ಮಡಿಕೇರಿ: ಯುವತಿಯನ್ನು ಅಪಹರಿಸಿ, ಗೃಹಬಂಧನದಲ್ಲಿಟ್ಟಿದ್ದ ಯುವಕನ ಬಂಧನ
ಮಡಿಕೇರಿ, ಮೇ 28: ತನ್ನ ಸ್ನೇಹಿತನ ಸಹಕಾರದೊಂದಿಗೆ ಯುವತಿಯೊಬ್ಬಳನ್ನು ಅಪಹರಿಸಿ ಗೃಹಬಂಧನದಲ್ಲಿರಿಸಿಕೊಂಡು ಮದುವೆಯಾಗುವಂತೆ ಒತ್ತಾಯಿಸಿದ್ದಲ್ಲದೆ, ಅತ್ಯಾಚಾರಕ್ಕೂ ಯತ್ನಿಸಿದ ಯುವಕನನ್ನು ಸೋಮವಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಡ್ಲಿಪೇಟೆ ನಿವಾಸಿ ಭರತ್ ಬಂಧಿತ ಆರೋಪಿಯಾಗಿದ್ದಾನೆ. ಈತ ಸೋಮವಾರಪೇಟೆ ತಾಲೂಕಿನ ಹೊಸಬೀಡು ಗ್ರಾಮದ ಯುವತಿಯೊಬ್ಬಳನ್ನು ಅಪಹರಿಸಿದ್ದ. ಮಾತ್ರವಲ್ಲ ಅಕ್ರಮವಾಗಿ ಗೃಹಬಂಧನದಲ್ಲಿ 49ದಿನಗಳ ಕಾಲ ಇರಿಸಿಕೊಂಡಿದ್ದಲ್ಲದೆ, ಗೆಳೆಯನೊಂದಿಗೆ ಸೇರಿ ಅತ್ಯಾಚಾರಕ್ಕೂ ಯತ್ನಿಸಿದ್ದ ಎಂಬುದು ಯುವತಿ ನೀಡಿರುವ ದೂರಿನಿಂದ ತಿಳಿದು ಬಂದಿದೆ.

ಮನೆಯಿಂದ ಹೊರ ಬಂದಿದ್ದ ಯುವತಿಯನ್ನು ಭರತ್ ತನ್ನ ಸ್ನೇಹಿತ ಜಾನ್ಸನ್ ಜತೆ ಸೇರಿ ಅಪಹರಿಸಿ ಸುಮಾರು 49 ದಿನಗಳ ಕಾಲ ಆಕೆಯನ್ನು ಗೃಹಬಂಧನದಲ್ಲಿರಿಸಿಕೊಂಡಿದ್ದ ಎನ್ನಲಾಗಿದೆ.
ಮನೆಯಿಂದ ಹೊರಹೋದವಳು ನಾಪತ್ತೆಯಾಗಿದ್ದರಿಂದ ಪೋಷಕರು ಆತಂಕಗೊಂಡಿದ್ದರು. ಹಲವೆಡೆ ಹುಡುಕಾಟವನ್ನು ನಡೆಸಿದ್ದರು. ಆದರೆ ಮಗಳ ಸುಳಿವು ಸಿಕ್ಕಿರಲಿಲ್ಲ ಹೀಗಾಗಿ ಅವರು ಕಣ್ಣೀರಲ್ಲೇ ದಿನಕಳೆಯುತ್ತಿದ್ದರು.
ಇತ್ತ ಯುವತಿಯನ್ನು ಅಪಹರಿಸಿದ ಭರತ್ ಮದುವೆಯಾಗುವಂತೆ ಒತ್ತಾಯ ಮಾಡತೊಡಗಿದ್ದ. ಆಕೆ ಒಪ್ಪದಿದ್ದಾಗ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಆದರೆ ಯುವತಿ ಪ್ರತಿರೋಧ ಒಡ್ಡಿದ್ದಳು. ಹೆಚ್ಚು ದಿನ ಒಂದೇ ಕಡೆ ಆಕೆಯನ್ನಿಟ್ಟುಕೊಂಡರೆ ಕಷ್ಟವಾಗುತ್ತದೆ ಎಂದರಿತ ಆತ ಆಗಾಗ್ಗೆ ಬೇರೆ, ಬೇರೆ ಕಡೆಗೆ ಕರೆದೊಯ್ದಿದ್ದಾನೆ.
ಈ ನಡುವೆ ಆಕೆಗೆ ಬೆದರಿಕೆ ಹಾಕಿದ ಭರತ್ ನೀನು ನನ್ನನ್ನು ಮದುವೆಯಾಗಲು ಒಪ್ಪುವ ತನಕ ಬಿಡುವುದಿಲ್ಲ. ಮದುವೆಯಾಗದೆ ಹೋದರೆ ಕೊಲ್ಲುವುದಾಗಿ ಬೆದರಿಕೆಯನ್ನು ಹಾಕಿದ್ದನು. ಈ ನಡುವೆ ಯುವತಿಯನ್ನು ಶುಕ್ರವಾರ ಸಂತೆಯ ಕಾಮನಹಳ್ಳಿ ಎಂಬಲ್ಲಿಗೆ ಕರೆದೊಯ್ದ ಸಂದರ್ಭ ಯುವತಿ ಪಕ್ಕದ ಮನೆಯವರ ಮೊಬೈಲ್‍ನಿಂದ ತನ್ನ ತಾಯಿಗೆ ಕರೆ ಮಾಡಿ ತನ್ನನ್ನು ಅಪಹರಿಸಿರುವ ಕುರಿತು ಮತ್ತು ಗೃಹಬಂಧನದಲ್ಲಿರಿಸಿರುವ ಬಗ್ಗೆ ಮಾಹಿತಿ ನೀಡಿದ್ದಳು.
ಈ ಕುರಿತು ಪೋಷಕರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆಗೆ ಪೊಲೀಸರು ಕಾಮನಹಳ್ಳಿಗೆ ತೆರಳಿ ಯುವತಿಯನ್ನು ರಕ್ಷಿಸಿ ಆರೋಪಿ ಭರತ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಯುವತಿ ನೀಡಿದ ಹೇಳಿಕೆಯಂತೆ ಅಪಹರಣ, ಅಕ್ರಮ ಗೃಹಬಂಧನ, ಮಾನಭಂಗಕ್ಕೆ ಯತ್ನ ಪ್ರಕರವನ್ನು ಆರೋಪಿ ಭರತ್ ಮತ್ತು ಸ್ನೇಹಿತ ಜಾನ್ಸನ್ ವಿರುದ್ಧ ದಾಖಲಿಸಿದ್ದಾರೆ.
ಭರತ್‍ನನ್ನು ಬಂಧಿಸಲಾಗಿದ್ದು ನ್ಯಾಯಾಲಯದ ಎದುರು ಹಾಜರುಪಡಿಸಿದಾಗ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪೊಲೀಸರು ಮತ್ತೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications