• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿರ್ವಹಣೆಯಿಲ್ಲದೆ ಸೊರಗುತ್ತಿವೆ ಮಡಿಕೇರಿಯ ಪ್ರವಾಸಿ ತಾಣಗಳು

By ಬಿ.ಎಂ.ಲವಕುಮಾರ್
|

ಇಲ್ಲಿನ ವಾತಾವರಣ, ನಿಸರ್ಗಸಿರಿ, ಪ್ರವಾಸಿ ತಾಣಗಳನ್ನು ನೋಡುವ ಸಲುವಾಗಿ ದೂರದಿಂದ ಬರುವ ಪ್ರವಾಸಿಗರಿಗೆ ಪ್ರವಾಸಿ ತಾಣಗಳು ಮಾತ್ರ ನಿರಾಸೆ ಮೂಡಿಸುತ್ತವೆ. ಕಾರಣ ಬಹಳಷ್ಟು ಪ್ರವಾಸಿ ತಾಣಗಳು ನಿರ್ಲಕ್ಷ್ಯಕ್ಕೊಳಗಾಗಿರುವುದು ಅವರ ಕಣ್ಣಿಗೆ ರಾಚುತ್ತದೆ.

ಜಿಲ್ಲೆಯ ಮುಖ್ಯಪಟ್ಟಣ ಮಡಿಕೇರಿಯಲ್ಲಿರುವ ಪ್ರವಾಸಿ ತಾಣಗಳು ನಿರ್ವಹಣೆಯ ಕೊರತೆಯಿಂದ ಕಳಾಹೀನವಾಗಿರುವಾಗ ಇನ್ನು ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರವಾಸಿ ತಾಣಗಳ ಪರಿಸ್ಥಿತಿಯಂತೂ ಹೇಳತೀರದ್ದಾಗಿದೆ. ಇಂತಹ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗ ಅಯ್ಯೋ ಇದನ್ನು ಎಷ್ಟೊಂದು ಚೆನ್ನಾಗಿ ಅಭಿವೃದ್ಧಿ ಮಾಡಬಹುದಿತ್ತು. ಏಕೆ ಹೀಗೆ ಬಿಟ್ಟಿದ್ದಾರೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಮಖಾ ಮಳೆಯ ಆರ್ಭಟಕ್ಕೆ ಮೈಯದುಂಬಿದೆ ಅಬ್ಬಿ ಜಲಪಾತ

ಪ್ರವಾಸಿಗರ ಇಂತಹ ವಿಷಾದದ ನುಡಿಗೆ ಹೆಚ್ಚು ಒಳಗಾಗುತ್ತಿರುವುದು ಮಡಿಕೇರಿಯ ರಾಜರ ಕಾಲದ ಗದ್ದಿಗೆಯಾಗಿದೆ. ಈ ಗದ್ದಿಗೆ ಮಡಿಕೇರಿ ನಗರದ ಎತ್ತರದ ಗುಡ್ಡದಲ್ಲಿ ನಿರ್ಮಾಣವಾಗಿದ್ದು ಎಲ್ಲರ ಗಮನವನ್ನು ಸೆಳೆಯುತ್ತಿದೆ. ಹೊರಗಿನಿಂದ ಬರುವ ಪ್ರವಾಸಿಗರು ದೂರದಿಂದ ನೋಡಿ ಹತ್ತಿರ ಹೋಗಲು ತವಕಿಸುತ್ತಾರೆ. ಆದರೆ ಹತ್ತಿರ ಹೋದರೆ ಅಂದಿನ ರಾಜರ ಗದ್ದಿಗೆ ಈಗ ತಲುಪಿರುವ ಪರಿಸ್ಥಿತಿಯನ್ನು ಕಂಡು ಮಮ್ಮಲಮರುಗುತ್ತಾರೆ. ಏಕೆಂದರೆ ಇದು ಇರುವ ಸ್ಥಿತಿಯೇ ಹಾಗಿದೆ. ನಿರ್ವಹಣೆಯ ಕೊರತೆ, ನಿರ್ಲಕ್ಷ್ಯ ಎಲ್ಲವೂ ಸೇರಿ ಪಾರಂಪರಿಕ ಕಟ್ಟಡವೊಂದು ಅವನತಿ ಹಾದಿಯಲ್ಲಿ ಸಾಗುತ್ತಿದೆಯೇನೋ ಎಂಬಂತೆ ಕಾಣುತ್ತದೆ.

ತಲಕಾವೇರಿಯಲ್ಲಿ ನಿವಾರಣೆಯಾಗದ ದೋಷ, ಬತ್ತಿ ಹೋಗುತ್ತಾ ಕಾವೇರಿ?

ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಐತಿಹಾಸಿಕ ಸ್ಮಾರಕವಾದ ಗದ್ದಿಗೆ ತನ್ನದೇ ಆದ ಇತಿಹಾಸ ಸಾರುತ್ತಾ ಮತ್ತು ಇಲ್ಲಿನ ರಾಜರ ಆಡಳಿತಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಕೊಡಗನ್ನು ಆಳಿದ ಹಾಲೇರಿ ವಂಶದ ಅರಸರ ಪೈಕಿ ರಾಜ ವೀರರಾಜೇಂದ್ರ ಅವರ ಪತ್ನಿ ಮಹದೇವಮ್ಮ ಅವರ ಗದ್ದಿಗೆ (ಮಧ್ಯ ಭಾಗ), ಲಿಂಗರಾಜೇಂದ್ರ ಮತ್ತು ದೇವಮ್ಮಾಜಿ ದಂಪತಿಗಳ ಗದ್ದಿಗೆ (ಬಲಭಾಗ) ಇಲ್ಲಿದ್ದು, ಇನ್ನು ಎಡಭಾಗದಲ್ಲಿ 1834ರಲ್ಲಿ ನಿರ್ಮಿಸಿರುವ ರಾಜಪುರೋಹಿತಮುನಿಗಳ ಗದ್ದಿಗೆಯಿದೆ. ಇದಲ್ಲದೆ ಟಿಪ್ಪುಸುಲ್ತಾನ್ ನೊಂದಿಗೆ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸೇನಾಪತಿ ಬಿದ್ದಂಡ ಬೋಪು ಹಾಗೂ ಅವರ ಪುತ್ರ ಬಿದ್ದಂಡ ಸೋಮಯ್ಯ ಅವರ ಸಮಾಧಿಗಳನ್ನು ಕಾಣಬಹುದಾಗಿದೆ.

ಇಂಡೋಸಾರ್ಸೆನಿಕ್ ಶೈಲಿಯ ಕಟ್ಟಡ

ಇಂಡೋಸಾರ್ಸೆನಿಕ್ ಶೈಲಿಯ ಕಟ್ಟಡ

ಇಂಡೋಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಗದ್ದಿಗೆಗಳು ಅಪರೂಪದ ವಾಸ್ತುಶಿಲ್ಪವನ್ನು ಹೊಂದಿವೆ. ಇಲ್ಲಿ ಕೆತ್ತಲಾಗಿರುವ ಕಲ್ಲಿನ ಕೆತ್ತನೆಗಳು ಕೂಡ ಆಕರ್ಷಕವಾಗಿದೆ. ಕಟ್ಟಡವು ಪ್ರಧಾನ ಗುಮ್ಮಟ ಹಾಗೂ ನಾಲ್ಕು ಮೂಲೆಯಲ್ಲಿ ಚಿಕ್ಕದಾದ ಗುಮ್ಮಟವನ್ನು ಹೊಂದಿ ಗಮನಸೆಳೆಯುತ್ತದೆ. ಕಿಟಕಿಗೆ ಪಂಚಲೋಹದ ಸರಳುಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಕೊಡಗು ದೇವಸ್ಥಾನಗಳ ನಿಧಿ ವ್ಯವಸ್ಥಾಪನಾ ಸಮಿತಿಯ ಅಧೀನದಲ್ಲಿದ್ದ ಗದ್ದಿಗೆಯನ್ನು 25-9-1981ರಲ್ಲಿ ಸರ್ಕಾರಿ ಸುತ್ತೋಲೆ ಹೊರಡಿಸಿ ಪುರಾತತ್ವ ಇಲಾಖೆಯ ಅಧೀನಕ್ಕೊಳಪಡಿಸಲಾಗಿದೆ. ಆದರೆ ಅಭಿವೃದ್ಧಿ ಶೂನ್ಯವಾಗಿದೆ.

ಅಭಿವೃದ್ಧಿ ಮಾಡಿದ್ರೂ ಅಪ್ರಯೋಜಕ

ಅಭಿವೃದ್ಧಿ ಮಾಡಿದ್ರೂ ಅಪ್ರಯೋಜಕ

ಐದು ವರ್ಷ ಹಿಂದೆ ಲಕ್ಷಾಂತರ ರೂಪಾಯಿ ವೆಚ್ಚದಿಂದ ನಗರ ಅಭಿವೃದ್ಧಿ ಪ್ರಾಧಿಕಾರ ಸುರಕ್ಷಾ ಬೇಲಿಯೊಂದಿಗೆ ಕಾಯಕಲ್ಪ ನೀಡಿದ್ದರೂ ಕೂಡ ತೋಟಗಾರಿಕಾ ಇಲಾಖೆ ನಿರ್ವಹಣೆ ಮಾಡದೆ ನಿರ್ಲಕ್ಷ್ಯ ವಹಿಸಿರುವುದು ಕಾಣುತ್ತಿದೆ. 2011-12ನೇ ಸಾಲಿನಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪಿ. ಶಜಿಲ್ ಕೃಷ್ಣನ್ ನೇತೃತ್ವದ ಆಡಳಿತ ಮಂಡಳಿ, ಅಂದಿನ ಸರಕಾರದ ಸಹಕಾರ ಪಡೆದು ರೂ. 66.85 ಲಕ್ಷ ವೆಚ್ಚದಲ್ಲಿ ಸಂಪೂರ್ಣ ಚೈನ್ ಲಿಂಕ್ ಕಾಂಪೌಂಡ್ ಬೇಲಿ ನಿರ್ಮಾಣದೊಂದಿಗೆ ಅಭಿವೃದ್ಧಿಗೊಳಿಸಿತ್ತು. ಅಲ್ಲದೆ ಅಲ್ಲಿ ಸುಸಜ್ಜಿತ ತಾವರೆ ಪುಷ್ಪದ ಕೊಳ, ಚಿಣ್ಣರಿಗೆ ಆಟವಾಡಲು ಉದ್ಯಾನ, ಪ್ರವಾಸಿಗರಿಗೆ ಸಂಚಾರ ಮಾರ್ಗ, ವಾಯು ವಿಹಾರಕ್ಕೆ ಪೂರಕ ಕಲ್ಲು ಬೆಂಚುಗಳು, ಸಂಜೆಗತ್ತಲೆ ನಡುವೆ ಬೆಳಕು ವ್ಯವಸ್ಥೆ ಇತ್ಯಾದಿ ಅನುಕೂಲತೆ ಮಾಡಿಕೊಟ್ಟಿತ್ತು. ಜತೆಗೆ ಮಡಿಕೇರಿ ರಾಜಪರಂಪರೆಯ ಲಿಂಗರಾಜ ದಂಪತಿ ಗದ್ದುಗೆ, ರಾಜಗುರು ರುದ್ರಮುನಿಗಳ ಗದ್ದುಗೆ, ವೀರರಾಜ ಗದ್ದುಗೆ ಇತ್ಯಾದಿ ಯೊಂದಿಗೆ, ಅಂದಿನ ಕೊಡಗಿನ ದಿವಾನರಾಗಿದ್ದ ಬಿದ್ದಂಡ ಬೋಪಣ್ಣ ಹಾಗೂ ಸೋಮಯ್ಯ ಸ್ಮಾರಕಗಳ ಸಹಿತ ಐದು ಎಕರೆ ಪ್ರದೇಶದಲ್ಲಿ ಉದ್ಯಾನ ನಿರ್ಮಿಸಿತ್ತು.

ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ

ತೋಟಗಾರಿಕೆ ಇಲಾಖೆ ನಿರ್ಲಕ್ಷ್ಯ

ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಐದು ಹಂತದ ಯೋಜನೆ ಸಲುವಾಗಿ, ಆದ್ಯತೆ ಮೇರೆಗೆ ಚೈನ್ ಲಿಂಕ್ ಕಾಂಪೌಂಡ್ ಹಾಗೂ ಸಾರ್ವಜನಿಕ ಉಪಯೋಗಕ್ಕಾಗಿಯೇ ಉದ್ಯಾನವನ ನಿವೇಶನ ಅಭಿವೃದ್ಧಿಯನ್ನು ರೂಪುಗೊಳಿಸಲು ರೂ. 40 ಲಕ್ಷದ ಕಾಮಗಾರಿ ಕೈಗೊಳ್ಳಲಾಗಿತ್ತು. ಅಲ್ಲದೆ ಉಳಿಕೆ ಹಣ ರೂ. 26.85 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ, ಪುಷ್ಪೋದ್ಯಾನ, ಹುಲ್ಲಿನ ನೆಲ ಹಾಸು, ಇಂಟರ್ಲಾಕ್ ವ್ಯವಸ್ಥೆ, ಗಿಡಗಳಿಗೆ ನೀರು ಹಾಯಿಸಲು ತುಂತುರು ನೀರಾವರಿ ವ್ಯವಸ್ಥೆ, ನೀರು ಶೇಖರಣ ಟ್ಯಾಂಕ್ ಮುಂತಾದ ಕಾಮಗಾರಿ ಕೈಗೊಂಡು ಒಂದು ವರ್ಷ ನಿರ್ವಹಣೆ ಬಳಿಕ ತೋಟಗಾರಿಕಾ ಇಲಾಖೆಯ ಸುಪರ್ದಿಗೆ ಬಿಟ್ಟುಕೊಡಲಾಗಿತ್ತು. ಆದರೆ ಸೂಕ್ತ ನಿರ್ವಹಣೆಯ ಕೊರತೆಯಿಂದಾಗಿ ನಿರ್ಲಕ್ಷ್ಯಕ್ಕೊಳಗಾಗಿರುವುದು ಈಗ ಕಂಡು ಬರುತ್ತಿದೆ.

ಗದ್ದಿಗೆಗೊಂದು ಕಳೆ ಬರುತ್ತಾ?

ಗದ್ದಿಗೆಗೊಂದು ಕಳೆ ಬರುತ್ತಾ?

ಕರ್ನಾಟಕ ಪ್ರಾಚ್ಯವಸ್ತು ಇಲಾಖೆಯ ಅಧೀನದಲ್ಲಿರುವ ಗದ್ದುಗೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪವಿಡುತ್ತಿದ್ದ ಸಂಪ್ರದಾಯವೂ ನಿಂತು ಹೋಗಿದೆ ಎನ್ನಲಾಗುತ್ತಿದೆ. ಚಿಣ್ಣರಿಗೆ ಮುದ ನೀಡಲು ಅಳವಡಿಸಿದ್ದ ಆಟಿಕೆ ಯಂತ್ರಗಳು ದುಸ್ಥಿಗೀಡಾಗಿವೆ. ಇಲ್ಲಿ ಯಾವುದೇ ರೀತಿಯ ಶೌಚಾಲಯವಿಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಇತ್ತ ಗಮನಹರಿಸಿ ತಾಣವನ್ನು ಅಭಿವೃದ್ಧಿಗೊಳಿಸಿದ್ದೇ ಆದರೆ ಹೆಚ್ಚು ಹೆಚ್ಚಾಗಿ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madikeri is undoubtedly one of the best tourist places of Karnataka. Beautiful nature, greenary, chill weather make the district the best tourism destination. But some places, especially historically important places have neglected by tourist department now a days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more