Kodagu Rain: ಕೊಡಗಿನಲ್ಲಿ ಆಶಾದಾಯಕ ಮುಂಗಾರಿನ ಮುನ್ಸೂಚನೆ
ಮಡಿಕೇರಿ, ಮೇ 18: ಕಾವೇರಿ ತವರು ಕೊಡಗಿನಲ್ಲಿ ಮುಂಗಾರು ಆಶಾದಾಯಕವಾದರೆ ಕಾವೇರಿ ಕಣಿವೆ ಸಮೃದ್ಧಿಯಾಗಿ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಾಗುತ್ತದೆ. ಹೀಗಾಗಿ ಮುಂಗಾರು ಮಳೆ ಆರಂಭವಾಯಿತೆಂದರೆ ಎಲ್ಲರ ಚಿತ್ತ ಕೊಡಗಿನತ್ತ ನೆಡುತ್ತದೆ. ಮತ್ತು ಮಳೆ ಉತ್ತಮವಾಗಿ ಆಗಲಿ ಎಂದು ಬಯಸುತ್ತಾರೆ. ಈ ಬಾರಿಯ ಪೂರ್ವ ಮುಂಗಾರು ಮಳೆ ಸುರಿಯುತ್ತಿರುವುದನ್ನು ಗಮನಿಸಿದರೆ ಈ ಬಾರಿ ಆಶಾದಾಯಕ ಮುಂಗಾರಿನ ಮುನ್ಸೂಚನೆ ಕಾಣುತ್ತಿದೆ.
ಈ ಬಾರಿ ಬೇಸಿಗೆಯಲ್ಲಿ ಮಳೆ ಸುರಿಯಲೇ ಇಲ್ಲ. ಇಡೀ ಜಿಲ್ಲೆಯಲ್ಲಿ ಕೆಲವು ಭಾಗದಲ್ಲಿ ಮಾತ್ರ ಮಳೆ ಸುರಿದಿತ್ತು. ಸಾಮಾನ್ಯವಾಗಿ ಜನವರಿ ಫೆಬ್ರವರಿ ತಿಂಗಳಲ್ಲಿ ಸುರಿಯಬೇಕಾಗಿದ್ದ ಮಳೆ ಮೇ ತಿಂಗಳಾದರೂ ಸಮರ್ಪಕವಾಗಿ ಸುರಿದಿರಲಿಲ್ಲ. ಆದರೆ ಮೇ ಮೊದಲ ವಾರದಲ್ಲಿ ಮಳೆ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಉತ್ತಮವಾಗಿ ಸುರಿಯುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಬತ್ತಿದ ಕಾವೇರಿ ನದಿಯಲ್ಲಿ ನೀರಿನ ಹರಿವು ಆರಂಭವಾಗಿದೆ. ಜತೆಗೆ ಕೆರೆ ಕಟ್ಟೆಗಳು, ಬಾವಿಗಳಲ್ಲಿ ಅಂತರ್ಜಲ ಸುಧಾರಿಸಲು ಆರಂಭಿಸಿದೆ. ಪಾತಾಳ ಕಂಡಿದ್ದ ಚಿಕ್ಲಿಹೊಳೆ ಮತ್ತು ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಹೆಚ್ಚಾಗುತ್ತಿದೆ.

ಇನ್ನು ಜಿಲ್ಲೆಗೊಂದು ಸುತ್ತು ಹೊಡೆದರೆ ಬಿಸಿಲಿಗೆ ಬಾಡಿ ಹೋಗಿದ್ದ ಕಾಫಿ ತೋಟಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಅರಣ್ಯಗಳಿಗೂ ಜೀವಕಳೆ ಬಂದಿದೆ. ಇದೀಗ ಉತ್ತಮವಾಗಿಯೇ ಮಳೆ ಸುರಿಯುತ್ತಿರುವ ಕಾರಣ ಮುಂದಿನ ಮುಂಗಾರು ಕೂಡ ಆಶಾದಾಯಕ ಎಂಟ್ರಿ ಕೊಡಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆ ತಡವಾಗಿ ಆರಂಭವಾದರೂ ಉತ್ತಮವಾಗಿ ಮಳೆ ಸುರಿಯುತ್ತಿರುವುದು ಖುಷಿಯ ವಿಚಾರವಾಗಿದೆ.
ಕಳೆದ ವರ್ಷಕ್ಕಿಂತ 48.26 ಮಿ.ಮೀ ಹೆಚ್ಚು ಮಳೆ
ಕೊಡಗಿನಲ್ಲಿ ಮಳೆ ಉತ್ತಮವಾಗಿ ಸುರಿದು ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದರೆ ಕೊಡಗಿನಿಂದ ಬೆಂಗಳೂರಿನ ತನಕ ಜನ ನೆಮ್ಮದಿಯುಸಿರು ಬಿಡಲು ಸಾಧ್ಯವಾಗುತ್ತದೆ. ರೈತರು ಕೂಡ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಜನವರಿಯಿಂದ ಇಲ್ಲಿ ತನಕ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ ತಡವಾದರೂ ಉತ್ತಮವಾಗಿಯೇ ಮಳೆ ಸುರಿಯುತ್ತಿರುವುದು ಕಾಣಿಸುತ್ತಿದೆ. ಜತೆಗೆ ಕಳೆದ ವರ್ಷಕ್ಕಿಂತ ಸ್ವಲ್ಪ ಮಟ್ಟಿಗೆ ಹೆಚ್ಚಿನ ಮಳೆಯಾಗಿರುವುದು ಕಂಡು ಬರುತ್ತಿದೆ.

ಜನವರಿಯಿಂದ ಇಲ್ಲಿ ತನಕ ಮಳೆ ಎಷ್ಟು ಸುರಿದಿದೆ ಎಂಬುದನ್ನು ನೋಡಿದ್ದೇ ಆದರೆ ಶನಿವಾರದ(ಮೇ18) ತನಕ 162.84 ಮಿ.ಮೀ, ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 114.58 ಮಿ.ಮೀ ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 48.26 ಮಿ.ಮೀ ಮಳೆ ಜಾಸ್ತಿಯಾಗಿದೆ. ಈ ನಡುವೆ ಜೂನ್ ತಿಂಗಳ ಮೊದಲ ವಾರದಲ್ಲಿ ಮಾನ್ಸೂನ್ ಕೇರಳಕ್ಕೆ ಕಾಲಿಡಲಿದ್ದು, ಜಿಲ್ಲೆಯಲ್ಲೂ ಮುಂಗಾರು ಆರಂಭವಾಗಲಿದೆ ಎಂಬ ನಿರೀಕ್ಷೆಯಿದೆ.
ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಳ
ಶನಿವಾರದ ತನಕ ಒಂದು ದಿನದ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ಮಳೆ 12.10 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 7.05 ಮಿ.ಮೀ. ವಿರಾಜಪೇಟೆ ತಾಲ್ಲೂಕಿನಲ್ಲಿ 17.20 ಮಿ.ಮೀ. ಪೊನ್ನಂಪೇಟೆ ತಾಲ್ಲೂಕಿನಲ್ಲಿ 16.11 ಮಿ.ಮೀ. ಸೋಮವಾರಪೇಟೆ ತಾಲ್ಲೂಕಿನಲ್ಲಿ 12.95 ಮಿ.ಮೀ. ಕುಶಾಲನಗರ ತಾಲ್ಲೂಕಿನಲ್ಲಿ 7.20 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು 26 ಮಿ.ಮೀ ಮಳೆ ಶಾಂತಳ್ಳಿಯಲ್ಲಿ ಸುರಿದಿದೆ.
ಮಳೆಯಾಗುತ್ತಿರುವ ಕಾರಣ ಹಾರಂಗಿ ಜಲಾಶಯದತ್ತ ನೀರು ಹರಿದು ಬರುತ್ತಿರುವುದರಿಂದ ಗರಿಷ್ಠ 2,859 ಅಡಿಗಳ ಜಲಾಶಯದಲ್ಲಿ ಸದ್ಯ 2822.98 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ 2819.75 ಅಡಿಗಳಷ್ಟು ನೀರಿತ್ತು. ಸದ್ಯ ಒಳಹರಿವು 308 ಕ್ಯುಸೆಕ್ ನಷ್ಟಿದ್ದರೆ, ಹೊರ ಹರಿವು 200 ಕ್ಯುಸೆಕ್ ನಷ್ಟಿದೆ. ಒಟ್ಟಾರೆ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿಯುತ್ತಿದ್ದು, ಹೀಗೆಯೇ ಮುಂದುವರೆದರೆ ಸಾಕೆಂದು ಜನ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications