ಮಡಿಕೇರಿ ದಸರಾ 2023; ಅನುದಾನದ ಕೊರತೆ ಇಲ್ಲದೇ ದಸರಾ ಆಚರಣೆ
ಮಡಿಕೇರಿ, ಸೆಪ್ಟೆಂಬರ್ 27; ಮಡಿಕೇರಿ ದಸರಾ 2023ರ ಆಚರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಯಿತು. ಈ ಬಾರಿ ಅಕ್ಟೋಬರ್ 15ರಂದು ಕರಗ ಉತ್ಸವದ ಆರಂಭದೊಂದಿಗೆ ಮಡಿಕೇರಿ ದಸರಾಗೆ ಚಾಲನೆ ಸಿಗಲಿದೆ, ಅಕ್ಟೋಬರ್ 24ರ ತನಕ ದಸರಾ ನಡೆಯಲಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್. ಬೋಸರಾಜು ಮಾತನಾಡಿ, "ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗಿದ್ದು, ದಸರಾಗೆ ಯಾವುದೇ ರೀತಿ ತೊಂದರೆಯಾಗದಂತೆ ಹಣ ಬಿಡುಗಡೆ ಮಾಡಿಸಲಾಗುವುದು" ಎಂದರು.

"ಅನೇಕ ದಶಕಗಳಿಂದ ಮಡಿಕೇರಿ ದಸರಾ ಆಚರಿಸಿಕೊಂಡು ಬರಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರಸಭೆ ಪೌರಾಯುಕ್ತರಿಗೆ ಹಣ ಬಿಡುಗಡೆ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಾಂಪ್ರದಾಯಿಕ ಹಾಗೂ ವ್ಯವಸ್ಥಿತವಾಗಿ ಆಚರಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು" ಎಂದು ಸಚಿವರು ಭರವಸೆ ನೀಡಿದರು.
"ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾವನ್ನು ಸಂಪ್ರದಾಯದಂತೆ ಯಾವುದೇ ರೀತಿ ವ್ಯತ್ಯಾಸವಾಗದಂತೆ ದಸರಾ ಆಚರಿಸುವತ್ತ ದಸರಾ ಸಮಿತಿಯವರು ಗಮನಹರಿಸಬೇಕು. ದಸರಾ ಸಮಿತಿಯ ಪದಾಧಿಕಾರಿಗಳ ಎಲ್ಲರ ಸಲಹೆಯನ್ನು ಪರಿಗಣಿಸಿ, ಅದರಂತೆ ದಸರಾವನ್ನು ಮುಂದುವರಿಸಿಕೊಂಡು ಹೋಗಬೇಕು" ಎಂದು ಸಚಿವರು ಸಲಹೆ ನೀಡಿದರು.
ಒಂದೂವರೆ ಲಕ್ಷ ಜನ ಸೇರುವ ಸಾಧ್ಯತೆ; ಸಭೆಯಲ್ಲಿ ಮಾತನಾಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, "ಈ ಹಿಂದೆ ಮಡಿಕೇರಿ ದಸರಾ ಸಮಿತಿಯ ಬೈಲಾ ಪ್ರಕಾರ ಕಾರ್ಯಕ್ರಮ ಆಯೋಜಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕು. ನಾಲ್ಕು ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾ ಆರಂಭವಾಗಲಿದ್ದು, ವಿಜಯದಶಮಿಯಂದು ರಾತ್ರಿ ವೇಳೆಯಲ್ಲಿ ದಶಮಂಟಪಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ" ಎಂದರು.
"ಒಂದರಿಂದ ಒಂದೂವರೆ ಲಕ್ಷ ಜನರು ಮಡಿಕೇರಿ ದಸರಾಗೆ ಸೇರಲಿದ್ದಾರೆ. ಒಂದೊಂದು ಮಂಟಪವು ರಾಮಾಯಣ, ಮಹಾಭಾರತವನ್ನು ನೆನಪಿಸುತ್ತದೆ. ಈಗಾಗಲೇ ಮಡಿಕೇರಿ ದಸರಾಗೆ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವರು ಸಹ ಅಕ್ಟೋಬರ್ 21ರಂದು ಕೊಡಗು ಜಿಲ್ಲೆಗೆ ಆಗಮಿಸಲಿದ್ದಾರೆ" ಎಂದು ಶಾಸಕರು ಸಭೆಗೆ ಮಾಹಿತಿ ನೀಡಿದರು.
ಮಡಿಕೇರಿ ದಸರಾಗೆ ಕಳೆದ ಬಾರಿ 1 ಕೋಟಿ ರೂ. ಪ್ರಸ್ತಾವನೆಯಲ್ಲಿ 75 ಲಕ್ಷ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ 25 ಲಕ್ಷ ರೂ. ಬಿಡುಗಡೆ ಮಾಡಬೇಕಿದೆ ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲಾಯಿತು. ದಸರಾವನ್ನು ನಗರದಲ್ಲಿ ಬೆಳಕಿನ ವ್ಯವಸ್ಥೆಯೊಂದಿಗೆ ಹಬ್ಬದ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಡಿಕೇರಿ ನಗರದ ರಸ್ತೆಗಳು ಗುಂಡಿ ಬಿದ್ದಿದ್ದು, ಗುಂಡಿ ಮುಚ್ಚುವ ಕಾರ್ಯವನ್ನು ಆದಷ್ಟು ಶೀಘ್ರ ಆಗಬೇಕು. ಹಾಗೆಯೇ ಬೀದಿ ದೀಪವನ್ನು ಸರಿಪಡಿಸಬೇಕಿದೆ. ದಸರಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಮಡಿಕೇರಿ ನಗರಸಭೆ ಅಧ್ಯಕ್ಷರು ಹಾಗೂ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ಅನಿತಾ ಪೂವಯ್ಯ ಮಾತನಾಡಿ, "ಮಡಿಕೇರಿ ದಸರಾಗೆ 200 ವರ್ಷಗಳ ಇತಿಹಾಸವಿದೆ. ನಾಲ್ಕು ಕರಗ ಉತ್ಸವಗಳೊಂದಿಗೆ ದಸರಾ ಆರಂಭವಾಗಲಿದ್ದು, ಕ್ರೀಡೆ, ಮಹಿಳಾ, ಯುವ, ಜಾನಪದ, ಮಕ್ಕಳ ಹೀಗೆ 9 ದಿನಗಳ ಕಾಲ ವಿವಿಧ ದಸರಾ ಕಾರ್ಯಕ್ರಮ ನಡೆಯಲಿದೆ. ಕೊಡಗು ಸೇರಿದಂತೆ ರಾಜ್ಯದ ಕಲಾಪ್ರತಿಭೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ" ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, "ಕೊಡಗು ಜಿಲ್ಲೆಯಲ್ಲಿ ದಸರಾ ಆಚರಣೆ ಕೊಡಗು ಜಿಲ್ಲೆಯ ಸಂಪ್ರದಾಯವನ್ನು ಹೊಂದಿರಬೇಕು. ಅದು ಬಿಟ್ಟು ತಮಿಳುನಾಡುವಿನಿಂದ ಡಿಜೆಯನ್ನು ತರಿಸಿ ಆಚರಿಸುವುದು ಸರಿಯೇ? ಎಂಬ ಬಗ್ಗೆ ಯೋಚಿಸಬೇಕಿದೆ. ಕೊಡಗಿನ ಸಾಂಪ್ರದಾಯ, ಸಂಸ್ಕೃತಿ, ಪರಂಪರೆಯನ್ನು ಉಳಿಸುವಂತಾಗಬೇಕು" ಎಂದು ಅಭಿಪ್ರಾಯಪಟ್ಟರು.












Click it and Unblock the Notifications