ಕೊಡಗು ರೆಸಾರ್ಟ್ ನಲ್ಲಿ ಮೋಜು-ಮಸ್ತಿ ನಡೆಯುತ್ತಿದೆಯಾ?
ಮಡಿಕೇರಿ, ಏಪ್ರಿಲ್ 13: ಕೊಡಗು ಜಿಲ್ಲಾ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ರೆಸಾರ್ಟ್ ನಲ್ಲಿ ಮೋಜು-ಮಸ್ತಿ ನಡೆಯುತ್ತಿರುವುದರ ಬಗ್ಗೆ ದೊರೆತ ಮಾಹಿತಿಯನ್ವಯ ಪಿಡಿಒ ರವೀಶ್ ಅವರೊಂದಿಗೆ ಪೊಲೀಸರು ಪರಿಶೀಲಿಸಿದ್ದಾರೆ.
ಚಿಕ್ಲಿಹೊಳೆ ರಸ್ತೆಯಲ್ಲಿ ಜೀಪ್ ನಂಬರ್ ಕೆಎ 12 ಪಿ 1953 ರಲ್ಲಿ ಸುಮಾರು 6 ಜನರು ಸುಂಟಿಕೊಪ್ಪ ಕಡೆ ಬರುತ್ತಿದ್ದು, ಅವರನ್ನು ನಿಲ್ಲಿಸಿ ವಿಚಾರಣೆ ಮಾಡಲಾಗಿತ್ತು. ಅವರು ಒಂದೇ ಕುಟುಂಬದವರಾಗಿದ್ದು ಲಾಕ್ ಡೌನ್ ಗಿಂತ ಮುಂಚಿತವಾಗಿಯೇ ಕೊಡಗಿನಲ್ಲಿ ವಾಸ್ತವ್ಯ ಹೂಡಿದ್ದು, ಈಗ ಚಿಕ್ಲಿಹೊಳೆ ಕಡೆಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದರು.
ಚಾಲಕನ ಹೆಸರು ವಿಳಾಸ ಕೇಳಿದಾಗ, ಆತನ ಹೆಸರು ಸ್ವಾಮಿ, ತಂದೆ ಕೆಂಪಯ್ಯ, 31 ವರ್ಷ. ರೆಸಾರ್ಟ್ ಒಂದರಲ್ಲಿ ಚಾಲಕ ವೃತ್ತಿ, ಮಂಡ್ಯ ಜಿಲ್ಲೆ ಎಂದು ತಿಳಿಸಿದ್ದನು. ಇವರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಈ ಬಗ್ಗೆ ಜೀಪ್ ಹಾಗೂ ಚಾಲಕ ಸ್ವಾಮಿ ಹಾಗೂ ಇತರರನ್ನು ವಶಕ್ಕೆ ಪಡೆದಿದ್ದು, ಕುಟುಂಬದ ಸದಸ್ಯರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಕಾಲಂ 188 ಐಪಿಸಿ ರೀತ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.











Click it and Unblock the Notifications