ಷಷ್ಠಿಯಂದು ಕೊಡಗಿನ ಬೈರಂಬಾಡಕ್ಕೆ ಭಿಕ್ಷುಕರು ಮುಗಿಬೀಳುವುದೇಕೆ?
ಮಡಿಕೇರಿ, ಡಿಸೆಂಬರ್ 07: ಕಾಫಿ ತೋಟದ ನಡುವಿನ ರಸ್ತೆಯುದ್ದಕ್ಕೂ ಭಿಕ್ಷೆ ಬೇಡುತ್ತಾ ಕುಳಿತಿರುವ ಭಿಕ್ಷುಕರನ್ನು ನೋಡಿದರೆ ಅಚ್ಚರಿಯಾಗಬಹುದು. ನಗರಗಳ ಪ್ರಸಿದ್ಧ ದೇಗುಲಗಳ ಎದುರು ಭಿಕ್ಷುಕರು ಕುಳಿತು ದೇವಸ್ಥಾನಕ್ಕೆ ಬಂದು ಹೋಗುವವರ ಮುಂದೆ ಕೈಯೊಡ್ಡುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಕೊಡಗಿನಂತಹ ಪ್ರದೇಶಗಳಲ್ಲಿ ಅದರಲ್ಲೂ ಕಾಫಿ ತೋಟದ ರಸ್ತೆಯಲ್ಲಿ ಕುಳಿತವರಿಗೆ ಭಿಕ್ಷೆ ಹಾಕುವವರು ಯಾರು? ಎಂಬ ಪ್ರಶ್ನೆ ಮೂಡದಿರದು.
ಭಿಕ್ಷುಕರ ಮುಕ್ತ ನಗರ, ಪಟ್ಟಣ ಮಾಡಬೇಕೆಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ. ಆದರೆ ಭಿಕ್ಷೆ ಬೇಡುವವರ ಸಂಖ್ಯೆ ಮಾತ್ರ ಕಡಿಮೆಯಾದಂತೆ ಕಾಣುತ್ತಿಲ್ಲ. ವಿಕಲಚೇತನರು, ವಯಸ್ಸಾದ ವೃದ್ಧರು ಭಿಕ್ಷೆ ಬೇಡುವುದು ಇದ್ದೇ ಇದೆ. ಆದರೆ ಇತ್ತೀಚೆಗೆ ದುಡಿದು ತಿನ್ನಬಹುದಾದವರೆಲ್ಲರೂ ಭಿಕ್ಷೆ ಬೇಡಲು ಮುಂದಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಕೆಲವೆಡೆ ಹೆತ್ತವರೇ ಮಕ್ಕಳನ್ನು ಭಿಕ್ಷೆ ಬೇಡಲು ಬಿಟ್ಟರೆ ಮತ್ತೆ ಕೆಲವು ಕಡೆಗಳಲ್ಲಿ ಮಗುವನ್ನು ಎತ್ತಿಕೊಂಡು ಮಗುವನ್ನು ತೋರಿಸಿ ಭಿಕ್ಷೆಗಾಗಿ ಕೈಯೊಡ್ಡುವ ಹೆಂಗಸರು ಇಲ್ಲದಿಲ್ಲ.

ಇನ್ನು ಜಾತ್ರೆ, ಪೂಜಾ ಕಾರ್ಯಕ್ರಮಗಳು ನಡೆದಾಗಲೆಲ್ಲ ದೊಡ್ಡ ಮಟ್ಟದಲ್ಲಿ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ. ಇವರೆಲ್ಲರೂ ಹಬ್ಬ, ಜಾತ್ರೆ, ಹೀಗೆ ವಿಶೇಷ ದಿನಗಳ ಸಂದರ್ಭದಲ್ಲಿ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಿ ಅಲ್ಲಿ ಭಿಕ್ಷೆ ಬೇಡಿಕೊಂಡು ಹಿಂತಿರುಗುತ್ತಾರೆ. ಇಂತಹವರ ಪೈಕಿ ದುಡಿದು ತಿನ್ನುವ ಸಾಮರ್ಥ್ಯವಿರುವವರೇ ಹೆಚ್ಚಾಗಿರುವುದು ಬೇಸರದ ಸಂಗತಿಯಾಗಿದೆ. ದೇಗುಲದ ಮುಂದೆ ಜಾತ್ರೆಗಳಲ್ಲಿ ಭಿಕ್ಷೆಗೆ ಕುಳಿತರೆ ಇಷ್ಟವಿದ್ದವರು ಹಾಕುತ್ತಾರೆ. ಇಲ್ಲಿ ಯಾರೂ ಪ್ರಶ್ನೆ ಮಾಡುವುದಿಲ್ಲ. ಹೀಗಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಿ ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ.
ಬೈರಂಬಾಡದಲ್ಲಿ ಮುಗಿ ಬೀಳುವ ಭಿಕ್ಷುಕರು
ಭಿಕ್ಷಾಟನೆ ನಿರ್ಮೂಲನೆ ಬಗ್ಗೆ ಮತ್ತು ಸರ್ಕಾರದ ಯೋಜನೆಗಳು ಬಡವರಿಗಾಗಿಯೇ ಮಾಡಿದ್ದು ಎಂದು ಕೊಚ್ಚಿಕೊಳ್ಳುವವರು ಜಾತ್ರೆಗಳನ್ನು ಹುಡುಕಿಕೊಂಡು ಬರುವ ಭಿಕ್ಷುಕರನ್ನು ನೋಡಿದ ಮೇಲೆಯೂ ಅವರಿಗೊಂದು ವ್ಯವಸ್ಥೆ ಮಾಡಿಕೊಡದಿದ್ದರೆ ಹೇಗೆ? ಇಷ್ಟಕ್ಕೂ ಸರ್ಕಾರದ ಯೋಜನೆಗಳು ಬಡವರಿಗೆ ತಲುಪುತ್ತಿದೆ ಎನ್ನುವುದಾದರೆ ಬಾಯಿ, ಬಾಯಿ ಬಡಿಯುತ್ತಾ, ಕಂಡವರ ಕಾಲಿಗೆ ಬೀಳುತ್ತಾ? ಭಿಕ್ಷುಕರು ಭಿಕ್ಷೆಗಾಗಿ ಗೋಗರೆಯಬೇಕಾ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಸದ್ಯ ಚಿತ್ರದಲ್ಲಿ ನೋಡುತ್ತಿರುವ ದೃಶ್ಯ ಕೊಡಗಿನ ಮೂರ್ನಾಡು ಬಳಿಯಲ್ಲಿರುವ ಬೈರಂಬಾಡ ಎಂಬ ಗ್ರಾಮದ ಕಾಫಿ ತೋಟದ ನಡುವೆ ಇರುವ ಸುಬ್ರಹ್ಮಣ್ಯ ದೇವಾಲಯದಲ್ಲಿ ಷಷ್ಠಿ ಹಿನ್ನಲೆಯಲ್ಲಿ ನಡೆದ ಪೂಜಾ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ ಸಲ್ಲಿಸುವ ಹಿನ್ನಲೆಯಲ್ಲಿ ಕಾಫಿ ತೋಟದ ರಸ್ತೆಯುದ್ಧಕ್ಕೂ ಭಿಕ್ಷೆಗಾಗಿ ಕಾದು ಕುಳಿತಿರುವ ಭಿಕ್ಷುಕರದ್ದಾಗಿದೆ. ಈ ದೇಗುಲಕ್ಕೆ ಷಷ್ಠಿಯಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಕಾಫಿ ತೋಟದ ನಡುವೆ ಇರುವ ದೇಗುಲದಲ್ಲಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ, ದೇವರ ಮೆರವಣಿಗೆ ನಡೆಯುತ್ತದೆ.
ಭಕ್ತರಿಂದ ಭಿಕ್ಷುಕರಿಗೆ ಹಣ, ಅಕ್ಕಿ ವಿತರಣೆ
ದೇವಸ್ಥಾನಕ್ಕೆಂದು ಬರುವ ಭಕ್ತರು ಭಿಕ್ಷೆಯಾಗಿ ನೀಡಲೆಂದೇ ಹಣ, ಅಕ್ಕಿಯನ್ನು ತಂದು ದಾರಿಯುದ್ದಕ್ಕೂ ಕುಳಿತಿರುವ ಭಿಕ್ಷುಕರಿಗೆ ನೀಡುತ್ತಾರೆ. ಹೀಗಾಗಿ ಇಲ್ಲಿ ಭಿಕ್ಷೆ ಬೇಡಲೆಂದೇ ದೂರದ ಊರುಗಳಿಂದ ಬಂದು ಸಂಜೆಯ ತನಕ ಕುಳಿತು ಒಂದಷ್ಟು ಹಣ, ಇನ್ನಿತರ ಪದಾರ್ಥಗಳೊಂದಿಗೆ ಭಿಕ್ಷುಕರು ಹಿಂತಿರುಗುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು ಮುಂದುವರೆಯುತ್ತಲೇ ಇದೆ. ಸಾಮಾನ್ಯವಾಗಿ ಸುಬ್ರಹ್ಮಣ್ಯ ಷಷ್ಠಿಯನ್ನು ಕೊಡಗಿನ ಬಹುತೇಕ ದೇವಾಲಯಗಳಲ್ಲಿ ಅದ್ಧೂರಿಯಾಗಿ ನಡೆಸಲಾಗುತ್ತಿದ್ದು, ಬೈರಂಬಾಡ ಮತ್ತು ಹರಿಹರದ ಸುಬ್ರಹ್ಮಣ್ಯ ದೇಗುಲಗಳು ಮಹತ್ವ ಹೊಂದಿವೆ.
ಉಳಿದಂತೆ ಜಿಲ್ಲೆಯಲ್ಲಿರುವ ಇತರೆ ಸುಬ್ರಹ್ಮಣ್ಯ ದೇಗುಲಗಳಲ್ಲಿ ಪೂಜೆ ಪುರಸ್ಕಾರ, ಸೇವೆಗಳು ಬೈರಂಬಾಡ ಮತ್ತು ಹರಿಹರದಲ್ಲಿ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇಲ್ಲಿ ದೇವರಿಗೆ ಹರಕೆಯಾಗಿ ಭಕ್ತರು ಮುಡಿನೀಡುತ್ತಾರೆ. ಒಟ್ಟಾರೆ ಬೈರಂಬಾಡದಲ್ಲಿ ಷಷ್ಠಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಸಾಮಾನ್ಯ ದಿನಗಳಲ್ಲಿ ಹೆಚ್ಚಿನ ಭಕ್ತರಿಲ್ಲದೆ ಪ್ರಶಾಂತವಾಗಿ ಕಂಗೊಳಿಸುವ ಸ್ಥಳದಲ್ಲಿ ಷಷ್ಟಿಯಂದು ನೂಕು ನುಗ್ಗಲು ಏರ್ಪಡುವುದು, ಹಾಗೆಯೇ ಭಿಕ್ಷುಕರ ದಂಡು ನೆರೆಯುವುದು ಕೂಡ ವಿಶೇಷವಾಗಿದೆ.












Click it and Unblock the Notifications