ಕೊಡಗಿನ ನಾಟಿ ಓಟದ ಇತಿಹಾಸ ಬಲು ರೋಚಕ: ಏನಿದು ನಾಟಿ ಓಟ?

ಮಡಿಕೇರಿ, ಜುಲೈ 31: ಕೊಡಗಿನಲ್ಲೀಗ ಒಂದೆಡೆ ಮಳೆ ಸುರಿಯುತ್ತಿದ್ದರೆ, ಇನ್ನೊಂದೆಡೆ ಭತ್ತದ ನಾಟಿ ಕಾರ್ಯವೂ ಭರದಿಂದ ಸಾಗಿದೆ. ಇದರ ನಡುವೆ ಸಾಂಪ್ರದಾಯಿಕವಾಗಿ ಬಂದಿರುವ ನಾಟಿ ಓಟವೂ ನಡೆಯುತ್ತಿದೆ. ಇಂದಿನ ಕೆಸರುಗದ್ದೆ ಕ್ರೀಡಾಕೂಟಕ್ಕೆ ಸಾಂಪ್ರದಾಯಿಕವಾಗಿ ನಡೆದು ಬಂದಿರುವ ನಾಟಿ ಓಟವೇ ತಳಹದಿ ಎಂದರೆ ತಪ್ಪಾಗಲಾರದು. ಹಾಗಾದರೆ ಏನಿದು ನಾಟಿ ಓಟ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ಶತ, ಶತಮಾನಗಳ ಹಿಂದಕ್ಕೆ ಹೋಗ ಬೇಕಾಗುತ್ತದೆ.

ನಾಟಿ ಓಟದ ಬಗ್ಗೆ ಇತಿಹಾಸದ ಪುಟಗಳನ್ನು ತಿರುವಿದರೆ, ಇದು ರಾಜಮಹಾರಾಜರ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತೆಂದೂ ಹೇಳಲಾಗುತ್ತಿದೆ. ಆಗ ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ರಾಜರು ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರಂತೆ. ಆ ಕಾಲದಲ್ಲಿ ಈಗಿನಂತೆ ಕೆಸರುಗದ್ದೆ ಕ್ರೀಡೆಯ ಭರಾಟೆ ಇರಲಿಲ್ಲ. ಜೊತೆಗೆ ಕೆಸರಿನಲ್ಲಿ ಆಟವಾಡಿ ಸಂಭ್ರಮ ಪಡಲು ಸಮಯವೂ ಇರಲಿಲ್ಲ. ಇದಕ್ಕೆ ಕಾರಣವೂ ಇತ್ತು. ಆಗಿನ ಕಾಲದಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು.

What Is The Speciality Of Kodagu Nati Ota In Monsoon Season

ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರೆಯುತ್ತಿರಲಿಲ್ಲ. ಆದ್ದರಿಂದ ಆಯಾ ಗ್ರಾಮದ ಕೆಲವು ಕುಟುಂಬಗಳು ನಡೆಸುತ್ತಿದ್ದ ನಾಟಿ ಓಟದಲ್ಲಿ ಕೆಲವರು ಪಾಲ್ಗೊಂಡು ಓಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರೆ ಮತ್ತೆ ಕೆಲವರು ಅದನ್ನು ನೋಡಿ ಮನೋರಂಜನೆ ಪಡೆಯುತ್ತಿದ್ದರು. ಒಟ್ಟಾರೆ ಹೇಳಬೇಕೆಂದರೆ ಆ ದಿನಗಳಲ್ಲಿ ಈ ನಾಟಿ ಓಟ ಮಣ್ಣಿನ ಮಕ್ಕಳ ಪಾಲಿಗೊಂದು ಓಲಂಪಿಕ್ಸ್ ಆಗಿತ್ತು.

ದೊಡ್ಡನಾಟಿಯಂದು ನಾಟಿ ಓಟದ ಸಂಭ್ರಮ

ಕೊಡಗಿನ ಮಟ್ಟಿಗೆ ಭತ್ತದ ನಾಟಿ ಕೆಲಸ ಕೂಡ ಒಂದು ರೀತಿಯ ಸಂಭ್ರಮ ಹಾಗೂ ಕಠಿಣವಾದ ಕೆಲಸವಾಗಿತ್ತು. ಆಧುನಿಕ ಉಪಕರಣಗಳು ಇರಲಿಲ್ಲ ಎತ್ತುಗಳಿಂದಲೇ ಉಳುಮೆ ಮಾಡಿ ಸುರಿಯುವ ಮಳೆಯಲ್ಲೇ ನಾಟಿ ಮಾಡಬೇಕಿತ್ತು. ಈ ನಾಟಿ ಕೆಲಸ ಒಂದೆರಡು ದಿನಕ್ಕೆ ಮುಗಿಯುತ್ತಿರಲಿಲ್ಲ ತಿಂಗಳಾನುಗಟ್ಟಲೆ ನಡೆಯುತ್ತಿತ್ತು. ಹೆಚ್ಚಿನವರು ಚಿಕ್ಕಗದ್ದೆಗಳಲ್ಲಿ ನಾಟಿ ನೆಟ್ಟು ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆ ನಾಟಿಗೆ ಹೆಚ್ಚಿನ ಜನ ಸೇರುತ್ತಿದ್ದರು. ಜೊತೆಗೆ ನಾಟಿ ನೆಡಲು ಬರುವವರಿಗೆ ಮಧ್ಯಾಹ್ನ ಬಾಡೂಟವನ್ನು ಏರ್ಪಡಿಸಲಾಗುತ್ತಿತ್ತು(ಇವತ್ತಿಗೂ ಇದೆ). ಇದನ್ನು 'ಕಂಬಳ'ಅಥವಾ ದೊಡ್ಡ ನಾಟಿ ಎಂದು ಕರೆಯುತ್ತಾರೆ.

What Is The Speciality Of Kodagu Nati Ota In Monsoon Season

ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು. ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆಯಾಗಿತ್ತಲ್ಲದೆ, ಮನೋರಂಜನೆಯೂ ಸಿಗುತ್ತಿತ್ತು. ಓಟದಲ್ಲಿ ಗೆದ್ದವನನ್ನು ಊರಿನಲ್ಲಿ 'ಓಟ್ಕಾರ' ಎಂದೇ ಜನ ಗುರುತಿಸುತ್ತಿದ್ದರು. ಆತ ನಾಟಿ ಓಟ ನಡೆಯುವ ಗದ್ದೆಗಳಿಗೆ ತೆರಳಿ ಅಲ್ಲಿ ಓಟದಲ್ಲಿ ಪಾಲ್ಗೊಂಡು ಗಮನಸೆಳೆಯುತ್ತಿದ್ದರೆ, ಮತ್ತೊಂದೆಡೆ ಆತನನ್ನು ಸೋಲಿಸಿ ತಾನು 'ಓಟ್ಕಾರ'ನಾಗಬೇಕೆಂದು ಕೆಲವರು ಪ್ರಯತ್ನಪಡುತ್ತಿದ್ದರು.

ನಾಟಿ ಓಟಕ್ಕೆ ಬಂತು ಹೊಸ ಮೆರಗು

ಸಂಪರ್ಕ ಸಾಧನವೇ ಇಲ್ಲದ ಕಾಲದಲ್ಲಿ ನಾಟಿ ಓಟವನ್ನು ವೀಕ್ಷಿಸಲು ಸುತ್ತಮುತ್ತಲಿನ ನೂರಾರು ಮಂದಿ ಸೇರುತ್ತಿದ್ದರು. ಅವರೆಲ್ಲರೂ ಗದ್ದೆ ಏರಿ ಮೇಲೆ ನಿಂತು ಓಡುವ ಕ್ರೀಡಾ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗೆ ನಡೆಯುತ್ತಿದ್ದ ನಾಟಿ ಓಟ ಕುಟುಂಬ, ಗ್ರಾಮಮಟ್ಟದಲ್ಲಿಯೇ ನಡೆದು ಹೋಗುತ್ತಿತ್ತು. ಅದಕ್ಕೆ ಸ್ಥಳೀಯರ ಪ್ರೋತ್ಸಾಹ ಬಿಟ್ಟರೆ ಮತ್ತೇನು ಇರಲಿಲ್ಲ. ಇಂತಹ ನಾಟಿ ಓಟಗಳು ಕೊಡಗಿನಲ್ಲಿ ಅಲ್ಲಲ್ಲಿ ನಡೆಯುತ್ತಿತ್ತಾದರೂ, ನಾಟಿ ಓಟಕ್ಕೆ ಹೆಚ್ಚಿನ ಪ್ರಚಾರ ಮತ್ತು ಮನ್ನಣೆ ದೊರೆತಿದ್ದು ಮಡಿಕೇರಿ ಸಮೀಪದ ಕಗ್ಗೋಡ್ಲುವಿನ ಸಿ.ಬಿ.ಬೋಪಯ್ಯ ಅವರ ಗದ್ದೆಯಲ್ಲಿ ಎಂದರೆ ತಪ್ಪಾಗಲಾರದು.

What Is The Speciality Of Kodagu Nati Ota In Monsoon Season

ಇಲ್ಲಿನ ವಿಶಾಲಗದ್ದೆಯಲ್ಲಿ ನಾಟಿ ಓಟ ಸದ್ದಿಲ್ಲದೆ ಗ್ರಾಮ ಮಟ್ಟದಲ್ಲಿ ನಡೆಯುತ್ತಿತ್ತಾದರೂ ಅದಕ್ಕೆ ಮೆರಗು ನೀಡುವ ಕೆಲಸವನ್ನು ಲಯನ್ಸ್ ಕ್ಲಬ್, ಕೊಡಗು ಪೊಲೀಸ್ ಇಲಾಖೆ ಪ್ರಾಯೋಜಕತ್ವ ನೀಡುವ ಮೂಲಕ ಮಾಡಿತು. ಮೂರ್ನಾಲ್ಕು ದಶಕಗಳ ಹಿಂದೆ ಪ್ರತಿ ವರ್ಷದ ಸ್ವಾತಂತ್ರ್ಯೋತ್ಸವದ ಹಿಂದಿನ ಶನಿವಾರ ಮಧ್ಯಾಹ್ನ ನಾಟಿ ಓಟ ನಡೆಸಲಾಗುತ್ತಿತ್ತಲ್ಲದೆ, ವಿಜೇತರಿಗೆ ಸ್ವಾತಂತ್ರ್ಯೋತ್ಸವದ ದಿನದಂದು ಮಡಿಕೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತಿತ್ತು.

ಇದು ಕೆಲವು ವರ್ಷಗಳ ಕಾಲ ಹೀಗೆಯೇ ನಡೆಯುತ್ತಾ ಬಂತಾದರೂ ಇದಕ್ಕೆ ಹೊಸರೂಪ ನೀಡಿದ್ದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಯೂತ್ ಹಾಸ್ಟೆಲ್ ಮಡಿಕೇರಿ ಘಟಕ. ಇವತ್ತು ನಾಟಿ ಓಟ ಸಾಂಪ್ರದಾಯಿಕವಾಗಿಯೇ ಉಳಿದು ಹೋಗಿದ್ದು ಕೆಸರುಗದ್ದೆ ಕ್ರೀಡಾಕೂಟಗಳು ಮುನ್ನಲೆಗೆ ಬಂದಿವೆ. ಹಾಗಾಗಿ ಜಿಲ್ಲೆಯಾದ್ಯಂತ ಕೆಸರುಗದ್ದೆ ಕ್ರೀಡಾಕೂಟಗಳು ನಡೆಯುತ್ತಿವೆ. ಆದರೆ ಇದಕ್ಕೆಲ್ಲ ಮೂಲ ಮಾತ್ರ ನಾಟಿ ಓಟವೇ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+