ಮಡಿಕೇರಿ ಬಿಜೆಪಿ ನಾಯಕನ ಸಾವಿಗೆ ಸ್ಫೋಟಕ ತಿರುವು!
ಮಡಿಕೇರಿ, ಮಾರ್ಚ್ 30 : ಮಡಿಕೇರಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಸಾವಿನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಲಾರಿಯನ್ನು ಡಿಕ್ಕಿ ಹೊಡಿಸಿ ಅವರನ್ನು ಹತ್ಯೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಾ.19ರ ಸಂಜೆ ಮಡಿಕೇರಿಯಿಂದ ಸಂಪಾಜೆಗೆ ಹೋಗುವಾಗ ಬಾಲಚಂದ್ರ ಕಳಗಿ ಅವರ ಕಾರಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿತ್ತು, ಅವರು ಮೃತಪಟ್ಟಿದ್ದರು.
ಆದರೆ, ಪೊಲೀಸರ ತನಿಖೆ ವೇಳೆ ಇದು ಕೊಲೆ ಎಂದು ತಿಳಿದುಬಂದಿದೆ. ಸಂಪತ್ ಕುಮಾರ್, ಹರಿಪ್ರಸಾದ್ ಮತ್ತು ಲಾರಿ ಚಾಲಕ ಜಯನ್ ಎಂಬುವವರನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಸಂಪತ್ ಕುಮಾರ್ ಬಾಲಚಂದ್ರ ಕಳಗಿ ಅವರ ಹತ್ಯೆಗೆ ಸುಪಾರಿ ಕೊಟ್ಟಿದ್ದರು.

ಹಳೆಯ ದ್ವೇಷ : ಬಾಲಚಂದ್ರ ಕಳಗಿ ಅವರು ಸಂಪಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ವೇಳೆ ರಿಕ್ರಿಯೇಷನ್ ಕ್ಲಬ್ ತೆರೆಯಲು ಅನುಮತಿ ನಿರಾಕರಿಸಿದ್ದರು. 2018ರಲ್ಲಿ ವೈನ್ ಶಾಪ್ ತೆರೆಯಬಾರದು ಎಂದು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ್ದರು.
ಇದರಿಂದಾಗಿ ಕೋಪಗೊಂಡಿದ್ದ ಸಂಪತ್ ಕುಮಾರ್ ಹರಿಪ್ರಸಾದ್ ಜೊತೆ ಸೇರಿ ಬಾಲಚಂದ್ರ ಕಳಗಿ ಹತ್ಯೆಗೆ ಸಂಚು ರೂಪಿಸಿದ್ದರು. ಲಾರಿ ಚಾಲಕ ಜಯನ್‌ಗೆ 1.50 ಲಕ್ಷ ಹಣ ನೀಡಿ, ಕೊಲೆಗೆ ಸುಪಾರಿ ಕೊಟ್ಟಿದ್ದರು. ಕಾರಿಗೆ ಲಾರಿ ಡಿಕ್ಕಿ ಹೊಡೆಸಿ ಅಪಘಾತ ಎಂದು ಬಿಂಬಿಸಿದ್ದರು.
ಬಾಲಚಂದ್ರ ಕಳಗಿ ಅವರ ಚಿಕ್ಕಪ್ಪ ರಾಜಾರಾಮ್ ಕೊಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications