಿರಾರು ಜನರು ಈ ಸಂದರ್ಭದಲ್ಲಿ ಅವರಿಗೆ ಬೆಂಬಲ ನೀಡಿದರು. ಅಭಿಮಾನಿಗಳ ಪಾಲಿನ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗದೀಪ ಅವರು ದರ್ಶನ್‌ಗೆ ಬೆಂಬಲ ಸೂಚಿಸಿದರು. ಬೃಹತ್ ರೋಡ್ ಶೋ ಉದ್ದೇಶಿಸಿ ಮಾತನಾಡಿದರು.

ದರ್ಶನ್ ಪುಟ್ಟಣ್ಣಯ್ಯ ರೈತ ಹೋರಾಟಗಾರ ದಿ. ಕೆ. ಎಸ್. ಪುಟ್ಟಣ್ಣಯ್ಯ ಪುತ್ರ. ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾದ ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದೆ. ಆದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲ. 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಸಿತ್ತು. 73,779 ಮತಗಳನ್ನು ಪಡೆದು ಅವರು ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು (96,003) ವಿರುದ್ಧ 22,224 ಮತಗಳ ಅಂತರದಿಂದ ಸೋಲು ಕಂಡಿದ್ದರು.
ದಿ. ಕೆ. ಎಸ್. ಪುಟ್ಟಣ್ಣಯ್ಯ ಮೇಲುಕೋಟೆ ಕ್ಷೇತ್ರದಲ್ಲಿ 1994ರ ಚುನಾವಣೆಯಲ್ಲಿ ರೈತ ಸಂಘದ ಮೂಲಕ ಮತ್ತು 2013ರ ಚುನಾವಣೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ಗೆಲುವು ಕಂಡು ಶಾಸಕರಾಗಿದ್ದರು. 2018ರ ಫೆಬ್ರವರಿಯಲ್ಲಿ ಕೆ. ಎಸ್. ಪುಟ್ಟಣ್ಣಯ್ಯ ಹೃದಯಘಾತದಿಂದ ನಿಧನ ಹೊಂದಿದರು. ಮೇ ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಅಮೆರಿಕದಿಂದ ಬಂದು ಸ್ವರಾಜ್ ಇಂಡಿಯಾ ಪಕ್ಷದಿಂದ ಚುನಾವಣಾ ಕಣಕ್ಕಿಳಿದರು. ಕಾಂಗ್ರೆಸ್ ಪಕ್ಷವೂ ಬೆಂಬಲ ನೀಡಿತು. ಆದರೆ ಜೆಡಿಎಸ್‌ನ ಸಿ. ಎಸ್. ಪುಟ್ಟರಾಜು ಗೆಲುವು ಸಾಧಿಸಿದ್ದರು.

ಬೇರೆ ಪಕ್ಷಗಳಿಗೆ ನೆಲೆ ಇಲ್ಲ; ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷ ಮತ್ತು ಜೆಡಿಎಸ್ ಹೊರತುಪಡಿಸಿದರೆ ಬೇರೆ ಪಕ್ಷಕ್ಕೆ ನೆಲೆ ಇಲ್ಲ ಎಂಬುದು ಚುನಾವಣೆಯಲ್ಲಿ ಸಾಬೀತಾಗಿದೆ. ಸ್ವರಾಜ್ ಇಂಡಿಯಾ ಜೊತೆ ವಿಲೀನವಾಗಿದ್ದ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಮರು ಚಾಲನೆ ನೀಡಿ ಈ ಬಾರಿಯ ಚುನಾವಣೆಯಲ್ಲಿ 5ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮೇಲುಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ.
ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣ್ಣಯ್ಯ ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ದರ್ಶನ್ ಪುಟ್ಟಣ್ಣಯ್ಯ ತಾಯಿ ಸುನೀತಾ ಪುಟ್ಟಣ್ಣಯ್ಯ ಏಪ್ರಿಲ್ 13ರಂದು ನಾಮಪತ್ರ ಸಲ್ಲಿಕೆ ಮಾಡಿದ್ದರು. 2018ರಲ್ಲಿಯೂ ಅವರು ಹೀಗೆ ಮಾಡಿದ್ದರು. ಮಗನಿಗಿಂತ ಮೊದಲು ನಾಮಪತ್ರ ಸಲ್ಲಿಕೆ ಮಾಡಿದ್ದರು. ಬಳಿಕ ವಾಪಸ್ ಪಡೆದಿದ್ದರು.
ಕ್ಷೇತ್ರದಲ್ಲಿರುವ ಒಟ್ಟು ಮತಗಳು ಸುಮಾರು 2,10,000. ರೈತ ಸಂಘದ ಸುಮಾರು 40 ಸಾವಿರ ಮತಗಳು ಇವೆ. ಈ ಹಿಂದೆ ಕೆ. ಎಸ್. ಪುಟ್ಟಣ್ಣಯ್ಯ ಬೆಂಬಲಿಸುತ್ತಿದ್ದ ರೈತ ಸಂಘದವರು ಈಗ ದರ್ಶನ್ ಪುಟ್ಟಣ್ಣಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಸುಮಾರು 90 ಸಾವಿರ ಒಕ್ಕಲಿಗ ಮತಗಳು ಇದ್ದು, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಬೆಂಬಲಿಸುವ ಜನರು ಮೇಲುಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಬೆಂಬಲಿಸಿದ ಕಾರಣ ಕಳೆದು ಚುನಾವಣೆಯಲ್ಲಿ ಸಿ. ಎಸ್. ಪುಟ್ಟರಾಜು ಗೆಲುವು ಕಂಡಿದ್ದರು.
ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದಿರುವ ಸಿ. ಎಸ್. ಪುಟ್ಟರಾಜು ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದರು. ಕ್ಷೇತ್ರದಿಂದ ಗೆದ್ದು ಸಚಿವರಾದ ಮೊದಲ ಶಾಸಕ ಎಂಬ ಹೆಗ್ಗಳಿಕೆ ಅವರದ್ದು. ಈ ಬಾರಿಯೂ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಕಳೆದ ಚುನಾವಣೆಯಂತೆ ದರ್ಶನ್ ಪುಟ್ಟಣ್ಣಯ್ಯ ಎದುರಾಳಿ, ಕಾಂಗ್ರೆಸ್ ದರ್ಶನ್‌ಗೆ ಬೆಂಬಲ ನೀಡಿರುವುದರಿಂದ ಅಭ್ಯರ್ಥಿ ಇಲ್ಲ. ಬಿಜೆಪಿಯಿಂದ ಡಾ. ಇಂದ್ರೇಶ್ ಕುಮಾರ್ ಅಭ್ಯರ್ಥಿ.
ಎರಡನೇ ಬಾರಿಗೆ ಚುನಾವಣೆ ಎದುರಿಸುತ್ತಿರುವ ದರ್ಶನ್ ಪುಟ್ಟಣ್ಣಯ್ಯ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷವನ್ನು ಉತ್ತಮವಾಗಿ ಸಂಘಟನೆ ಮಾಡಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಅವರು ಕ್ಷೇತ್ರದಲ್ಲಿ ನಡೆಸಿದ ಪಾದಯಾತ್ರೆ, ಗ್ರಾಮ ವಾಸ್ತವ್ಯಕ್ಕೆ ಅಪಾರ ಜನ ಬೆಂಬಲ ವ್ಯಕ್ತವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ vs ಸಿ. ಎಸ್. ಪುಟ್ಟರಾಜು ನಡುವಿನ ಸ್ಪರ್ಧೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications