ಮಂಜಿನ ನಗರಿ ಚುನಾವಣಾ ಅಖಾಡ; ಮಂತರ್ ಗೌಡ ಗೆಲುವು ಸುಲಭವೇ?
ಮಡಿಕೇರಿ, ಏಪ್ರಿಲ್ 21; ಕೊಡಗು ಜಿಲ್ಲೆಯಲ್ಲಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದೆ. ಮಡಿಕೇರಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಾ. ಮಂತರ್ ಗೌಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ. ಮಂಜು ಪುತ್ರ ಡಾ. ಮಂತರ್ ಗೌಡ. ಎ. ಮಂಜು ಈ ಬಾರಿಯ ಚುನಾವಣೆಗೆ ಅರಕಲಗೂಡು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ.
ನಾಮಪತ್ರ ಸಲ್ಲಿಕೆ ಮಾಡಿರುವ ಡಾ. ಮಂತರ್ ಗೌಡ ಚುನಾವಣೆ ಗೆಲ್ಲಲು ತಯಾರಿ ನಡೆಸಿದ್ದಾರೆ. ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ಮನೆ-ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಅಪ್ಪಚ್ಚು ರಂಜನ್ ಎದುರಾಳಿ. ನಾಪಂಡ ಮುತ್ತಪ್ಪ ಜೆಡಿಎಸ್ ಅಭ್ಯರ್ಥಿ.

ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳು, ಅಭಿವೃದ್ಧಿ ಕೆಲಸಗಳು ಹಾಗೂ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಡಾ. ಮಂತರ್ ಗೌಡ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ಯುವ ನಾಯಕ ಜನರ ಸೇವೆ ಮಾಡಲು ಒಂದೇ ಒಂದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.
2008ರ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಮಡಿಕೇರಿ ಕ್ಷೇತ್ರದಲ್ಲಿ ಬಿಜೆಪಿ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದೆ. ಕೊಡವ ಸಮುದಾಯಕ್ಕಿಂತ ಗೌಡ, ಇನ್ನಿತರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರವಿದು. ಸೋಮವಾರಪೇಟೆ, ಕುಶಾಲನಗರ ತಾಲೂಕು ಮತ್ತು ಮಡಿಕೇರಿ ತಾಲೂಕಿನ ಭಾಗಶಃ ಪ್ರದೇಶಗಳನ್ನು ಮಡಿಕೇರಿ ಒಳಗೊಂಡಿದೆ. ಸೋಮವಾರಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ಆರ್. ಗುಂಡೂರಾವ್ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಎದುರಾಳಿಗಳು, ಪ್ರತಿತಂತ್ರ; ಮಡಿಕೇರಿ ಕ್ಷೇತ್ರವನ್ನು ಕೊಡವ ಸಮುದಾಯದ ಬಿಜೆಪಿಯ ಅಪ್ಪಚ್ಚು ರಂಜನ್ ಪ್ರತಿನಿಧಿಸುತ್ತಾ ಬಂದಿದ್ದಾರೆ. ಐದು ಬಾರಿ ಬಿಜೆಪಿಗೆ ಬೆಂಬಲ ನೀಡಿರುವ ಜನರು ಈ ಬಾರಿ ಹೊಸಬರಿಗೆ ಅವಕಾಶ ನೀಡುವ ನಿರೀಕ್ಷೆ ಇದ್ದು, ಇದು ಮಂತರ್ ಗೌಡರ ಗೆಲುವಿಗೆ ಕಾರಣವಾಗಬಹುದು ಎಂಬುದು ಲೆಕ್ಕಾಚಾರವಾಗಿದೆ. ವೈದ್ಯರಾಗಿರುವ ಮಂತರ್ ಗೌಡ ಈ ಬಾರಿ ಗೆದ್ದು ಕ್ಷೇತ್ರದ ಜನರ ಸೇವೆ ಮಾಡಬೇಕು ಎಂದು ಎದುರು ನೋಡುತ್ತಿದ್ದಾರೆ.

ಮಡಿಕೇರಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಸುಮಾರು 7 ಮಂದಿ ಆಕಾಂಕ್ಷಿಗಳಿದ್ದರು. ಆ ಪೈಕಿ ಬಿ. ಎ. ಜೀವಿಜಯ, ಎಚ್. ಎಸ್. ಚಂದ್ರಮೌಳಿ, ಡಾ. ಮಂತರ್ ಗೌಡ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಲೆಕ್ಕಾಚಾರ ಹಾಕಿದ ಪಕ್ಷದ ನಾಯಕರು ಮಂತರ್ ಗೌಡರಿಗೆ ಟಿಕೆಟ್ ನೀಡಿದ್ದಾರೆ. ಕ್ಷೇತ್ರದಲ್ಲಿ ಅರೆಭಾಷೆ ಗೌಡರು ಸೇರಿದಂತೆ ಇತರೆ ಸಮುದಾಯದವರು ಹೆಚ್ಚಿದ್ದು, ಮಂತರ್ ಗೌಡರನ್ನು ಕಣಕ್ಕಿಳಿಸಿದರೆ, ಅಧಿಕ ಮತಗಳನ್ನು ಸೆಳೆಯಬಹುದು ಎಂಬುದು ಪಕ್ಷದ ಲೆಕ್ಕಾಚಾರವಾಗಿದೆ.
ಡಾ. ಮಂತರ್ ಗೌಡ ಹೊರಗಿನ ಅಭ್ಯರ್ಥಿ ಎಂದು ಬಿಜೆಪಿ ಟೀಕೆ ಮಾಡುತ್ತಿದೆ. ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದು, "ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಯಾರನ್ನೂ ಸೋಲಿಸುವುದು ನಮ್ಮ ಉದ್ದೇಶವಲ್ಲ. ನಾವು ಗೆಲ್ಲುವುದು ನಮ್ಮ ಗುರಿ. ಈ ಬಾರಿ ಗೆಲುವು ಖಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಹೊರಗಿನ ಅಭ್ಯರ್ಥಿ ಎಂದು ಬಿಜೆಪಿ ಅಭ್ಯರ್ಥಿ ನನ್ನನ್ನು ಟೀಕಿಸುತ್ತಾರೆ. ಆದರೆ ಪೂರ್ವಿಕರು 5 ಶತಮಾನದಿಂದ ಕೊಡಗು ಜಿಲ್ಲೆಯಲ್ಲಿಯೇ ವಾಸವಾಗಿದ್ದಾರೆ. ಇಲ್ಲಿ ನಾವು 90 ವರ್ಷ ಹಳೆಯದಾದ ಮನೆಯಲ್ಲಿ ವಾಸವಿದ್ದೇವೆ" ಎಂದು ಡಾ. ಮಂತರ್ ಗೌಡ ಹೇಳಿದ್ದಾರೆ.
"ನನ್ನ ಪತ್ನಿ ದಿವ್ಯಾ ಸಹ ಮಡಿಕೇರಿಯವರೇ. ಸಮಾಜಮುಖಿ ಕೆಲಸಗಳು ಮತ್ತು ಪಕ್ಷದ ಅಭಿವೃದ್ಧಿ ಕೆಲಸಗಳನ್ನು ಹೇಳಿ ಮತ ಯಾಚಿಸುತ್ತಿದ್ದೇನೆ. ಖಂಡಿತಗವಾಗಿಯೂ ಕ್ಷೇತ್ರದ ಜನ ನನ್ನೊಂದಿಗೆ ಇದ್ದಾರೆ. ನನ್ನನ್ನು ಬಹುಮತದಿಂದ ಆಶೀರ್ವದಿಸಿ, ಅವರ ಸೇವೆಗೆ ಅವಕಾಶ ನೀಡುತ್ತಾರೆ" ಎಂಬ ವಿಶ್ವಾಸವಿದೆ ಎಂದರು ಮಂತರ್ ಗೌಡ ತಿಳಿಸಿದ್ದಾರೆ.












Click it and Unblock the Notifications