ಕೊಡಗು: ಮಾವು ಮತ್ತು ಹಲಸು ಮೇಳ 2025ಕ್ಕೆ ಚಾಲನೆ
ಮಡಿಕೇರಿ, ಮೇ 25: ಕೊಡಗು ಜಿಲ್ಲೆಯಲ್ಲಿ ಮಾವು ಮತ್ತು ಹಲಸು ಮೇಳ 2025ಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಹಾಪ್‍ಕಾಮ್ಸ್ ವತಿಯಿಂದ ಮೇ 26ರ ತನಕ ಈ ಮೇಳ ನಡೆಯಲಿದೆ.
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾವು ಮತ್ತು ಹಲಸು ಮೇಳ 2025ಕ್ಕೆ ಚಾಲನೆ ನೀಡಿದರು. ಮಡಿಕೇರಿ ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮಾವು ಮತ್ತು ಹಲಸು ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ತೋಟಗಾರಿಕೆ ಇಲಾಖೆಯ ಅಂಗ ಸಂಸ್ಥೆಯಾದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ವತಿಯಿಂದ ನಗರದ ಅಂಚೆ ಕಚೇರಿಯ ಎದುರು ಇರುವ ಹೈಟೆಕ್ ಮಾರಾಟ ಮಳಿಗೆಯ ಆವರಣದಲ್ಲಿ ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡಲಾಗಿದೆ.
"ಮಾವು ಮತ್ತು ಹಲಸು ಮೇಳಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುವುದರಿಂದ ಬಹಳ ಸಂತಸವಾಗುತ್ತದೆ. ಮಾವು ಮತ್ತು ಹಲಸು ಮೇಳವನ್ನು ಈ ವರ್ಷವೂ ನಾಲ್ಕು ದಿನಗಳವರೆಗೆ ಏರ್ಪಡಿಸಲಾಗಿದೆ" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
"ಮಾವಿನ ಹಣ್ಣುಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಿರುತ್ತದೆ ಹಾಗೂ ತೋಟಗಾರಿಕೆ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಈ ಮೇಳ ನಡೆಯುತ್ತಿದೆ. ಕೊಡಗಿನಲ್ಲಿ ಮಾವಿನ ಮೇಳ ಆಯೋಜಿಸಿರುವುದರಿಂದ ಜನರಿಗೆ ಬೇರೆ ಬೇರೆ ರೀತಿಯ ಮಾವಿನ ತಳಿಗಳು ಲಭ್ಯವಾಗಲು ಸಾಧ್ಯವಾಗುತ್ತದೆ" ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್. ಆರ್. ಯೋಗೇಶ್ ಮಾತನಾಡಿ, "ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ಮಾವು ಮೇಳದ ಉದ್ದೇಶವಾಗಿದೆ" ಎಂದು ತಿಳಿಸಿದರು.
ಮಾವು ಮೇಳದಲ್ಲಿ ಮಲಗೋವಾ, ಸಿಂಧೂರಿ, ರಸಪೂರಿ, ತೋತಾಪುರಿ, ಬಾದಾಮಿ, ಮಲ್ಲಿಕಾ, ದಸೇರಿ ಹಣ್ಣುಗಳನ್ನು ನೈಸರ್ಗಿಕವಾಗಿ ಮಾಗಿಸಿ ರೈತರಿಂದ ಗ್ರಾಹಕರಿಗೆ ಯೋಗ್ಯ ಬೆಲೆಗೆ ನೇರವಾಗಿ ಮಾರಾಟ ಮಾಡಲಾಗುತ್ತಿದೆ.
ಮಾವು ಮತ್ತು ಹಲಸು ಮೇಳಕ್ಕೆ ಚಾಲನೆ ನೀಡುವಾಗ ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ, ನಿರ್ದೇಶಕ ನಾಗೇಶ್ ಕುಂದಲ್ಪಾಡಿ, ಬಿ. ಎ. ಹರೀಶ್, ಎಸ್. ಪಿ. ಪೊನ್ನಪ್ಪ, ಬೇಬಿ ಪೂವಯ್ಯ, ಎಂ. ಮನೋಹರ್, ಸುವಿನ್ ಗಣಪತಿ, ಉಮೇಶ್‍ರಾಜ ಅರಸ್ ಮುಂತಾದವರು ಉಪಸ್ಥಿತರಿದ್ದರು.
ದೇಸಿ ಬೆಳೆ ಸಂರಕ್ಷಣೆಗೆ ವಿನೂತನ ಯೋಜನೆ: ದೇಸಿ ಬೆಳೆಗಳ ಸಂರಕ್ಷಣೆ ಮತ್ತು ಉತ್ತೇಜನ ಕಾರ್ಯಕ್ರಮದಡಿ ಕಣ್ಮರೆಯಾಗುತ್ತಿರುವ ಹಾಗೂ ನಶಿಸಿ ಹೋಗುತ್ತಿರುವ ಸ್ಥಳೀಯ ಬೆಳೆಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸುವ ಉದ್ದೇಶದಿಂದ ಒಂದು ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು 2024ರ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಆಯಾಯ ಪ್ರದೇಶದಲ್ಲಿ ರೈತರು ತಲೆಮಾರುಗಳಿಂದ ಬೆಳೆದ ಸಾಂಪ್ರದಾಯಿಕ ಪ್ರಭೇದಗಳು, ಸ್ಥಳೀಯ ಕೃಷಿ ಪದ್ದತಿ ಪ್ರದೇಶಕ್ಕೆ ಹೊಂದಿಕೊಂಡು ವಿಶಿಷ್ಟ ಗುಣಲಕ್ಷಣ ಹೊಂದಿರುವ ಬೆಳೆಗಳನ್ನು ದೇಸಿ ಬೆಳೆಗಳೆಂದು ಕರೆಯಲಾಗುತ್ತದೆ.
ಈ ಕಾರ್ಯಕ್ರಮದಡಿ ಭತ್ತ, ರಾಗಿ, ಜೋಳ, ತೊಗರಿ, ಹುರುಳಿ, ಅವರೆ, ಅಲಸಂದೆ, ಮಡಕಿಕಾಳು, ಹುಚ್ಚೆಳ್ಳು, ಕುಸುಬೆ, ಎಳ್ಳು, ನವಣೆ, ಸಾಮೆ, ಊದಲು, ಕೊರಲೆ, ಹಾರಕ, ಬರಗು, ಗೋಧಿ, ಮೆಣಸಿನಕಾಯಿ ಮತ್ತು ಸಲಹಾ ಸಮಿತಿಯು ಶಿಫಾರಸ್ಸು ಮಾಡುವ ಬೆಳೆ ಒಳಪಡಿಸಲಾಗಿದೆ.












Click it and Unblock the Notifications