ನಿದ್ರೆಯ ಸಮಸ್ಯೆ ಕಾಡುತ್ತಿದೆಯೇ? ಗುಲಾಬಿ ಹೂವನ್ನು ಈ ರೀತಿ ಬಳಸಿದರೆ ಅವರಿಸುವುದು ಗಾಢ ನಿದ್ದೆ
ಪ್ರಕೃತಿಯಲ್ಲಿ ಅನೇಕ ವಿಧದ ಹೂವುಗಳಿವೆ. ಪುಷ್ಪಗಳ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲ. ಅಂಥಹ ಸುಂದರ ಕುಸುಮಗಳಲ್ಲಿ ಒಂದು ಗುಲಾಬಿ. ಇದು ತನ್ನ ಸೌಂದರ್ಯ ಮತ್ತು ಬೀರುವ ಸುವಾಸನೆಗೆ ಹೆಸರು ವಾಸಿ. ಅಷ್ಟೇ ಅಲ್ಲ ಆರೋಗ್ಯಕ್ಕೂ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಆಯುರ್ವೇದದ ಪ್ರಕಾರ, ಗುಲಾಬಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಬೇಸಿಗೆಯಲ್ಲಿ ಏರುತ್ತಿರುವ ತಾಪಮಾನದಿಂದ ದೇಹವನ್ನು ರಕ್ಷಿಸುವಲ್ಲಿ ಗುಲಾಬಿ ಪ್ರಮುಖ ಪಾತ್ರ ವಹಿಸುತ್ತದೆ.
ಬೇಸಿಗೆಯಲ್ಲಿ ಕಾಡುವ ಆರೋಗ್ಯ ಸಮಸ್ಯೆಗೆ ಪರಿಹಾರ:
ಬೇಸಿಗೆಯಲ್ಲಿ ಕೆಲವೊಂದು ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಕಾಡುವ ಬಾಯಿ ಹುಣ್ಣು, ಮೈ ಉರಿ, ಅತಿಯಾದ ಬಾಯಾರಿಕೆಯಂತಹ ಸಮಸ್ಯೆಗಳಿಗೆ ಗುಲಾಬಿ ರಾಮಬಾಣವಾಗಿ ಕೆಲಸ ಮಾಡಬಹುದು. ಗುಲಾಬಿ ದಳಗಳಿಂದ ತಯಾರಿಸುವ 'ಗುಲ್ಕಂದ್' ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಬೇಸಿಗೆ ಕಾಲದಲ್ಲಿ ಪ್ರತಿ ದಿನ ಒಂದು ಚಮಚ ಗುಲ್ಕಂದ್ ಸೇವಿಸುವುದರಿಂದ ಹೊಟ್ಟೆ ಶುದ್ಧವಾಗುವುದಲ್ಲದೆ, ಮಲಬದ್ಧತೆಯಿಂದ ಪರಿಹಾರ ಸಿಗುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಕಾಡುವ ಆಸಿಡಿಟಿ, ಅಜೀರ್ಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಹಸಿವನ್ನು ಹೆಚ್ಚಿಸುತ್ತದೆ.

ಬೇಸಿಗೆಯಲ್ಲಿ ತ್ವಚೆಯ ಆರೋಗ್ಯಕ್ಕೆ:
ಇನ್ನು ರೋಸ್ ವಾಟರ್ ನೈಸರ್ಗಿಕ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಮುಖಕ್ಕೆ ರೋಸ್ ವಾಟರ್ ಹಚ್ಚುವುದರಿಂದ ಮುಖದ ಮೇಲೆ ಅಂಟಿಕೊಂಡಿರುವ ಧೂಳು, ಕೊಳೆ ಮಾಯವಾಗುವುದು. ಜೊತೆಗೆ ಇದು ತ್ವಚೆಗೆ ಹೊಸ ಹೊಳಪು ನೀಡುತ್ತದೆ.ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವ ಕಾರಣ ಮೊಡವೆ ಮತ್ತು ಅಲರ್ಜಿಯ ಸಮಸ್ಯೆಗೂ ಪರಿಹಾರವಾಗಿ ಕೆಲಸ ಮಾಡುತ್ತದೆ. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳನ್ನು ಗಂಟೆಗಟ್ಟಲೆ ಬಳಸುವುದರಿಂದ ಉಂಟಾಗುವ ಕಣ್ಣಿನ ಕಿರಿಕಿರಿ, ಆಯಾಸ, ನೋವು ನಿವಾರಣೆಗೂ ಸಹಾಯ ಮಾಡುತ್ತದೆ. ಶುದ್ಧ ರೋಸ್ ವಾಟರ್‌ನ ಎರಡು ಹನಿಗಳನ್ನು ಕಣ್ಣುಗಳಲ್ಲಿ ಹಾಕುವುದರಿಂದ ಕಣ್ಣುಗಳು ತಂಪಾಗುತ್ತವೆ. ಕೆಂಪು ಬಣ್ಣಕ್ಕೆ ತಿರುಗಿರುವ ಕಣ್ಣು ಮತ್ತೆ ತಿಳಿಯಾಗುತ್ತದೆ. ಹತ್ತಿ ಉಂಡೆಯಿಂದ ರೋಸ್ ವಾಟರ್ ಅನ್ನು ಕಣ್ಣುಗಳ ಮೇಲೆ ಇಡುವುದರಿಂದ ಕಣ್ಣಿನ ಊತ ಕಡಿಮೆಯಾಗುತ್ತದೆ.
ನಿದ್ರಾ ಹೀನತೆಗೆ ಪರಿಹಾರ:
ಗುಲಾಬಿಯ ಪರಿಮಳ ಮನಸ್ಸನ್ನು ಶಾಂತಗೊಳಿಸುತ್ತದೆ. ಕೆಲಸದ ಒತ್ತಡದಿಂದ ಉಂಟಾಗುವ ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಗುಲಾಬಿ 'ನೈಸರ್ಗಿಕ ಚಿಕಿತ್ಸೆ'ಯಾಗಿ ಕಾರ್ಯನಿರ್ವಹಿಸುತ್ತದೆ. ರಾತ್ರಿ ವೇಳೆ ಊಟದ ನಂತರ ಮಲಗುವ ಮುನ್ನ ಗುಲಾಬಿ ದಳಗಳನ್ನು ಹಾಕಿ ಕುದಿಸಿದ ನೀರು ಕುಡಿಯುವುದರಿಂದ ಅಥವಾ ಗುಲಾಬಿ ಎಣ್ಣೆಯನ್ನು ಬಳಸುವುದರಿಂದ ಒತ್ತಡ ಕಡಿಮೆಯಾಗುತ್ತದೆ.ಇದು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಅಂದರೆ ರಾತ್ರಿಯ ಸುಖ ನಿದ್ದೆಗೆ ಇದು ಸಹಾಯ ಮಾಡುತ್ತದೆ.
ಮುಟ್ಟಿನ ನೋವಿಗೆ ಮದ್ದು:
ಗುಲಾಬಿ ಮಹಿಳೆಯರ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಗುಲ್ಕಂದ್ ಅಥವಾ ಗುಲಾಬಿ ಚಹಾ ಮುಟ್ಟಿನ ಸೆಳೆತ, ಉರಿಯೂತ ಮತ್ತು ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
ಕೂದಲ ಆರೋಗ್ಯಕ್ಕೂ ಸೈ:
ಕೂದಲಿಗೆ ರೋಸ್ ವಾಟರ್ ಹಚ್ಚುವುದರಿಂದ ನೆತ್ತಿ ತಂಪಾಗಿರುತ್ತದೆ. ಇದು ಬೆವರಿನಿಂದ ಉಂಟಾಗುವ ತುರಿಕೆಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕೂದಲು ಹೊಳೆಯುವಂತೆ ಮಾಡುತ್ತದೆ. ರೋಸ್ ವಾಟರ್ ದೇಹದಿಂದ ವಿಷವನ್ನು ಹೊರಹಾಕುವಲ್ಲಿ ಮತ್ತು ರಕ್ತವನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ನಮ್ಮನ್ನು ಚೈತನ್ಯಶೀಲವಾಗಿರಿಸುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications