Monsoon season: ಮಲೆನಾಡಿನಲ್ಲಿ ಮುಂಗಾರು ಮಳೆ ಸೃಷ್ಟಿಸುವ ವಿಸ್ಮಯಲೋಕ, ಏನದು?, ಇಲ್ಲಿದೆ ನೋಡಿ ಅದ್ಭುತ ಚಿತ್ರಣ
ಮಡಿಕೇರಿ, ಜುಲೈ, 23: ಈ ಭೂಮಿ ಮೇಲಿರುವ ಕೊಟ್ಯಂತರ ಜೀವ ರಾಶಿಗಳ ನಡುವೆ ನಮಗೆ ಕಾಣಸಿಗುವುದು ಕೆಲವೇ ಕೆಲವು. ಅವು ಕೂಡ ಎಲ್ಲ ಕಾಲದಲ್ಲಿ ನಮಗೆ ದರ್ಶನ ನೀಡುವುದಿಲ್ಲ. ನಿಸರ್ಗ ಸೃಷ್ಟಿಯಲ್ಲಿ ಜೀವಿಗಳು ಹುಟ್ಟಬೇಕು ಮತ್ತು ಸಾಯಬೇಕು. ಆದರೆ ಬೇಸರದ ಸಂಗತಿಗಳೆಂದರೆ ನಮ್ಮೊಳಗಿದ್ದ ಅದೆಷ್ಟೋ ಜೀವ ರಾಶಿಗಳು ಸದ್ದಿಲ್ಲದೆ ಅಳಿದು ಹೋಗಿವೆ.
ಇದೆಲ್ಲದರ ನಡುವೆಯೂ ಮುಂಗಾರು ಮಳೆ ಸುರಿದಾಗ ಮಲೆನಾಡಿನಲ್ಲಿ ಕೆಲವೊಂದು ಜೀವರಾಶಿಗಳು ಅಲ್ಲಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿ ಬಿಡುತ್ತವೆ. ಅವುಗಳನ್ನು ಮುಂಗಾರು ಮಳೆಯ ಅತಿಥಿಗಳು ಎಂದರೂ ತಪ್ಪಾಗಲಾರದು. ಸಾಮಾನ್ಯವಾಗಿ ಮಲೆನಾಡಿನಲ್ಲಿ ಮಳೆ ಆರಂಭವಾಗುತ್ತಿದ್ದಂತೆಯೇ ಸುರಕ್ಷಿತ ತಾಣಗಳನ್ನು ಅರಸಿ ಪಕ್ಷಿಗಳು (ಕೆಲವು ಪಕ್ಷಿಗಳನ್ನು ಹೊರತುಪಡಿಸಿ), ಜೇನು ನೊಣಗಳು, ಹೀಗೆ ಹಲವು ಜೀವರಾಶಿಗಳು ಹೊರಹೋಗುತ್ತವೆ. ಆದರೆ ಇದೇ ಸಮಯದಲ್ಲಿ ಮಲೆನಾಡಿನ ನಿಸರ್ಗದ ನಡುವಿನಿಂದ ಕೆಲವೊಂದು ಜೀವ ಜಂತುಗಳು ಹೊರಬಂದು ಅಲ್ಲಲ್ಲಿ ಕಾಣಿಸಿಕೊಳ್ಳುತ್ತವೆ.

ಮಳೆಗಾಲದಲ್ಲಿ ಮಲೆನಾಡಿನಲ್ಲೊಂದು ಸುತ್ತು ಹೊಡೆದರೆ ನಿಸರ್ಗದ ಸುಂದರ ನೋಟ ನಮ್ಮನ್ನು ಮೂಕಸ್ಮಿತರನ್ನಾಗಿಸಿ ಬಿಡುತ್ತದೆ. ಪಕೃತಿಯ ಚೆಲುವೇ ಒಂದು ವಿಸ್ಮಯ. ಅದು ಮುಗಿಯದ ಅಕ್ಷಯಪಾತ್ರೆಯಾಗಿದೆ. ಮುಂಗಾರು ಮಳೆಗೆ ಯಾವತ್ತಾದರೊಂದು ದಿನ ಹಾಗೆ ಸುಮ್ಮನೆ ಮಲೆನಾಡಿನ ಕಾಡು, ಗದ್ದೆ ಬಯಲು, ಕಾಫಿ, ಏಲಕ್ಕಿ ತೋಟಗಳ ನಡುವೆ ಹೆಜ್ಜೆ ಹಾಕುತ್ತಾ ಹೋಗಿ ನಿಸರ್ಗದ ವಿಸ್ಮಯಗಳು ಒಂದರ ಮೇಲೊಂದರಂತೆ ತೆರೆದುಕೊಳ್ಳುತ್ತಾ ಹೋಗುತ್ತವೆ.
ಮಳೆಗಾಲದಲ್ಲಿ ಎದ್ದುಬರುವ ಅತಿಥಿಗಳು
ನಾವು ಯಾವತ್ತೂ ಕಾಣದ ಕೆಲವೊಂದು ಸುಂದರ ನೋಟಗಳು ನಮ್ಮನ್ನು ಬೆರಗುಗೊಳಿಸುತ್ತವೆ. ನಿಸರ್ಗವೇ ಹಾಗೆ ನೋಡನೋಡುತ್ತಲೇ ತನ್ನ ವರಸೆ ಬದಲಿಸಿ ಬಿಡುತ್ತದೆ. ಅದರಾಚೆಗೆ ಹೊಸ ಕ್ರಿಮಿ-ಕೀಟ, ಜಂತುಗಳು ಅಲ್ಲೊಂದು ಇಲ್ಲೊಂದು ಕಾಣಿಸಿಕೊಂಡು ಅಚ್ಚರಿಗೆ ತಳ್ಳಿ ಬಿಡುತ್ತವೆ. ಅದರಲ್ಲೂ ಮಳೆಗಾಲದಲ್ಲಿ ಮಲೆನಾಡಿನಲ್ಲಿ ಹೆಜ್ಜೆ ಹಾಕಿದರೆ ಜೀರುಂಡೆಯ ಸದ್ದು ಕಿವಿಗೆ ಅಪ್ಪಳಿಸುತ್ತಲೇ ಇರುತ್ತದೆ. ಇದರ ಜೊತೆ ಎಲ್ಲೆಂದರಲ್ಲಿ ರಕ್ತ ಹೀರಲು ಕಾಯುವ ಜಿಗಣೆಗಳು ಭಯ ಹುಟ್ಟಿಸುತ್ತವೆ.
ನೀರು ಹರಿಯುವ ಜಾಗಗಳಲ್ಲಿ ಕಲ್ಲು ಬಂಡೆಗಳ ನಡುವೆ, ಬಿಲಗಳಲ್ಲಿ ಅವಿತ್ತಿದ್ದ ಏಡಿಗಳು, ಕೆರೆಗಳಲ್ಲಿ, ನೀರಿನ ಹೊಂಡಗಳಲ್ಲಿ ಅವಿತಿದ್ದ ಆಮೆಗಳು ಒಮ್ಮೊಮ್ಮೆ ಮೇಲೆದ್ದು ಬಂದು ದರ್ಶನ ನೀಡುತ್ತವೆ. ಇನ್ನು ಮಳೆ ಬಿದ್ದು ಭೂಮಿ ತೇವವಾದಾಗ ಗಿಡ, ಮರ, ಬೆಟ್ಟಗುಡ್ಡ ಹೀಗೆ ಎಲ್ಲೆಲ್ಲಿಂದಲೂ ಹೊಸ ಅತಿಥಿಗಳು ಗೋಚರಿಸಿ ನಮಗೆ ಅಚ್ಚರಿ ಮೂಡಿಸಿ ಬಿಡುತ್ತಾರೆ.
ಮಿಂಚು ಹುಳಗಳ ದೃಶ್ಯವಂತೂ ಮನಮೋಹಕ
ಸಾಮಾನ್ಯವಾಗಿ ಕೆಲವೊಂದು ಜೀವರಾಶಿಗಳನ್ನು ಹೊರತುಪಡಿಸಿದರೆ ಇನ್ನು ಕೆಲವು ಮಳೆಗಾಲದಲ್ಲಿ ಮಾತ್ರ ನಮಗೆ ದರ್ಶನ ನೀಡುತ್ತವೆ. ಉಳಿದಂತೆ ಅವು ಎಲ್ಲಿ ಕಳೆದುಹೋಗಿರುತ್ತವೆಯೋ ಗೊತ್ತಾಗಲಾರದು. ಮೊದಲೆಲ್ಲ ಮುಂಗಾರು ಆರಂಭದ ದಿನಗಳಲ್ಲಿ ರಾತ್ರಿಯಾಯಿತೆಂದರೆ ಎಲ್ಲೆಂದರಲ್ಲಿ ಮಿಂಚುತ್ತಾ ಹಾರಾಡುವ ಮಿಂಚು ಹುಳುಗಳು ಕಾಣಿಸುತ್ತಿದ್ದವು. ಅವು ಮರ, ಬಿದಿರು ಮೆಳೆಗಳಲ್ಲಿ ಕುಳಿತಾಗ ಕಂಡು ಬರುತ್ತಿದ್ದ ದೃಶ್ಯ ಥೇಟ್ ವಿದ್ಯುದ್ದೀಪ ಅಳವಡಿಸಿದಂತೆ ಗೋಚರಿಸುತ್ತಿತ್ತು.
ನಿಸರ್ಗದಲ್ಲಿ ಹೇರಳವಾಗಿದ್ದ ಜೀವರಾಶಿಗಳಲ್ಲಿ ಕೆಲವು ಉಪದ್ರವಿಯಾಗಿದ್ದರೆ, ಮತ್ತೆ ಕೆಲವು ನಿರುಪದ್ರವಿಯಾಗಿದ್ದವು. ತೋಟ, ಗದ್ದೆ, ಕಾಡುಗಳ ನಡುವೆ ಸಂಚರಿಸುವಾಗ ಇವು ಕಾಣಿಸುತ್ತಿದ್ದವು. ಜನರಿಗೆ ಬಹುತೇಕ ಜಂತುಗಳ ಪರಿಚಯವಿತ್ತು. ಅಷ್ಟೇ ಅಲ್ಲದೆ ಅವುಗಳಲ್ಲಿ ಯಾವುದು ವಿಷ ಜಂತು ಎಂಬುದು ಗೊತ್ತಿತ್ತು. ಹೀಗಾಗಿ ಅವು ಅಲ್ಲಲ್ಲಿ ಕಂಡಾಗ ಏನೂ ಅನಿಸುತ್ತಿರಲಿಲ್ಲ.
ನಂತರದ ಕಾಲಘಟ್ಟದಲ್ಲಿ ಆಧುನಿಕತೆಯ ಭರಾಟೆಯಲ್ಲಿ ಕೃಷಿಗೆ ಸಿಂಪಡಿಸುತ್ತಿರುವ ಕೀಟ ನಾಶಕಗಳು, ರಾಸಾಯಿನಿಕ ಗೊಬ್ಬರ ಬಳಕೆ ಹೀಗೆ ಹತ್ತು ಹಲವು ಕಾರಣಗಳಿಂದ ಬಹುತೇಕ ಜೀವರಾಶಿಗಳು ಅಳಿದು ಹೋಗಿವೆ. ಇದರಿಂದ ಕೆಲವೊಮ್ಮೆ ಅವು ನಮ್ಮ ಕಣ್ಣಿಗೆ ಗೋಚರಿಸಿದಾಗ ಅಚ್ಚರಿಯಾಗುತ್ತವೆ, ಜೊತೆಗೆ ಸುದ್ದಿಯಾಗುತ್ತವೆ.
ಈಗಿನ ಸೆಲ್ಫಿ ಯುಗದಲ್ಲಿ ಅಪರೂಪದ ಜೀವರಾಶಿಗಳು ಕಂಡರೆ ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತವೆ. ಕೆಲವೊಂದು ಜೀವಿಗಳು ವಿಚಿತ್ರವಾಗಿದ್ದರೂ ಮಲೆನಾಡಿಗರಿಗೆ ಅವು ವಿಶೇಷ ಎನಿಸುವುದಿಲ್ಲ. ಅವುಗಳನ್ನು ಆಗಾಗ್ಗೆ ನೋಡುವುದರಿಂದ ಕುತೂಹಲವೂ ಕೆರಳುವುದಿಲ್ಲ. ಆದರೆ ಅಪರೂಪಕ್ಕೆ ನೋಡುವವರಿಗೆ ಅವುಗಳ ಬಣ್ಣ, ಆಕಾರ ವಿಚಿತ್ರವಾಗಿ ಕಾಣುತ್ತವೆ. ಶತ್ರುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿಯೇ ದೇವರು ಅವುಗಳನ್ನು ಆ ರೀತಿಯಾಗಿ ಸೃಷ್ಟಿ ಮಾಡಿದ್ದಾನೆ ಏನೋ? ಎನ್ನುವ ಸಂಶಯಗಳು ಕಾಡತೊಡಗುತ್ತವೆ.
ಬದುಕಲು ಅವಕಾಶ ಮಾಡಿಕೊಡೋಣ
ಕೆಲವೊಂದು ಜೀವಿಗಳು ನೋಡಿದ ತಕ್ಷಣ ಭಯಹುಟ್ಟಿಸಿದರೆ ಮತ್ತೆ ಕೆಲವು ಕುತೂಹಲ ಕೆರಳಿಸುತ್ತವೆ. ಕೆಲವು ನೋಡಲಷ್ಟೇ ಭಯಂಕರ, ಆದರೆ ಸಾಧು ಜೀವಿಗಳು. ಇನ್ನು ಕೆಲವು ನೋಡಲು ಸುಂದರ, ಆದರೆ ಭಯಂಕರ. ಕೆಲವು ಅಪರೂಪಕ್ಕೆ ನಮ್ಮ ಕಣ್ಣಿಗೆ ಬಿದ್ದಿರುತ್ತವೆ. ಅವುಗಳ ಬಗ್ಗೆ ತಿಳಿಯುತ್ತಾ ಹೋದಂತೆ ಅವುಗಳ ಹಿಂದೆ ಕುತೂಹಲಕಾರಿ ಅಂಶಗಳು ಗೋಚರವಾಗುತ್ತಾ ಹೋಗುತ್ತವೆ.
ಈ ಭೂಮಿ ಮೇಲೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕಿದೆ. ಹೀಗಾಗಿ ಅವುಗಳನ್ನು ರಕ್ಷಿಸುವತ್ತ ನಾವು ಗಮನಹರಿಸಬೇಕಿದೆ. ಕೆಲವೊಂದನ್ನು ಕಂಡ ತಕ್ಷಣ ಹೊಸಕಿ ಹಾಕುವ ಬದಲಿಗೆ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡಬೇಕಿದೆ. ಆಗ ಅವು ಕೂಡ ನಮ್ಮಂತೆ ಬದುಕಲು ಸಂತಾನ ವೃದ್ಧಿಯಾಗಲು ಸಾಧ್ಯವಾಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications