ಕಾವೇರಿ ತವರಲ್ಲಿ ವರುಣನ ಕಣ್ಣಾಮುಚ್ಚಾಲೆ: ಕೆಆರ್‌ಎಸ್ ಭರ್ತಿ ಯಾವಾಗ?
ಕೊಡಗು, ಜುಲೈ 19: ಕಳೆದ ಐದು ವರ್ಷಗಳಿಂದ ಮುಂಗಾರು ಮಳೆ ಮಲೆನಾಡು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಸುರಿದ ಪರಿಣಾಮ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಜನ ನೆಮ್ಮದಿಯಾಗಿದ್ದರು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಕಾಣಿಸಿರಲಿಲ್ಲ. ಆದರೆ ಈಗ ಕೊಡಗು ಸೇರಿದಂತೆ ಮಲೆನಾಡಿನಲ್ಲಿ ಮಳೆ ಕಣ್ಣಮುಚ್ಚಾಲೆ ಆಡುತ್ತಿರುವುದನ್ನು ನೋಡಿದರೆ ಈ ವರ್ಷ ಕೆಆರ್‌ಎಸ್ ಜಲಾಶಯ ಭರ್ತಿಯಾಗುತ್ತಾ? ಎಂಬ ಪ್ರಶ್ನೆ ಮೂಡಿದೆ.
ಮಲೆನಾಡಿನಲ್ಲಿ ಇಷ್ಟರಲ್ಲೇ ಮಳೆಗಾಲದ ದಿನಗಳ ಅರ್ಧ ಭಾಗ ಮುಗಿದು ಹೋಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿದರೂ ಕೆಆರ್‌ಎಸ್ ಜಲಾಶಯ ಭರ್ತಿಯಾಗುವಷ್ಟು ನೀರು ಹರಿದು ಬರುತ್ತಾ? ಎಂಬ ಪ್ರಶ್ನೆೇಗಳು ಕಾಡಲಾರಂಭಿಸಿವೆ. ಆದರೆ ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಉತ್ತಮ ಮಳೆಯಾಗಿ ಹೇಮಾವತಿ, ಲಕ್ಷ್ಮಣತೀರ್ಥ ಹಾಗೂ ಕಾವೇರಿ ನದಿಗಳು ತುಂಬಿ ಹರಿದರೆ ಕೆಆರ್‌ಎಸ್ ಜಲಾಶಯ ಭರ್ತಿಯಾಗುವುದು ಕಷ್ಟವಾಗಲಾರದು. ಆದರೆ ಅಂತಹ ಮಳೆ ಮುಂದಿನ ದಿನಗಳಲ್ಲಿ ಸುರಿಯಬೇಕಾಗಿದೆ.

ಕೊಡಗಿನಲ್ಲಿ ಭತ್ತದ ಕೃಷಿ ಮಾಡಬೇಕಾದರೆ ಮುಂಗಾರು ಮಳೆ ಬರಲೇಬೇಕಿದೆ. ಯಥೇಚ್ಛವಾಗಿ ಮಳೆ ಸುರಿದು ಎಲ್ಲೆಂದರಲ್ಲಿ ನೀರು ಉಕ್ಕಿ ಹರಿದಾಗ ಆ ನೀರನ್ನು ಬಳಸಿಕೊಂಡು ಭತ್ತದ ಕೃಷಿ ಮಾಡಲಾಗುತ್ತದೆ. ಹಿಂದಿನ ವರ್ಷಗಳ ಮಳೆಗಾಲದ ದಿನಗಳನ್ನು ನೆನಪಿಸಿಕೊಳ್ಳುವುದಾದರೆ ಸಾಮಾನ್ಯವಾಗಿ ಮೇ ಮತ್ತು ಜೂನ್ ನಲ್ಲಿ ಸುರಿಯುವ ಮಳೆಗೆ ಅಂತರ್ಜಲ ವೃದ್ಧಿಯಾಗಿ ನೀರು ಹರಿದು ಗದ್ದೆಗೆ ಬರುತ್ತಿತ್ತು. ಅದನ್ನು ಬಳಸಿಕೊಂಡು ಜುಲೈ ಮತ್ತು ಆಗಸ್ಟ್ ತಿಂಗಳೊಳಗೆ ಭತ್ತದ ನಾಟಿ ಕಾರ್ಯವನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಮಳೆಯ ಕೊರತೆ ಕೊಡಗಿನ ಭತ್ತದ ಕೃಷಿಕರನ್ನು ಕಾಡುತ್ತಿದ್ದು, ಬಹಳಷ್ಟು ಮಂದಿ ನೀರಿಲ್ಲದ ಕಾರಣ ಭತ್ತದ ಕೃಷಿಯತ್ತ ನಿರಾಸೆ ತಾಳಿದ್ದು, ಕೆಲವರು ಈಗಷ್ಟೇ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.
ಬೆಟ್ಟಗುಡ್ಡಗಳಲ್ಲಿ ನೀರು ಉಕ್ಕಿ ಹರಿಯಬೇಕು
ಕೊಡಗಿನ ಕೃಷಿಕರ ಲೆಕ್ಕಾಚಾರದ ಪ್ರಕಾರ ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ತಿಂಗಳ ಆರಂಭದಲ್ಲಿ ಧಾರಾಕಾರವಾಗಿ ಮಳೆ ಸುರಿದರೆ ಭೂಮಿ ಚೆನ್ನಾಗಿ ತೇವವಾಗಿ ಅಂತರ್ಜಲ ಹೆಚ್ಚಾಗಲು ಅನುಕೂಲವಾಗುತ್ತದೆ. ಜುಲೈ ತಿಂಗಳಲ್ಲಿ ಸುರಿಯುವ ಮಳೆಗೆ ಭೂಮಿಯೊಳಗಿಂದ ಅಂತರ್ಜಲ ವೃದ್ಧಿಗೊಂಡು ಬೆಟ್ಟ, ಗುಡ್ಡ. ಹಳ್ಳ, ಕೊಳ್ಳಗಳಲ್ಲಿ ನೀರು ಉಕ್ಕಿ ಬರುತ್ತದೆ. (ಇದನ್ನು ಇಲ್ಲಿನವರು ಜಲ ಆಗುವುದು ಎನ್ನುತ್ತಾರೆ) ಕೆಲವು ನಿಗದಿತ ಬೆಟ್ಟಪ್ರದೇಶಗಳ ಕಲ್ಲು ಬಂಡೆಗಳ ನಡುವೆ ನೀರು ಹರಿದು ಹೊರಬಂದರೆ ಆ ವರ್ಷ ಉತ್ತಮ ಮಳೆಗಾಲ ಎಂಬ ಲೆಕ್ಕಾಚಾರ ಇಲ್ಲಿನವರದ್ದಾಗಿತ್ತು.
ಜೂನ್ ಅಥವಾ ಜುಲೈ ತಿಂಗಳಲ್ಲಿ ಹುಟ್ಟುವ ಜಲದ ನೀರು ಭತ್ತದ ಕೃಷಿಗೆ ಆಸರೆಯಾಗಿದೆ. ಅಷ್ಟೇ ಅಲ್ಲದೆ ನದಿಗಳು ಸಮ ಪ್ರಮಾಣದಲ್ಲಿ ಹರಿಯಲು ಇದೇ ನೀರು ಸಹಕಾರಿಯಾಗಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮೊದಲಿನಂತೆ ಅಂತರ್ಜಲ ಭೂಮಿಯಿಂದ ಉಕ್ಕಿಹರಿಯುತ್ತಿಲ್ಲ. ಬದಲಿಗೆ ಮಳೆ ಬಂದಾಗ ಮಾತ್ರ ಅಲ್ಲಲ್ಲಿ ನೀರು ಉಕ್ಕಿಹರಿಯುತ್ತದೆಯಾದರೂ ಮಳೆ ನಿಂತಾಗ ಆ ನೀರು ಕೂಡ ಬತ್ತಿಹೋಗುತ್ತದೆ. ಇದರಿಂದಾಗಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಇದಕ್ಕೆ ಕಾರಣಗಳು ಇಲ್ಲದಿಲ್ಲ.

ಅಂತರ್ಜಲದ ಸಮಸ್ಯೆಗೆ ಕಾರಣ ಏನು?
ಒಂದೆರಡು ದಶಕಗಳ ಹಿಂದೆ ಕೊಡಗಿನಲ್ಲಿ ಭತ್ತದ ಕೃಷಿಯೇ ಪ್ರಧಾನವಾಗಿತ್ತು. ಎಲ್ಲೆಂದರಲ್ಲಿ ಭತ್ತದ ಗದ್ದೆಯ ಬಯಲುಗಳಿದ್ದವು. ಹೆಚ್ಚಿನವರು ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಹೀಗಾಗಿ ಐದಾರು ತಿಂಗಳ ಕಾಲ ಭತ್ತದ ಗದ್ದೆಗಳಲ್ಲಿ ನೀರು ನಿಲ್ಲುತ್ತಿದ್ದರಿಂದ ಭೂಮಿಗೆ ನೀರು ಸೇರುತ್ತಿತ್ತಲ್ಲದೆ, ಅಂತರ್ಜಲದ ಮಟ್ಟವೂ ಹೆಚ್ಚಾಗಿರುತ್ತಿತ್ತು. ಆದರೆ ಭತ್ತದ ಗದ್ದೆ ಬಯಲುಗಳು ತೋಟವಾಗಿ ಮಾರ್ಪಟ್ಟ ಕಾರಣ ನೀರು ಎಲ್ಲು ನಿಲ್ಲದೆ ಹರಿದು ಬರುತ್ತಿದ್ದು, ಅಂತರ್ಜಲದ ಸಮಸ್ಯೆ ಕಾಡುತ್ತಿದೆ.
ಈಗ ಭೂಮಿಯಿಂದ ನೀರು ಉಕ್ಕಿ ಹರಿಯ ಬೇಕಾದರೆ ಸಾಮಾನ್ಯ ಮಳೆ ಬಂದರೆ ಸಾಲದು ಮಹಾಮಳೆ ಬರಬೇಕಿದೆ. ಹಾಗೆ ಮಳೆ ಬಂದರೆ ಮಾತ್ರ ನದಿ ಉಕ್ಕಿ ಹರಿಯಲು ಸಾಧ್ಯವಾಗುತ್ತದೆ. ಈ ಬಾರಿ ಜೂನ್ ನಲ್ಲಿ ಸುರಿಯಬೇಕಾದ ಮೃಗಶಿರ ಮತ್ತು ಆರಿದ್ರಾ ಮಳೆ ಸುರಿಯಲಿಲ್ಲ. ಪುನರ್ವಸು ಮಳೆ ಆರಂಭದಲ್ಲಿ ಒಂದೆರಡು ದಿನ ಅಬ್ಬರಿಸಿದರೂ ಮತ್ತೆ ಕ್ಷೀಣವಾಯಿತು. ಇದೀಗ ಪುಷ್ಯ ಮಳೆ ಜುಲೈ 20ರಿಂದ ಆರಂಭವಾಗಲಿದೆ. ಈ ಮಳೆ ಮಳೆ ಧಾರಾಕಾರವಾಗಿ ಸುರಿದರೆ ನದಿಗಳು ಉಕ್ಕಿ ಹರಿದು ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ.
ಆಗಸ್ಟ್‌ನಲ್ಲಿ ಸುರಿಯಬಹುದಾ ಮಹಾಮಳೆ?
ಕಳೆದ ಐದು ವರ್ಷಗಳ ಮಳೆಗಾಲದ ದಿನಗಳನ್ನು ಮೆಲುಕು ಹಾಕಿದರೆ ಆಗಸ್ಟ್ ತಿಂಗಳಲ್ಲಿ ಹೆಚ್ಚು ಮಳೆ ಸುರಿದು ಅನಾಹುತ ಸೃಷ್ಟಿ ಮಾಡಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಉತ್ತಮವಾಗಿ ಆದರೆ ಅಕ್ಟೋಬರ್ ವೇಳೆಗಾದರೂ ಕೆಆರ್‌ಎಸ್ ಜಲಾಶಯ ಭರ್ತಿಯಾಗಬಹುದೇನೋ? ಉತ್ತಮ ಮಳೆಯಾದರೆ ಕೆಆರ್ ಎಸ್ ಜಲಾಶಯ ನೀರನ್ನು ನಂಬಿರುವ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಜನರು ಮತ್ತು ರೈತರು ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ.

ಈ ಹಿಂದೆ 2016ರಲ್ಲಿ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೆಜ್ ತಲುಪಿತ್ತು. ಆದರೆ 2017ರಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರು ಮಳೆ ಕೈಹಿಡಿದಿತ್ತು. ಪರಿಣಾಮ ಒಂದಷ್ಟು ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಆದರೆ ಜಲಾಶಯ ಭರ್ತಿಯಾಗಿರಲಿಲ್ಲ. 2018ರಲ್ಲಿ ಆಗಸ್ಟ್ ನಲ್ಲಿ ಸುರಿದ ಮಹಾಮಳೆಗೆ ಕೊಡಗಿನಲ್ಲಿ ಭೂಕುಸಿತದಂತಹ ಅನಾಹುತ ಸಂಭವಿಸಿದರೂ ಲಕ್ಷಾಂತರ ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಈ ಬಾರಿಯೂ ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಮುಂಗಾರು ಚೇತರಿಸಿಕೊಂಡು ಉತ್ತಮವಾಗಿ ಮಳೆ ಸುರಿದು ಜಲಾಶಯಕ್ಕೆ ನೀರು ಹರಿದು ಬರಬಹುದು ಎಂಬ ನಿರೀಕ್ಷೆ ಎಲ್ಲರದ್ದಾಗಿದೆ. ಅದರಂತೆ ಆಗಲಿ ಎಂಬುದೇ ಎಲ್ಲರ ಪ್ರಾರ್ಥನೆಯಾಗಿದೆ.












Click it and Unblock the Notifications