ವೇಗವಾಗಿ ಇಂಗ್ಲೀಷ್ ಓದುವ 5 ವರ್ಷದ ಪೋರನ ಸಾಧನೆ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ
ಮಂಡ್ಯ, ನವೆಂಬರ್ 28: ವೇಗವಾಗಿ ಇಂಗ್ಲೀಷ್ ಓದುವುದರಲ್ಲಿ ಮಂಡ್ಯದ ಐದು ವರ್ಷದ ಪೋರ ದೇವಾನಂದನ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ. 200 ಇಂಗ್ಲೀಷ್ ಪದಗಳನ್ನು ಕೇವಲ ಎರಡು ನಿಮಿಷ 58 ಸೆಕೆಂಡ್‌ಗಳಲ್ಲಿ ಓದಿ ರಾಷ್ಟ್ರಮಟ್ಟದ ದಾಖಲೆ ನಿರ್ಮಿಸಿದ್ದಾನೆ.
ಮಂಡ್ಯ ತಾಲೂಕಿನ ಭೂತನ ಹೊಸೂರು ಗ್ರಾಮದ ಸತೀಶ್ ಮತ್ತು ದಿವ್ಯ ದಂಪತಿ ಪುತ್ರ ದೇವಾನಂದನ್ ಗ್ರಾಮದ ಮಂಡ್ಯ ಕಬ್ ಶಾಲೆಯಲ್ಲಿ ಯುಕೆಜಿ ವ್ಯಾಸಂಗಮಾಡುತ್ತಿದ್ದಾನೆ. ಕನ್ನಡ ದಿನಪತ್ರಿಕೆಯನ್ನು ಸರಾಗವಾಗಿ ಓದುತ್ತಾ, ಪುಸ್ತಕದಲ್ಲಿರುವ ಮುದ್ರಣ ದೋಷಗಳನ್ನು ಹುಡುಕಿ ತೋರಿಸುವಷ್ಟು ಕನ್ನಡ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾನೆ.

ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಬೆಳೆಯುತ್ತಾ ದಾಯಾದಿಗಳು' ಎಂಬ ಪ್ದಕ್ಕೆ ವಿರುದ್ಧವಾಗಿರುವ ಇವರ ಚಿಕ್ಕಪ್ಪ ಸಂತೋಷ್ ಮಂಡ್ಯಗೌಡ ಅವರು ಎಲೆಮರೆಕಾಯಿಯಂತೆ ನಿಂತು ಈ ಪುಟ್ಟ ಪೋರನಿಗೆ ಕಲಿಕಾ ಸೂರ್ತಿ ತುಂಬುತ್ತಿರುವುದು ವಿಶೇಷ. ಸಿಬಿಎಸ್‌ಇ ಇಂಗ್ಲಿಷ್ ಒಂದನೇ ತರಗತಿ ಪುಸ್ತಕವನ್ನು ಓದಿ ಕನ್ನಡದಲ್ಲಿಯೇ ಭಾಷಾಂತರ ಸಹ ಮಾಡುತ್ತಾ ಗಣಿತ ಲೆಕ್ಕಗಳನ್ನು ಬಿಡಿಸಿ ಹೇಳುವ ಸಾಮರ್ಥ್ಯ ಬೆಳೆಸಿಕೊಂಡಿದ್ದಾನೆ.
ಬಾಲಕ ದೇವಾನಂದ್ ಚಿಕ್ಕಪ್ಪ ಸಂತೋಷ್‌ಗೌಡ ಅವರು ಸಹಾಯಕ ಪ್ರಾಧ್ಯಾಪಕರಾಗಿ ದೇಶ ವಿದೇಶಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದರು. ಪೂರ್ವ ಆಫ್ರಿಕಾ, ಕತಾರ್, ಸೌದೆ ಅರೇಬಿಯಾ, ರಷ್ಯಾ ದೇಶಗಳಲ್ಲಿ 6 ವರ್ಷ ಸಹ ಪ್ರಾಧ್ಯಾಪಕರಾಗಿ ಹಾಗೂ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ, 5 ವರ್ಷ ಸಿವಿಲ್ ಇಂಜಿನಿಯರ್ ಆಗಿಯೂ ಬೆಂಗಳೂರಿನ ಎಂ.ಎಸ್.ರಾಮಯ್ಯ ವಿವಿಯಲ್ಲಿ ಕೆಲಸ ಮಾಡಿದ್ದಾರೆ, ಕೋವಿಡ್ ಸಮಯದಲ್ಲಿ ಎರಡು ವರ್ಷ ಮನೆಯಲ್ಲಿದ್ದ ಇವರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ಪಾಠ ಹೇಳಿಕೊಡುತ್ತಿದ್ದರು, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಈ ಪುಟ್ಟ ಕಂದ ಇವರ ಕಣ್ಣಿಗೆ ಬಿದ್ದಿದೆ, ಆಗ ಪಾಠ ಹೇಳಿಕೊಡಲು ಪ್ರಾರಂಭಿಸಿದ್ದರು.
ಮಗುವಿನ ಆಟ ಪಾಠ:
ದೇವಾನಂದನ್ ಬೆಳಿಗ್ಗೆ 5.30 ಎದ್ದೇಳುತ್ತಾನೆ, ಅಲ್ಲಿಂದ 7 ಗಂಟೆಯವರೆಗೂ ಗುತ್ತಲಿನ ಮಂಡ್ಯ ಕಬ್ ಕೋಚಿಂಗ್ ಸೆಂಟರ್‌ನಲ್ಲಿ ಓದುತ್ತಾನೆ, 7 ರಿಂದ 10 ಗಂಟೆಯವರೆಗೆ ಆಟ ಆಡಿಕೊಳ್ಳುವುದು, ಪುನಃ 10 ಗಂಟೆಯಿಂದ 1 ಗಂಟೆಯವರೆಗೂ ಪಾಠದಲ್ಲಿ ಭಾಗಿ, 1 ಗಂಟೆಯಿಂದ ಸಂಜೆ 6 ಗಂಟೆಯತನಕ ಆಟ, ಟಿವಿ, ವಿಶ್ರಾಂತಿ, ಮತ್ತೆ ಸಂಜೆ 6 ಗಂಟೆಯಿಂದ ರಾತ್ರಿ 7.30 ತನಕ ಪಾಠದಲ್ಲಿ ಭಾಗಿ ನಂತರ ಊಟ ಹಾಗೂ ಮಲಗುವುದು ಇವಿಷ್ಟು ಮಗುವಿನ ದಿನಚರಿ.
30 ಅಡಿ ಆಳದ ಬಾವಿಯಲ್ಲಿ ಸ್ವತಂತ್ರವಾಗಿ ಈಜು:
ಮೂರೂವರೆ ವರ್ಷದಲ್ಲಿಯೇ ಈಜು ಕಲಿತಿರುವ ದೇವಾನಂದನ್, ತನ್ನೂರಿನ 30 ಅಡಿ ಆಳದ ತೆರೆದ ಬಾವಿಯಲ್ಲಿ ಒಬ್ಬನೇ ಯಾವುದೇ ಅಳುಕಿಲ್ಲದೇ ಸ್ವಂತಂತ್ರವಾಗಿ ಈಜಾಡುತ್ತಾನೆ, ಕೃಷಿ ಬಗ್ಗೆಯೂ ಆಸಕ್ತಿ ಹೊಂದಿರುವ ದೇನಾನಂದ್‌ಗೆ ಹೊಲ ಗದ್ದೆಗಳ ಪರಿಚಯವನ್ನು ಮಾಡಿಸಲಾಗುತ್ತಿದೆ. ಚೆಸ್ ಆಡುತ್ತಾನೆ, ಸೈಕ್ಲಿಂಗ್ ಮಾಡುತ್ತಾನೆ, ತನಗಿಂತ ಹಿರಿಯ ವಿದ್ಯಾರ್ಥಿಗಳಿಗೂ ಸಹ ಇಂಗ್ಲಿಷ್, ಗಣಿತ, ಕನ್ನಡ ಭಾಷೆಯನ್ನು ಸಹ ಆಟವಾಡಿಕೊಂಡೆ ಹೇಳಿಕೊಡುವುದು ಇವನ ಮತ್ತೊಂದು ವಿಶೇಷತೆ. ಇಂಗ್ಲಿಷ್ ಮತ್ತು ಕನ್ನಡ ದಿನಪತ್ರಿಕೆ, ಇಂಗ್ಲಿಷ್ ಮತ್ತು ಕನ್ನಡ ಮಕ್ಕಳ ವಾರಪತ್ರಿಕೆಯನ್ನೂ ಓದುತ್ತಾನೆ.
ತಮಟೆ ಸದ್ದಿಗೆ ಹೆಜ್ಜೆ ಹಾಕುವ ಪೋರ :
ಈ ಪುಟ್ಟ ಪೋರನಿಗೆ ತಮಟೆ ಸೌಂಡ್ ಎಂದರೆ ಎಲ್ಲಿಲ್ಲದ ಪ್ರೀತಿ, ತನ್ನೂರಿನ ದೇವಾಲಯದ ಬಳಿ ತಮಟೆ ಬಡಿಯುತ್ತಿರುವ ಸದ್ದು ಕೇಳಿದರೆ ಅಲ್ಲಿಗೆ ಓಡಿ ಹೋಗುವ ದೇವಾನಂದ್ ತಮಟೆ ತಾಳಕ್ಕೆ ಹೆಜ್ಜೆ ಹಾಕುತ್ತಾನೆ. ಯಾವ ಸಂದರ್ಭದಲ್ಲಿಯಾದರೂ ಸರಿ ತಮಟೆ ಸೌಂಡ್ ಬಂದರೆ ದೇವಾಲಯದ ಬಳಿ ನಿಂತಿರುತ್ತಾನೆ, ಇವನನ್ನು ನರ್ಸರಿ ನ್ಯಾಷನಲ್ ಇನ್ಸಿಟ್ಯೂಟ್ ಓಪನ್ ಯೂನಿವರ್ಸಿಟಿ(ರಾಷ್ಟ್ರೀಯ ಮುಕ್ತ ವಿದ್ಯಾಲಯ)ಯಲ್ಲಿ ಒಂದನೇ ತರಗತಿಯಿಂದ ಮನೆಯಲ್ಲಿ ಕಲಿಕೆ ಮುಂದುವರೆಸುವುದಾಗಿ ಇವರ ಚಿಕ್ಕಪ್ಪ ಸಂತೋಷ್‌ಗೌಡ ಹೇಳುತ್ತಾರೆ.
ನನ್ನ ಮಗನಿಗೆ ಚಿಕ್ಕಪ್ಪನೇ ಎಲ್ಲ:
ದೇವಾನಂದನ್ ನನ್ನ ಮಗ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ನನ್ನ ಪತ್ನಿ ದಿವ್ಯಾ ಸೇರಿದಂತೆ ನಾವುಗಳು ಯಾರೂ ಒಂದು ಪರ್ಸೆಂಟ್ ಕೂಡ ಜವಾಬ್ದಾರಿ ತೆಗೆದುಕೊಂಡಿಲ್ಲ, ಏಕೆಂದರೆ ಅವನ ಓದು ಎಲ್ಲವನ್ನೂ ನನ್ನ ತಮ್ಮ ಸಂತೋಷ್ ನೋಡಿಕೊಳ್ಳುತ್ತಿದ್ದಾರೆ, ಮಗ ಏನು ಓದುತ್ತಿದ್ದಾನೇ ಎಂಬುದೇ ವ್ಯವಸಾಯ ಮಾಡುತ್ತಿರುವ ನಮಗೆ ಅರಿವಿಲ್ಲ, ಹೀಗಾದರೂ ನನ್ನ ಮಗ ದೊಡ್ಡ ಸ್ಥಾನಕ್ಕೆ ಹೋಗಲಿ ಎಂಬುದೇ ನಮ್ಮ ಆರೈಕೆ, ನನ್ನ ತಮ್ಮನ ಕಾಳಿಜಿಯನ್ನೂ ನೆನಪಿಸಿಕೊಳ್ಳುತ್ತೇವೆ ಬಾಲಕ ದೇವಾನಂದ ತಂದೆ ಸತೀಶ್ ಅವರ ಮನದಾಳದ ಮಾತಾಗಿದೆ.
ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ನನ್ನ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಬಂದರೆ, ಕಳೆದ ಎರಡು ವರ್ಷದಿಂದ ಎಲ್‌ಕೆಜಿ ಯಿಂದ 5ನೇ ತರಗತಿ ಮಕ್ಕಳಿಗೋಸ್ಕರ ಪಠ್ಯಪುಸ್ತಕದ ಯೋಜನೆ ರೂಪಿಸಿರುವುದನ್ನು ಧಾರೆ ಎರೆಯುವೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ನನ್ನ ಸೇವೆ ಇರಲಿದೆ. ಜೊತೆಗೆ ಅಲ್ಲಿನ ಶಿಕ್ಷಕರಿಗೂ ಸಹ ಉಚಿತವಾಗಿ ತರಬೇತಿ ನೀಡುತ್ತೇನೆ, ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಸರ್ಕಾರ ಅನುವು ಮೊಡಿಕೊಡಲಿ. ಕಲಿಕಾ ವಿಧಾನದ ಬಗ್ಗೆ ಫೋಷಕರಿಗೆ ಮಾಹಿತಿ ಬೇಕಿದ್ದರೆ ಮೊ.9036348290 ಸಂಪರ್ಕಿಸಬಹುದು ಎನ್ನುತ್ತಾರೆ ಭೂತನ ಹೊಸೂರು ಸಂತೋಷ್‌ಗೌಡ.












Click it and Unblock the Notifications