ಪ್ರಿಯತಮೆಯ ಗಂಡನ ರುಂಡ, ಮುಂಡ, ಕೈಕಾಲು ಕತ್ತರಿಸಿದ ಚಾಲಕ
ಮಡಿಕೇರಿ, ಜುಲೈ 3: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಜೀಪು ಚಾಲಕನೊಬ್ಬ ಆಕೆಯ ಗಂಡನ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಬಳಿಕ ರುಂಡ, ಮುಂಡ, ಕೈಕಾಲುಗಳನ್ನು ಬೇರ್ಪಡಿಸಿ ಕೆರೆಗೆ ಹಾಕಿದ ಘಟನೆ ಮಡಿಕೇರಿ ಬಳಿಯ ಸುಂಟಿಕೊಪ್ಪದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ನಿವಾಸಿ, ಜೀಪು ಚಾಲಕ ಉಮ್ಮರ್(40) ಎಂಬಾತನೇ ಅದೇ ಬಡಾವಣೆಯ ರಾಜಲಿಂಗಂ(45) ಎಂಬಾತನನ್ನು ಹತ್ಯೆಗೈದು ಗುರುತು ಸಿಗದಂತೆ ಮಾಡುವ ಸಲುವಾಗಿ ರುಂಡ, ಮುಂಡವನ್ನು ಕತ್ತರಿಸಿ ಕೆರೆಗೆ ಹಾಕಿದ್ದನು.

ಕೊಲೆಯಾದ ರಾಜಲಿಂಗಂ ಮತ್ತು ಜೀಪು ಚಾಲಕ ಉಮ್ಮರ್ ಒಂದೇ ಬಡಾವಣೆಯ ನಿವಾಸಿಯಾಗಿದ್ದರು. ಉಮ್ಮರ್ ತೋಟದ ಕಾರ್ಮಿಕರನ್ನು ತನ್ನ ಜೀಪಿನಲ್ಲಿ ಕರೆದೊಯ್ಯುವ ಕೆಲಸವನ್ನು ಮಾಡುತ್ತಿದ್ದನು. ರಾಜಲಿಂಗಂನ ಪತ್ನಿ ಮಣಿ ಎಂಬಾಕೆ ಅದೇ ಜೀಪುನಲ್ಲಿ ತೋಟದ ಕೆಲಸಕ್ಕೆ ತೆರಳುತ್ತಿದ್ದಳು. ಹೀಗೆ ಆದ ಪರಿಚಯ ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು. ಪತ್ನಿಗೂ ಜೀಪು ಚಾಲಕ ಉಮ್ಮರ್ ಗೆ ಅನೈತಿಕ ಸಂಬಂಧವಿರುವುದು ಪತಿ ರಾಜಲಿಂಗಂಗೆ ಗೊತ್ತಾಗಿ ಮನೆಯಲ್ಲಿ ಜಗಳ ಆರಂಭವಾಗಿತ್ತು.
ಮದ್ಯ ವ್ಯಸನಿಯಾಗಿದ್ದ ರಾಜಲಿಂಗಂ ಇದೇ ವಿಚಾರಕ್ಕೆ ಪ್ರತಿದಿನ ಮದ್ಯ ಸೇವಿಸಿ ಬಂದು ಜಗಳತೆಗೆಯುತ್ತಿದ್ದನು. ಈ ವಿಚಾರವನ್ನು ಮಣಿ ಪ್ರಿಯಕರ ಉಮ್ಮರ್ ಗೆ ತಿಳಿಸಿದ್ದಳು.
ಜೂನ್ 13ರಂದು ಬಾರ್ ಗೆ ತೆರಳಿದ್ದ ರಾಜಲಿಂಗಂ ನನ್ನು ಉಮ್ಮರ್ ತನ್ನ ಜೀಪಿಗೆ ಹತ್ತಿಸಿಕೊಂಡಿದ್ದನು. ಇದೇ ಒಳ್ಳೆಯ ಸಮಯ ಎಂದರಿತ ಆತ ಮದ್ಯದ ಮತ್ತಿನಲ್ಲಿದ್ದ ರಾಜಲಿಂಗಂನನ್ನು ಅಲ್ಲಿಂದ ಒಂದಷ್ಟು ದೂರ ಕರೆದೊಯ್ದು ಸಿಂಕೋನ ಎಸ್ಟೇಟ್ ಪಕ್ಕದ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹಗ್ಗದಿಂದ ಕತ್ತನ್ನು ಬಿಗಿದು ಕೊಲೆಗೈದಿದ್ದನು. ಬಳಿಕ ಮಕ್ಕಂದೂರಿನ ಕುಪ್ಪಂಡ ಮಂದಣ್ಣ ಎಂಬವರ ತೋಟದ ಕೆರೆಯ ಬಳಿ ಆತನ ರುಂಡ, ಮುಂಡ ಕೈಕಾಲುಗಳನ್ನು ಕತ್ತರಿಸಿ ಮುಂಡಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿ, ಕೈಕಾಲುಗಳನ್ನು ಪಕ್ಕದ ಹೊಂಡದಲ್ಲಿ ಹೂತು ಹಾಕಿ ಏನೂ ಗೊತ್ತಿಲ್ಲದವನಂತೆ ಮನೆಯತ್ತ ಬಂದಿದ್ದನು.
ಘಟನೆ ನಡೆದ ಮೂರು ದಿನಗಳ ಬಳಿಕ ಜೂ.16ರಂದು ಪತ್ನಿ ಮಣಿ ತನ್ನ ಪತಿ ರಾಜಲಿಂಗಂ ಕೆಲಸಕ್ಕೆ ಹೋದವರು ಮನೆಗೆ ಬಂದಿಲ್ಲ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ನಂತರ ಕೆರೆಯೊಂದರಲ್ಲಿ ಸಿಕ್ಕ ರಾಜಲಿಂಗಂ ದೇಹದ ಭಾಗಗಳನ್ನು ಪೊಲೀಸರು ಪತ್ತೆ ಮಾಡಿದ್ದರು. ತುಂಡಾದ ಕೈ ಮೇಲಿದ್ದ 'ವ' ಎಂಬ ಹಚ್ಚೆಯಿಂದ ಅದು ರಾಜಲಿಂಗಂದೇ ದೇಹದ ಭಾಗಗಳು ಎಂದು ಆತನ ಪತ್ನಿ ಮಣಿ ಗುರುತಿಸಿದ್ದಳು.
ಕೆಗೆ ಮಣಿಯ ಫೋನಿಗೆ ಉಮ್ಮರ್ ನಂಬರ್ ನಿಂದ ಹೆಚ್ಚಿನ ಕರೆಗಳು ಬಂದಿದ್ದನ್ನು ಗಮನಿಸಿದ ಪೊಲೀಸರಿಗೆ ಅನುಮಾನ ಬಂದು ಉಮ್ಮರ್ ನನ್ನು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಗೆ ಬಂದಿದೆ.












Click it and Unblock the Notifications