ಭತ್ತದ ಕೃಷಿಯ ಬತ್ತದ ಖುಷಿ: ಕೊಡಗಿನಲ್ಲಿ ಕೈಲ್ ಮುಹೂರ್ತದ ಸಂಭ್ರಮ

By: ಬಿ.ಎಂ.ಲವಕುಮಾರ್
Subscribe to Oneindia Kannada

ಕೊಡಗಿನಲ್ಲೀಗ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಮನೆ ಮಾಡಿದೆ. ದೂರದಲ್ಲಿದ್ದವರೆಲ್ಲ ಹಬ್ಬ ಆಚರಿಸುವ ಸಲುವಾಗಿ ತಮ್ಮ ಊರುಗಳಿಗೆ ಆಗಮಿಸಿದ್ದಾರೆ. ಕುಟುಂಬದವರೆಲ್ಲರೂ ಒಂದೆಡೆ ಕಲೆತು ಹಬ್ಬದ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೊದಲಿಗೆ ಹೋಲಿಸಿದರೆ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಈಗ ಕಡಿಮೆಯೇ. ಆಧುನಿಕತೆ ಭರದಲ್ಲಿ ಒಂದಷ್ಟು ಬದಲಾವಣೆಗಳಿಂದಾಗಿ ಎಲ್ಲರೂ ಒತ್ತಡದ ಬದುಕಿನಲ್ಲಿ ಕಾಲ ಕಳೆಯುತ್ತಿರುವುದರಿಂದ ಹಬ್ಬದಲ್ಲಿ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ.[ದಾಂಪತ್ಯಕ್ಕೆ ಕಾಲಿರಿಸಿದ ಸಾಧಕಿ ಕೊಡಗಿನ ಪ್ರೀತ್]

ಹಾಗೆ ನೋಡಿದರೆ ಕೊಡಗಿನಲ್ಲಿ ಆಚರಿಸುವ ಹಬ್ಬಗಳ ಹಿಂದೆ ಶೂರತ್ವ, ಕ್ರೀಡೆಯ ಹಿನ್ನಲೆ, ಸಂಪ್ರದಾಯದ ಕಾಂತಿಯೊಂದಿಗೆ ಸಂಭ್ರಮ- ಉಲ್ಲಾಸ ಇದ್ದೇ ಇರುತ್ತದೆ. ಅಷ್ಟೇ ಅಲ್ಲ, ಎಲ್ಲ ಹಬ್ಬಗಳು ಭತ್ತದ ಕೃಷಿಯನ್ನೇ ಅವಲಂಬಿಸಿ ಆಚರಣೆಗೆ ಬಂದಿರುವುದನ್ನು ಕಾಣಬಹುದು.

ಕೈಲ್ ಮುಹೂರ್ತ' ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಕಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟೆಂಬರ್ 3ರಂದು ಆಚರಣೆ ನಡೆಯುತ್ತದೆ. ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ, ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ.[ಜಂಬೂಸವಾರಿಯಲ್ಲಿ ಕೊಡಗಿನ ಆನೆಗಳದ್ದೇ ಕಾರುಬಾರು!]

ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ, ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. ಇದೀಗ ಆಚರಿಸುತ್ತಿರುವ 'ಕೈಲ್ ಮುಹೂರ್ತ' ಹಬ್ಬವನ್ನೇ ನೋಡುವುದಾದರೆ ಇದಕ್ಕೂ ಮತ್ತು ಭತ್ತದ ಕೃಷಿಗೆ ಅವಿನಾಭಾವ ಸಂಬಂಧ ಇರುವುದನ್ನು ಕಾಣಬಹುದಾಗಿದೆ. ಹಬ್ಬದ ಆಚರಣೆ ಬಗ್ಗೆ ಇತಿಹಾಸದ ಪುಟ ತಿರುವಿದರೆ ಒಂದಷ್ಟು ರೋಚಕ ಮಾಹಿತಿಗಳು ಲಭ್ಯವಾಗುತ್ತವೆ.

ಆಯುಧ ಕೆಳಗೆ-ನೇಗಿಲು ಹೆಗಲಿಗೆ

ಆಯುಧ ಕೆಳಗೆ-ನೇಗಿಲು ಹೆಗಲಿಗೆ

ಮಲೆನಾಡಿನಿಂದ ಕೂಡಿದ ಕೊಡಗಿನಲ್ಲಿ ಹಿಂದಿನ ಕಾಲದಲ್ಲಿ ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗೆ ಇಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು.

ದೇವರ ಕೋಣೆ ಸೇರುತ್ತಿದ್ದ ಕೋವಿ

ದೇವರ ಕೋಣೆ ಸೇರುತ್ತಿದ್ದ ಕೋವಿ

ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು.

ಕೋವಿ-ಮೈ ಕೊಡವಿ

ಕೋವಿ-ಮೈ ಕೊಡವಿ

ಅಲ್ಲದೆ ಕಕ್ಕಡ ಮಾಸ (ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು. ಹೀಗೆ ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್ ಮುಹೂರ್ತ ಹಬ್ಬದ ಸಂದರ್ಭವೇ ಆಗಿತ್ತು.

ಸ್ನಾನ-ಪೂಜೆ-ಪ್ರಾರ್ಥನೆ

ಸ್ನಾನ-ಪೂಜೆ-ಪ್ರಾರ್ಥನೆ

ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗದ್ದೆಗಳು ಕಣ್ಮರೆಯಾಗಿ ಕಾಫಿ ತೋಟಗಳು ತಲೆ ಎತ್ತಿರುವುದರಿಂದ ಹಾಗೂ ಎತ್ತಿನ ಬದಲಾಗಿ ಟ್ರ್ಯಾಕ್ಟರ್ ಹಾಗೂ ಟಿಲ್ಲರ್ ಗಳು ಬಂದಿರುವುದರಿಂದ ಎತ್ತುಗಳ ಬದಲಿಗೆ ಗೋಪೂಜೆ ಮಾಡುವುದು ಕೆಲವೆಡೆ ಕಂಡು ಬರುತ್ತದೆ.

ಆಯುಧ ಪೂಜೆ

ಆಯುಧ ಪೂಜೆ

ಕೊಡವ ಭಾಷೆಯಲ್ಲಿ 'ಕೈಲ್ ಪೊಳ್ದ್' ಎಂದು ಕರೆಯಲಾಗುತ್ತದೆ. 'ಕೈಲ್' ಎಂದರೆ ಆಯುಧ, 'ಪೊಳ್ದ್' ಎಂದರೆ ಹಬ್ಬ. ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ ಆಗಿದೆ. ಆಚರಣೆ ಬಗ್ಗೆ ಹೇಳುವುದಾದರೆ ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ, ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು- ಬಾಣವನ್ನು ತಯಾರಿಸುತ್ತಾರೆ.

ದೇವರ ಮುಂದೆ ಕೋವಿ ಹೂವು

ದೇವರ ಮುಂದೆ ಕೋವಿ ಹೂವು

ಆ ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಾರೆ (ಇದನ್ನು ಕೊಡವ ಭಾಷೆಯಲ್ಲಿ 'ಆಪ್‍ಪತರ್' ಎಂದು ಕರೆಯಲಾಗುತ್ತದೆ). ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು, ಇದಕ್ಕೆ ಕಾಡಿನಲ್ಲಿ ಸಿಗುವ ಕೋವಿ ಹೂವನ್ನಿಟ್ಟು, ತಳಿಯತಕ್ಕಿ ಬೊಳಕ್(ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ಅನ್ನು ಉರಿಸಿ, ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಾರೆ.

ಭಕ್ಷ್ಯ-ಭೋಜನ

ಭಕ್ಷ್ಯ-ಭೋಜನ

ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ, ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾರೆ. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಬೇಡಿಕೊಳ್ಳುತ್ತಾರೆ. ಅಲ್ಲದೆ ದೇವರ ಕೋಣೆಯಲ್ಲಿ ಕಿರಿಯರು, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ.

ಆಡು ಆಟ ಆಡೂ...

ಆಡು ಆಟ ಆಡೂ...

ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿದೆ. ಅಂದು ಹಿರಿಯರು, ಕಿರಿಯರು ಎಂಬ ಭೇದವಿಲ್ಲದೆ ಒಟ್ಟಾಗಿ ಮದ್ಯ ಸೇವಿಸುವುದು ಸಂಪ್ರದಾಯವಾಗಿದೆ. ಅಲ್ಲದೆ ಕೈಲ್ ಮುಹೂರ್ತ ಅಂಗವಾಗಿ ಹಲವು ದಿನಗಳ ಕಾಲ ಜಿಲ್ಲೆಯಾದ್ಯಂತ ಕ್ರೀಡಾಕೂಟಗಳು ನಡೆಯುತ್ತವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kail muhurtha is a festival, people celebrate in Kodagu district. It indicates close relationship between paddy cultivation and Kodagu people. Every year on September 3rd Kail Muhurtha celebrate by Kodagu people.
Please Wait while comments are loading...