ಮಡಿಕೇರಿ: ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಕೊಲೆ!
ಮಡಿಕೇರಿ, ಡಿಸೆಂಬರ್ 29: ಊಟ ಮಾಡುವ ಸಂದರ್ಭದಲ್ಲಿ ಚಿಕನ್ ಸಾಂಬಾರ್ ಕಡಿಮೆ ಹಾಕಿದ್ದಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಕುಮಾರ ದಾಸ ಕೊಲೆಯಾದ ಯುವಕನಾಗಿದ್ದು, ನಂಜನಗೂಡು ತಾಲೂಕಿನ ಕೊತ್ತೆನಾಹಳ್ಳಿಯ ಕುಮಾರ್ ಮತ್ತು 17 ವರ್ಷದ ಹುಡುಗನ ಜೊತೆ ನಾಲ್ಕೇರಿ ಗ್ರಾಮದ ಮಹೇಶ್ ಎಂಬುವರ ಕಾಫಿ ತೋಟದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. 25 ದಿನಗಳ ಹಿಂದೆ ಕೆಲಸಕ್ಕೆ ಸೇರಿದ್ದ ಇಬ್ಬರು ಜೊತೆಯಲ್ಲಿಯೇ ವಾಸವಾಗಿದ್ದರು.
ಸೋಮವಾರ ಸಂಜೆ ಮಹೇಶ್ ಅವರ ಕಾಫಿ ತೋಟದ ಅಂಗಳಲ್ಲಿ ಬಾಡೂಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಸುಮಾರು ರಾತ್ರಿ 10.30ಕ್ಕೆ ಊಟ ಮಾಡುತ್ತಿರುವಾಗ ತನಗೆ ಕಡಿಮೆ ಚಿಕನ್ ಸಾಂಬಾರ್ ಹಾಕಲಾಗಿದೆ ಎಂದು ಬಾಲಕ ಜಗಳ ತೆಗೆದಿದ್ದಾನೆ.

ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಕೋಪಗೊಂಡ ಆರೋಪಿ ಬ್ಯಾಟ್ ಮತ್ತು ಒಲೆಯಲ್ಲಿದ್ದ ಸೌದೆಯಿಂದ ಕುಮಾರ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಪೊಲೀಸರು ಅಪ್ರಾಪ್ತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications