ಮಡಿಕೇರಿ ದಸರಾ ದಿನ ವ್ಯಕ್ತಿಯನ್ನು ಕೊಲೆಗೈದಿದ್ದ ಹಂತಕರ ಬಂಧನ
ಮಡಿಕೇರಿ, ಅಕ್ಟೋಬರ್ 5: ಮಡಿಕೇರಿ ದಸರಾ ದಿನ ರಾತ್ರಿ ವೇಳೆ ಗಾಂಜಾ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಕೊಲೆಗೈದ ಮೂವರು ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಗಣಪತಿ ಬೀದಿಯ ನಿವಾಸಿ ಮೊಬೈಲ್ ಟೆಕ್ನೀಷಿಯನ್ ಅಬ್ದುಲ್ ರೋಷನ್ ರೆಹಮಾನ್(32), ಮಹದೇವಪೇಟೆಯ ನಿವಾಸಿ ಕಾರು ಚಾಲಕ ಮೊಹಮ್ಮದ್ ರಶೀದ್(34) ಮತ್ತು ಮಖಾನ್ ಗಲ್ಲಿ ನಿವಾಸಿ ಆಟೋ ಚಾಲಕ ನಜೀರ್ (28) ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ದಸರಾ ದಿನ ಅಂದರೆ ಸೆಪ್ಟೆಂಬರ್ 30ರ ರಾತ್ರಿ ನಗರದ ಹೊರವಲಯದ ರಾಜರಾಜೇಶ್ವರಿ ನಗರ ನಿವಾಸಿ ಕಾರ್ಮಿಕ ಮೂರ್ತಿ ಹಾಗೂ ಚಂದ್ರಮ್ಮ ದಂಪತಿ ಪುತ್ರ ಚಂದ್ರಶೇಖರ್ (27) ಎಂಬಾತನ್ನು ಈ ಮೂವರು ಕೊಲೆಗೈದಿದ್ದರು. ಕೊಲೆಗೀಡಾದ ಯುವಕ ಹೋಟೆಲ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲದೆ ಆತ ಮತ್ತು ಹಂತಕರು ಸ್ನೇಹಿತರಾಗಿದ್ದು, ಚಂದ್ರಶೇಖರ್‍ನಿಂದ ಗಾಂಜಾವನ್ನು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ರೋಷನ್‍ನ ಸ್ನೇಹಿತನಾಗಿದ್ದ ಚಂದ್ರಶೇಖರ್ ಕೆಲವೊಮ್ಮೆ ಜಟಾಪಟಿಗೆ ಇಳಿದು ಬಿಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಚಂದ್ರಶೇಖರ್ ರೋಷನ್ ತಾಯಿಯನ್ನೇ ಅಶ್ಲೀಲ ಭಾಷೆಗಳಿಂದ ಬೈಯ್ಯುತ್ತಿದ್ದ. ಇದರಿಂದ ಆಕ್ರೋಶಗೊಂಡಿದ್ದ ರೋಷನ್ ಚಂದ್ರಶೇಖರ್‍ನನ್ನು ಮುಗಿಸಲು ಹೊಂಚು ಹಾಕಿದ್ದನು.
ದಸರಾ ದಿನ ಜನ ಜಂಗುಳಿಯಲ್ಲಿ ಕೊಲೆಗೈದರೆ ಯಾರಿಗೂ ತಿಳಿಯುವುದಿಲ್ಲ ಎಂದು ಆಲೋಚಿಸಿದ ರೋಷನ್ ತನ್ನ ಗೆಳೆಯರಾದ ಮೊಹಮ್ಮದ್ ರಶೀದ್ ಮತ್ತು ನಜೀರ್ ಜೊತೆ ಸೇರಿ ಸ್ಕೆಚ್ ಸಿದ್ದಪಡಿಸಿದ್ದ.
ದಸರಾ ದಿನ ರಾತ್ರಿ ನಗರದ ಕಾಲೇಜು ರಸ್ತೆಯಲ್ಲಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿ ಬಳಿಕ ಕೆಲ ಹೊತ್ತಿನಲ್ಲಿ ಕಾರ್ಪೊರೇಷನ್ ಬ್ಯಾಂಕ್ ಬಳಿ ಮತ್ತೆ ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಕೆಲವರು ಆತನನ್ನು ಹಲ್ಲೆಕೋರರಿಂದ ರಕ್ಷಿಸಿ ಕಳುಹಿಸಿಕೊಟ್ಟಿದ್ದರು.
ಅದಾದ ಬಳಿಕ ಆತನನ್ನು ಹಿಂಬಾಲಿಸಿದ ಹಂತಕರು ಅಕ್ಟೋಬರ್ 1ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಹದೇವಪೇಟೆ ಕನ್ನಿಕಾಪರಮೇಶ್ವರಿ ದೇವಾಲಯ ಎದುರು ಚಂದ್ರಶೇಖರ್ ಎಡಕಿವಿ ಹಿಂಭಾಗಕ್ಕೆ ಮಾರಕಾಸ್ತ್ರದಿಂದ ಹೊಡೆದಿದ್ದರು. ಇದರಿಂದ ಗಂಭೀರ ಗಾಯಗೊಂಡಿದ್ದ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದನು.
ಈತನ ಸಂಬಂಧಿ ಎಸ್.ಎಸ್. ಮೋಹನ್ ಹಾಗೂ ಕುಟುಂಬ ಅದೇ ಮಾರ್ಗದಲ್ಲಿ ದಸರಾ ನೋಡಲು ಬಂದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಚಂದ್ರಶೇಖರ್ನನ್ನು ಕಂಡು ಪೊಲೀಸ್ ವಾಹನದಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರಲ್ಲದೆ, ಅ.4ರಂದು ಬೆಳಗ್ಗೆ 5.30 ಗಂಟೆಗೆ ಕುಶಾಲನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಅಬ್ದುಲ್ ರೋಷನ್ ರೆಹಮಾನ್ ಇರುವ ಬಗ್ಗೆ ಮಾಹಿತಿ ಪಡೆದು ಬಂಧಿಸಿದ್ದಾರೆ.












Click it and Unblock the Notifications