Kodagu: ಕೊಡಗಿನಲ್ಲಿ ಮಳೆಗಾಲದ ಆರೋಗ್ಯಕಾರಿ ತಿನಿಸು ಯಾವುದು ಗೊತ್ತಾ?
ಮಡಿಕೇರಿ, ಜುಲೈ 31: ಕೊಡಗಿನಲ್ಲಿ ಕಕ್ಕಡ ಮಾಸದಲ್ಲಿ ನಿರೀಕ್ಷೆಗೂ ಮೀರಿ ಮಳೆ ಸುರಿಯುವುದು ಮಾಮೂಲಿಯಾಗಿದೆ. ಹಾಗೆಂದು ಮಳೆಗಾಳಿಗೆ ಕೈಕಟ್ಟಿ ಕೂರದೆ ಜನ ತಮ್ಮ ದೈನಂದಿನ ಚಟುವಟಿಕಗಳನ್ನು ಚಾಚೂ ತಪ್ಪದೆ ಮಾಡುವುದು ವಿಶೇಷವಾಗಿದೆ. ಇದೇ ಸಮಯದಲ್ಲಿ ಮಳೆಗಾಳಿಗೆ ಮೈಕೈ ಥರಗುಟ್ಟುತ್ತದೆ. ದೇಹ ಉಷ್ಣಾಂಶ ಕೇಳುತ್ತದೆ. ಸೇವಿಸುವ ಕಾಫಿಯಿಂದ ಆರಂಭವಾಗಿ ಊಟದವರೆಗೆ ಬಿಸಿಯಾಗಿದ್ದರೆ ಮಾತ್ರ ಖುಷಿಕೊಡುತ್ತದೆ. ಹೀಗಾಗಿಯೇ ಮಳೆಗಾಲದಲ್ಲಿ ನಿಸರ್ಗದತ್ತ ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಸೇವಿಸುವುದು ಇಲ್ಲಿಯ ರೂಢಿಯಾಗಿದೆ.
ಮಳೆಗಾಲದಲ್ಲಿ ದೇಹದ ಉಷ್ಣಾಂಶ ಹೆಚ್ಚಿಸುವ ಪದಾರ್ಥಗಳನ್ನು ನಮ್ಮ ಸುತ್ತಮುತ್ತಲ ಪ್ರಕೃತಿಯಲ್ಲಿಯೇ ದೊರೆಯುವ ಸಸ್ಯ ಸೇರಿದಂತೆ ಇನ್ನಿತರ ಉತ್ಪನ್ನಗಳನ್ನು ಬಳಸಿಕೊಂಡು ಖಾದ್ಯ ತಯಾರಿಸಿ ಸೇವಿಸುವುದು ಇಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಳೆಗಾಲದಲ್ಲಿ ಇಡೀ ವಾತಾವರಣವೇ ತೇವಾಂಶದಿಂದ ಕೂಡಿರುವ ಕಾರಣ ದೇಹವನ್ನು ಬೆಚ್ಚಗಿಟ್ಟು ಶೀತಬಾಧೆಯಿಂದ ತಪ್ಪಿಸಿಕೊಳ್ಳಲು ಸುತ್ತಮುತ್ತ ಹಾಗೂ ಕಾಡುಗಳಲ್ಲಿ ದೊರೆಯುವ ಅಣಬೆ, ಬಿದಿರಿನಿಂದ ದೊರೆಯುವ ಕಣಿಲೆ, ನದಿ, ಹೊಳೆಯಲ್ಲಿ ದೊರೆಯುವ ಏಡಿ, ಕೆಸ ಸೇರಿದಂತೆ ಕೆಲವು ಸೊಪ್ಪುಗಳಿಗೆ ಮಾರುಹೋಗುವುದು ಇಲ್ಲಿನವರಿಗೆ ಅಭ್ಯಾಸವಾಗಿದೆ.

ಹಿಂದೆಯೂ ಇದೇ ರೀತಿ ಮಳೆ ಬರುತ್ತಿತ್ತು. ಆದರೆ ಪ್ರಕೃತಿ ಸಮತೋಲನೆ ಕಾಪಾಡಿಕೊಂಡಿತ್ತು ಜತೆಗೆ ಜನಸಂಖ್ಯೆ ವಿರಳವಾಗಿದ್ದರಿಂದ ಅನಾಹುತ ಕಡಿಮೆ ಇತ್ತು. ಜತೆಗೆ ಮಳೆಗಾಲಕ್ಕೆ ಬೇಸಿಗೆಯಲ್ಲಿಯೇ ಜನ ಸಿದ್ದರಾಗಿಬಿಡುತ್ತಿದ್ದರು, ಮಳೆಗಾಲದಲ್ಲಿ ಹೊರಗೆ ಹೆಚ್ಚಾಗಿ ಓಡಾಡದೆ ಇರಲೆಂದೇ ಮನೆಯಲ್ಲಿಯೇ ಬೆಚ್ಚಗೆ ಇರಲು ಮಳೆಗಾಲಕ್ಕಾಗಿಯೇ ದಿನಸಿ ಪದಾರ್ಥಗಳನ್ನು ಶೇಖರಿಸಿಟ್ಟುಕೊಳ್ಳುತ್ತಿದ್ದರು. ಅದರ ಜೊತೆಗೆ ಬಿದಿರು ಮೆಳೆಗಳಿಂದ ಕಣಿಲೆ, ತರಕಾರಿ, ಸೊಪ್ಪುಗಳನ್ನು ಬಳಸುತ್ತಿದ್ದರಲ್ಲದೆ, ಜ್ವರ, ಶೀತವಾದರೆ ಇಲ್ಲಿ ಸಿಗುವ ಸಸ್ಯಗಳಿಂದಲೇ ಕಷಾಯ ತಯಾರಿಸಿ ಕುಡಿದು ಕಾಯಿಲೆ ವಾಸಿ ಮಾಡಿಕೊಳ್ಳುತ್ತಿದ್ದರು.
ಮಳೆಗಾಲದಲ್ಲಿ ಕಣಿಲೆಗೆ ಬೇಡಿಕೆ
ಮಳೆಗಾಲದಲ್ಲಿ ಬಿದಿರಿನಿಂದ ಬರುವ ಮೊಳಕೆ(ಕಣಿಲೆ) ಹೆಚ್ಚಿನ ಜನರ ಮುಖ್ಯ ತರಕಾರಿಯಾಗಿತ್ತು. ಅವತ್ತಿನ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಿ ಧೋ ಎಂದು ಸುರಿಯುತ್ತಿದ್ದರೆ, ನದಿ ದಡದಲ್ಲಿ, ಕಾಡಿನ ನಡುವೆ, ಗದ್ದೆ ಬದಿಯಲ್ಲಿ ಹೀಗೆ ಎಲ್ಲೆಂದರಲ್ಲಿ ಬೆಳೆದು ನಿಂತಿದ್ದ ಬಿದಿರು ಮೆಳೆಗಳಿಂದ ಕಣಿಲೆ ಕಡಿದು ತಂದು ತರಕಾರಿಯಾಗಿ ಬಳಸುತ್ತಿದ್ದರು. ಇನ್ನು ಗದ್ದೆ ಬಯಲು, ತೋಟಗಳಲ್ಲಿ ಹಲವು ಬಗೆಯ ಅಣಬೆಗಳು ಮಳೆಗಾಲದಲ್ಲಿ ಹುಟ್ಟುತ್ತಿದ್ದವು. ಇವುಗಳು ಆಕಾರ, ರುಚಿಯಲ್ಲಿಯೂ ವಿಭಿನ್ನವಾಗಿರುತ್ತಿದ್ದವು.

ನೂರಾರು ಬಗೆಯ ಅಣಬೆಗಳು ಅಲ್ಲಲ್ಲಿ ಕಂಡು ಬಂದರೂ ಅವುಗಳಲ್ಲಿ ಕೆಲವೊಂದನ್ನು ಮಾತ್ರ ಸೇವನೆಗೆ ಬಳಸುತ್ತಿದ್ದರು. ಯಾವ ಜಾತಿಯ ಅಣಬೆಯನ್ನು ಸೇವಿಸಬಹುದು ಎಂಬುದು ಇಲ್ಲಿನವರಿಗೆ ಚೆನ್ನಾಗಿ ಗೊತ್ತಿತ್ತು. ಯಾವ ಸಸ್ಯಗಳು ಆರೋಗ್ಯಕ್ಕೆ ಹಿತಕಾರಿಯಾಗಿದ್ದವೋ ಅವುಗಳನ್ನು ಎಲ್ಲರೂ ಸೇವಿಸಲು ಅನುಕೂಲವಾಗುವಂತೆ ಸಂಪ್ರದಾಯ ಮಾಡಿದರು. ಅಷ್ಟೇ ಅಲ್ಲದೆ ಅದನ್ನು ಪಾಲಿಸುತ್ತಾ ಬಂದ್ದಿದ್ದರು ಅದರಂತೆ ಕೊಡಗಿನಲ್ಲಿ ಮಳೆಗಾಲದಲ್ಲಿ ಇಂತಹದ್ದೇ ಆಹಾರವನ್ನು ಸೇವಿಸಬೇಕೆನ್ನುವ ಸಂಪ್ರದಾಯಗಳು ಇವತ್ತಿಗೂ ಇವೆ.
ಸ್ವಾದಿಷ್ಟ ಆಹಾರ ಪದಾರ್ಥ ಪತ್ರೊಡೆ
ಇಷ್ಟೇ ಅಲ್ಲದೆ ಕಾಡು, ತೋಟಗಳಲ್ಲಿ ಮರಗಳ ಬುಡದಲ್ಲಿ ಮತ್ತು ಕೊಂಬೆಗಳಲ್ಲಿ, ನೆಲದಲ್ಲಿ ಅಲ್ಲಲ್ಲಿ ಬೆಳೆಯುವ ಮರ ಕೆಸವನ್ನು ಬಳಸಿ ಪತ್ರೊಡೆ ಮಾಡಿ ತಿನ್ನುತ್ತಿದ್ದರು. ಹೊಳೆ, ನದಿ, ನೀರಿನಾಶ್ರಯವಿರು ಪ್ರದೇಶಗಳಲ್ಲಿ ಬೆಳೆಯುವ ಕೆಸದ ದಂಟು, ಬೇರು, ಚಿಗುರನ್ನು ಸಾರು ಮಾಡುತ್ತಿದ್ದರು. ಇದರಲ್ಲಿ ಉಷ್ಣಾಂಶವನ್ನು ಹೆಚ್ಚಿಸುವ ಗುಣವಿರುವುದರಿಂದ ಇದರ ಬಳಕೆಯನ್ನು ಹೆಚ್ಚು ಮಾಡುತ್ತಿದ್ದರು. ಅವತ್ತಿನಿಂದ ಇವತ್ತಿನವರೆಗೂ ಮಳೆಗಾಲದಲ್ಲಿ ಇದರ ಬಳಕೆಯನ್ನು ಜನ ಮಾಡುತ್ತಾ ಬರುತ್ತಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಯಾವ ಕಾಲದಲ್ಲಿ ಯಾವ ಆಹಾರ ಪದಾರ್ಥವನ್ನು ಸೇವಿಸಬೇಕೆನ್ನುವುದು ಹಿಂದಿನಿಂದಲೂ ರೂಢಿಗತವಾಗಿ ಬಂದಿದೆ. ಕೆಲವು ಪದಾರ್ಥಗಳ ಸೇವನೆಗೆ ಸಂಪ್ರದಾಯದ ಲೇಪನವೂ ಇದೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಕೊಡಗಿನಲ್ಲಿ ಸೇವಿಸುವ ಆಹಾರ ಪದಾರ್ಥಗಳ ಹಿಂದೆ ಅಲ್ಲಿನ ವಾತಾವರಣಕ್ಕೆ ತಕ್ಕ ವೈಜ್ಞಾನಿಕ ಕಾರಣಗಳಿದ್ದು, ಆ ಉದ್ದೇಶದಿಂದಲೇ ಅದನ್ನು ಜನ ಬಳಕೆ ಮಾಡುತ್ತಾ ಬರುತ್ತಿದ್ದಾರೆ. ಈಗ ಹಿಂದಿನಂತೆ ಕಾಡುಗಳು ಹೆಚ್ಚಿಲ್ಲದ ಕಾರಣ ಎಲ್ಲೆಂದರಲ್ಲಿ ಹೇರಳವಾಗಿ ಕೆಲವೊಂದು ಆಹಾರ ಪದಾರ್ಥ ಸಿಗದಂತಾಗಿದೆ. ಆದರೂ ಜನ ಅದನ್ನು ಹಣ ನೀಡಿ ಖರೀದಿಸಿ ಉಪಯೋಗಿಸುತ್ತಾರೆ ಎನ್ನುವುದೇ ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ.












Click it and Unblock the Notifications