ಟ್ಯೂಶನ್‌ಗೆ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ, ಕೊಲೆ ಆರೋಪ: ಟ್ಯೂಶನ್ ಉಸ್ತುವಾರಿ ಬಂಧನ
ಮಳವಳ್ಳಿ, ಅಕ್ಟೋಬರ್ 12 : ಟ್ಯೂಶನ್‌ಗೆಂದು ಬಂದಿದ್ದ 10 ವರ್ಷದ ವಿದ್ಯಾರ್ಥಿಯನ್ನು ಟ್ಯೂಶನ್ ಸೆಂಟರ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ಕೊಲೆ ಮಾಡಿ ಶವವನ್ನು ನಿರ್ಮಾಣ ಹಂತದ ಕಟ್ಟದ ನೀರಿನ ಸಂಪ್‌ನಲ್ಲಿ ಹಾಕಿದ್ದ ಘಟನೆ ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನಿವಾಸಿಗಳಾದ ಅಶ್ವಿನಿ ಮತ್ತು ಸುರೇಶ್ ಕುಮಾರ್ ಎಂಬ ದಂಪತಿಯ ಪುತ್ರಿ ಕೊಲೆಯಾದ ವಿದ್ಯಾರ್ಥಿನಿ. ತಾಲ್ಲೂಕಿನ ನೆಲಮಾಕನಹಳ್ಳಿ ಮೂಲದ ಕಾಂತರಾಜು(52) ಎಂಬಾತನ ಮೇಲೆ ಕೊಲೆ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಪಟ್ಟಣ ಪೋಲಿಸರು ಬಂಧಿಸಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆಗೆ ಟ್ಯೂಶನ್‌ಗೆಂದು ಮನೆಯಿಂದ ಹೋದವಳು, ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಗಾಬರಿಯಾದ ಪೋಷಕರು ಟ್ಯೂಶನ್ ಸೆಂಟರ್ ಸೇರಿದಂತೆ ಅಕ್ಕಪಕ್ಕದಲ್ಲಿ ವಿಚಾರಿಸಿದ್ದರು. ಎಷ್ಟು ಹುಡುಕಿದರೂ ಬಾಲಕಿ ಪತ್ತೆಯಾಗಿದ ಕಾರಣ ಪೋಷಕರು ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಮೈಸೂರು ರಸ್ತೆಯ ಮಯೂರ ಬೇಕರಿ ಹಿಂಭಾಗ ನಾಗರಾಜು ಎಂಬುವವರ ನಿರ್ಮಾಣ ಹಂತದ ಮನೆಯ ಕಟ್ಟಡದ ನೀರಿನ ಸಂಪಿನಲ್ಲಿ ಬಾಲಕಿ ಶವ ಬಿದ್ದಿರುವುದನ್ನು ಮಾಲೀಕ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪೋಲಿಸರು ನೀರಿನ ಸಂಪ್ ನಲ್ಲಿ ಪರಿಶೀಲನೆ ನಡೆಸಿದಾಗ ಅದು ಮಂಗಳವಾರ ಕಾಣೆಯಾಗಿದ್ದ ವಿದ್ಯಾರ್ಥಿನಿ ಎಂಬುದು ಖಚಿತವಾಗಿದೆ.

ಪೊಲೀಸರ ಜೊತೆಯಲ್ಲಿ ಬಾಲಕಿಗಾಗಿ ಹುಡುಕಾಟದ ನಾಟಕ
ಪೋಷಕರು ದೂರು ನೀಡಿದ ಹಿನ್ನಲೆ ಪೊಲೀಸರು ಬಾಲಕಿಗಾಗಿ ಹುಡುಕಾಟ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರ ಜೊತೆಯಲ್ಲಿಯೇ ಬಂಧಿತನಾಗಿರುವ ಕಾಂತರಾಜು ವಿದ್ಯಾರ್ಥಿನಿಯನ್ನು ಹುಡುಕಾಟ ನಡೆಸಿಡಿದ್ದಾನೆ. ಜೊತೆಗೆ ಪೋಷಕರಿಗೆ ಕರೆ ಮಾಡಿ ನಿಮ್ಮ ಪುತ್ರಿ ಇನ್ನೂ ಮನಗೆ ಬಂದಿಲ್ವ ಎಂದು ವಿಚಾರಿಸಿದ್ದಾನೆ. ಜೊತೆಗೆ ಪೋಷಕರ ಜೊತೆಯಲ್ಲಿಯೇ ಸಿಸಿ ಕ್ಯಾಮರಾ ಪರಿಶೀಲನೆಯಲ್ಲೂ ಭಾಗಿಯಾಗಿದ್ದ ಆತ ಪೊಲೀಸರಿಗೆ ಯಾರೋ ಮೂರು ಮಂದಿ ಯುವಕರು ಕುಳಿತಿದ್ದರು ಮಾಹಿತಿ ನೀಡಿ ಪ್ರಕರಣ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ

ಮೊಬೈಲ್ ಕರೆ ಆಧಾರ
ಬಾಲಕಿ ಶವ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಸಿಪಿಐ ಶ್ರೀಧರ್, ರಾಜೇಶ್, ಪಿಎಸ್‌ಐಗಳಾದ ವಿಸಿ ಅಶೋಕ್, ರವಿಕುಮಾರ್, ಶೇಷಾದ್ರಿ ಒಳಗೊಂಡ ಪೊಲೀಸರ ತಂಡ ಟ್ಯೂಶನ್ ಸೆಂಟರ್‌ಗೆ ಹೊರಗಿನಿಂದ ಯಾರಾದರೂ ಯುವಕರು ಬರುತ್ತಿದ್ದರೆ ಎಂದು ಅಕ್ಕಪಕ್ಕದವರನ್ನು ವಿಚಾರಿಸಿದಾಗ ಯಾರು ಬರುವುದಿಲ್ಲ ಎಂದು ಸ್ವಷ್ಟಪಡಿಸಿದ ನಂತರ ಜೊತೆಯಲ್ಲಿಯೇ ಇದ್ದ ಕಾಂತರಾಜು ಎಂಬುವವರ ಸಂಶಯ ಗೊಂಡಿದ್ದಾರೆ.
ವಿಚಾರಣೆಗೆ ಒಳಪಡಿಸಿದಾಗ ಕಾಂತರಾಜು ಬಾಲಕಿಗೆ ಬೆಳಗ್ಗೆ 11 ಗಂಟೆಗೆ ಟ್ಯೂಶನ್‌ಗೆ ಬರುವಂತೆ ವಿದ್ಯಾರ್ಥಿನಿಗೆ ಕರೆ ಮಾಡಿ ಮಾತನಾಡಿರುವುದು ರೆಕಾರ್ಡ್ ಆಗಿರುವುದು ಬೆಳಕಿಗೆ ಬಂದಿದೆ.

ಆರೋಪಿಗೆ ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯ
ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಕುರುಬರ ಸಂಘ, ಜನವಾದಿ ಮಹಿಳಾ ಸಂಘಟನೆ, ಕೃಷಿಕೂಲಿಕಾರರ ಸಂಘ, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬಾಲಕಿ ಸಂಬಂಧಿಕರು ಪ್ರತಿಭಟನೆ ನಡೆಸಿ ಕೃತ್ಯವನ್ನು ಖಂಡಿಸಿದರು. ಆರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಕಾನೂನು ಸುವ್ಯವಸ್ಥೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ವಿದ್ಯಾರ್ಥಿನಿ ಮೃತ ದೇಹ ಪಟ್ಟಣಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂತಾಪ ಸೂಚಿಸಿದರು. ಪಟ್ಟಣದ ಅನಂತರಾಮಯ್ಯ ವೃತ್ತಕ್ಕೆ ಪಾರ್ಥಿವ ಶರೀರ ತರುತ್ತಿದ್ದಂತೆ ಮೃತರ ಕುಟುಂಬಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿ, ಕಂದಮ್ಮನ ಮೇಲೆ ಇಂತಹ ಕೃತ್ಯ ನಡೆದಿರುವುದು ಖಂಡನೀಯ, ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ಆಢಳಿತ ಸಂಪೂರ್ಣ ಕುಸಿದಿದೆ, ಎಲ್ಲೆಲ್ಲೂ ಗಾಂಜಾ ಮಾರಾಟವಾಗುತ್ತಿದೆ, ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಎತೇಚ್ಚವಾಗಿ ನಡೆಯುತ್ತಿದೆ, ಪಟ್ಟಣದ ಲಾಡ್ಜ್‌ಗಳಲ್ಲಿ ದಂದೆಗಳು ನಡೆಯುತ್ತಿವೆ, ಇಲ್ಲಿನ ಪುರಠಾಣೆಯಲ್ಲಿರುವ ಇನ್ಸ್‌ಪೆಕ್ಟರ್‌ರೊಬ್ಬರು ಗ್ರಾಮಾಂತರ ಠಾಣೆಗೆ ಗ್ರಾಮಾಂತರ ಠಾಣೆಯಿಂದ ಪುರ ಠಾಣೆಗೆ ಹೀಗೆ ಮೂರ್ನಾಲ್ಕು ಬಾರಿ ವರ್ಗಾವಣೆಯಾಗಿ ಇಲ್ಲೇ ಬೀಡು ಬಿಟ್ಟಿದ್ದಾರೆ. ಈ ಬಾರಿ ವರ್ಗವಣೆ ಮಾಡಿಸಿಕೊಂಡು ಪಟ್ಟಣ ಪುರ ಠಾಣೆಗೆ ಬಂದು ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ, ದಯವಿಟ್ಟು ತಾಲ್ಲೂಕನ್ನು ಬಿಟ್ಟು ಎಲ್ಲಿಗಾದರೂ ಹೋಗಲಿ ಎಂದು ಪರೋಕ್ಷವಾಗಿ ಇನ್ಸ್‌ಪೆಕ್ಟರ್ ರಾಜೇಶ್ ವಿರುದ್ದ ಕಿಡಿಕಾರಿದರು.












Click it and Unblock the Notifications