ಮಡಿಕೇರಿ : 10 ದಿನದ ಬಳಿಕ ಶಾಲೆಗಳು ಪುನಃ ಆರಂಭ
ಮಡಿಕೇರಿ, ಆಗಸ್ಟ್ 23 : ಭಾರಿ ಮಳೆ, ಗುಡ್ಡ ಕುಸಿತದ ಬಳಿಕ ಕೊಡಗು ಜಿಲ್ಲೆಯಲ್ಲಿ ಗುರುವಾರ ಶಾಲಾ-ಕಾಲೇಜುಗಳು ಆರಂಭವಾಗಿವೆ. 11 ದಿನಗಳ ಬಳಿಕ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಆಗಮಿಸಿದ್ದಾರೆ.
ಮಡಿಕೇರಿಯಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದ ಮಕ್ಕಳಿಗೆ ಕಲ್ಲಗುಂಡಿ ಹಾಗೂ ಆರಂತೋಡು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ವ್ಯವಸ್ಥೆ ಮಾಡಲಾಗಿದೆ. ಕಲ್ಲಗುಂಡಿಯಲ್ಲಿ 23 ಮಕ್ಕಳು, ಆರಂತೋಡು ಶಾಲೆಯಲ್ಲಿ 18 ಮಕ್ಕಳು ದಾಖಲಾಗಿದ್ದಾರೆ.

ಸಂತ್ರಸ್ತರಾದ ಮಕ್ಕಳನ್ನು ತರಗತಿ ಪ್ರಕಾರ ವರ್ಗೀಕರಿಸಿ ಹೊಸದಾಗಿ ದಾಖಲು ಮಾಡಿಕೊಳ್ಳಲಾಗುತ್ತಿದೆ. 'ಶಾಲೆಗೆ ಬರಲು ಸಂತಸವಾಗುತ್ತಿದೆ. ಇಲ್ಲಿ ಹೊಸ ಗೆಳೆಯರು ಸಿಕ್ಕಿದ್ದಾರೆ' ಎಂದು ವಿದ್ಯಾರ್ಥಿಗಳು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಕೊಡಗಿನಲ್ಲಿ ಉಂಟಾಗಿರುವ ಭೂ ಕುಸಿತದಿಂದಾಗಿ 61 ಶಾಲೆಗಳಿಗೆ ಹಾನಿಯಾಗಿದೆ. ತೀವ್ರಹಾನಿಯಾದ ಕಟ್ಟಡವನ್ನು ಹಾಗೆಯೇ ಬಿಟ್ಟು ಉಳಿದ ಕಟ್ಟಡಗಳಲ್ಲಿ ಶಾಲೆಗಳನ್ನು ಆರಂಭಿಸಲಾಗಿದೆ. ಪರಿಹಾರ ಕೇಂದ್ರಗಳಲ್ಲಿಯೂ ಶಾಲೆಗಳನ್ನು ತೆರೆಯಲಾಗಿದೆ.
ಯಾವುದೇ ಶಾಲೆಯಲ್ಲಿ ಪ್ರವೇಶ : ಕೊಡಗಿನಲ್ಲಿ ಪ್ರವಾಹದಿಂದ ಸಂತ್ರಸ್ತರಾಗಿರುವ ಮಕ್ಕಳು ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಪ್ರವೇಶ ಬಯಸಿದರೆ ನೀಡಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.












Click it and Unblock the Notifications