ಕೊಡಗಿನಲ್ಲಿ ವಿರಾಮ ನೀಡಿದ ವರುಣ: ಕೆಆರ್‌ಎಸ್ ಭರ್ತಿಯಾಗುವುದು ಹೇಗೆ?
ಮಡಿಕೇರಿ, ಆಗಸ್ಟ್ 08: ಕೊಡಗಿನಲ್ಲಿ ಜುಲೈ ಮೊದಲ ವಾರದಲ್ಲಿ ಅಬ್ಬರಿಸಿದ್ದ ವರುಣ ತದ ನಂತರ ಮೌನಕ್ಕೆ ಶರಣಾಗಿದ್ದಾನೆ. ಪರಿಣಾಮ ಮತ್ತೆ ಆತಂಕ ಶುರುವಾಗಿದೆ. ಏಕೆಂದರೆ ವಾಡಿಕೆಯಂತೆ ಈ ಸಮಯದಲ್ಲಿ ಮಳೆ ಅತಿ ಹೆಚ್ಚು ಸುರಿಯುತ್ತದೆ. ಆದರೆ ಈಗ ಮಳೆಯೇ ಇಲ್ಲದಂತಾಗಿದೆ. ಇದರಿಂದ ಕಾವೇರಿಕೊಳ್ಳದ ಭತ್ತದ ಕೃಷಿ ಮಾಡುವ ಬಹುತೇಕ ರೈತರು ಆಕಾಶ ನೋಡುವಂತಾಗಿದೆ. ಜೊತೆಗೆ ಕೆಆರ್‌ಎಸ್ ಜಲಾಶಯ ಭರ್ತಿಯಾಗುವಷ್ಟು ನೀರು ಹರಿಯುತ್ತಾ? ಎಂಬ ಪ್ರಶ್ನೆಯೂ ಉದ್ಭವವಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ ಧಾರಾಕಾರ ಮಳೆಯಾಗುತ್ತಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು ಒಂದು ಸಾವಿರ ಮಿ.ಮೀ. ಮಳೆ ಕಡಿಮೆಯಾಗಿರುವುದು ಗೋಚರಿಸುತ್ತಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ ತಿಂಗಳು ಸುರಿದ ಮಳೆ ಇನ್ನೊಂದಷ್ಟು ದಿನಗಳ ಕಾಲ ಮುಂದುವರೆದಿದ್ದರೆ ಬಹುಶಃ ಕಾವೇರಿ ಕೊಳ್ಳದ ಎಲ್ಲ ಜಲಾಶಯಗಳು ಅದರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಬಿಡುತ್ತಿತ್ತೇನೋ ಆದರೆ ಅಷ್ಟರಲ್ಲೇ ಮಳೆರಾಯ ವಿರಾಮ ತೆಗೆದುಕೊಂಡಿದ್ದರಿಂದ ಮುಂದೇನು ಎಂಬ ಆಲೋಚನೆ ಶುರುವಾಗಿದೆ.

ಮಳೆಗಾಲವನ್ನು ನೋಡಿಕೊಂಡು ಬಂದಿರುವ ಕೊಡಗಿನ ಜನರ ಪ್ರಕಾರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಅದರಲ್ಲೂ ಕಳೆದ ಐದು ವರ್ಷಗಳಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಆಗಸ್ಟ್ ತಿಂಗಳ ಮೊದಲ ಎರಡು ವಾರಗಳಲ್ಲಿ ಭಾರೀ ಮಳೆಸುರಿದು ಆಸ್ತಿಪಾಸ್ತಿ ನಷ್ಟ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರೀ ಮಳೆ ಸುರಿಯದಿದ್ದರೂ ಒಂದಷ್ಟು ಮಳೆ ಬರಬಹುದು ಎಂಬ ನಿರೀಕ್ಷೆಯಿದೆ. ಇನ್ನು ಸಕಾಲದಲ್ಲಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಜಲಮೂಲಗಳಲ್ಲಿ ಅಂತರ್ಜಲ ಹೆಚ್ಚಾಗಿಲ್ಲ. ಹೀಗಾಗಿ ನದಿ ಮತ್ತು ಹೊಳೆ, ತೊರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿಲ್ಲ. ಮಳೆ ಬಂದಾಗ ತುಂಬಿ ಹರಿಯುವ ನದಿಗಳು ಮಳೆ ಬಿಡುವು ನೀಡಿದ ತಕ್ಷಣ ಬತ್ತಿ ಹೋಗುತ್ತಿವೆ.
ಈ ಬಾರಿ ಕಳೆದ ವರ್ಷಕ್ಕಿಂತ ಕಡಿಮೆ ಮಳೆ
ಇದೆಲ್ಲದರ ನಡುವೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಮಳೆ ಸುರಿದಿದ್ದು, ಮುಂದೆ ಮಳೆ ಸುರಿದರೂ ಕಳೆದ ವರ್ಷದ ಪ್ರಮಾಣವನ್ನು ತಲುಪುವುದು ಕಷ್ಟವೇ. 2018ರ ನಂತರ ಕೊಡಗಿನಲ್ಲಿ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ ಕಳೆದ ವರ್ಷ ಸುರಿದ ಮಳೆಯ ಪ್ರಮಾಣ ಕಡಿಮೆಯೇ ಆದರೂ ಕೆಆರ್‌ಎಸ್ ಜಲಾಶಯ ಬಹುಬೇಗ ಭರ್ತಿಯಾಗಿತ್ತಲ್ಲದೆ, ಧಾರಾಕಾರ ಮಳೆ ಸುರಿದ ಪರಿಣಾಮ ಪ್ರವಾಹ ಕಾಣಿಸಿಕೊಂಡಿದ್ದರಿಂದ ಲಕ್ಷಾಂತರ ಕ್ಯುಸೆಕ್ ನೀರು ಹರಿದು ಹೋಗಿತ್ತು. ಹೀಗಾಗಿ ನೀರಿನ ತಂಟೆಗೆ ತಮಿಳುನಾಡು ಬಂದಿರಲಿಲ್ಲ.
ಈ ಬಾರಿ ಮಳೆ ಕಡಿಮೆಯಾಗಿರುವುದರಿಂದ ಮುಂದೆ ಮಳೆ ಸುರಿದು ಕೆಆರ್‌ಎಸ್ ಭರ್ತಿಯಾಗುತ್ತಾ ಎಂಬ ಸಂಶಯ ನಮ್ಮೆಲ್ಲರನ್ನು ಕಾಡಲಾರಂಭಿಸಿದೆ. ಕೊಡಗಿನಲ್ಲಿ ಪ್ರವಾಹೋಪಾದಿಯಲ್ಲಿ ಮಳೆ ಸುರಿದರೂ ಕೂಡ ಕಳೆದ ವರ್ಷ ಬೇಸಿಗೆಯಲ್ಲಿ ಮಡಿಕೇರಿಯಲ್ಲಿ ನೀರಿಗೆ ಹಾಹಾಕಾರವುಂಟಾಗಿತ್ತು. ಈ ಬಾರಿ ಏನಾದರೂ ಸಮರ್ಪಕವಾಗಿ ಮಳೆ ಸುರಿಯದೆ ಹೋದರೆ ಕೊಡಗಿನಲ್ಲಿಯೇ ನೀರಿಗೆ ಬರ ಬಂದರೂ ಅಚ್ಚರಿಪಡಬೇಕಾಗಿಲ್ಲ.

ಮಳೆ ಹೆಚ್ಚಾದರೂ, ಕಡಿಮೆಯಾದರೂ ಸಮಸ್ಯೆಯೇ.
ಇದೆಲ್ಲದರ ನಡುವೆ ಕೊಡಗಿನಲ್ಲಿ ಭತ್ತದ ಕೃಷಿ ನಿಧಾನವಾಗಿ ನಶಿಸುತ್ತಿದೆ. ಹೆಚ್ಚಿನವರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಕಾಫಿ ಮತ್ತು ಕರಿಮೆಣಸಿನ ಬೆಲೆ ಹೆಚ್ಚುತ್ತಾ ಹೋಗುತ್ತಿದೆ. ಹೀಗಿರುವಾಗ ಕೊಡಗಿನಲ್ಲಿ ಹೆಚ್ಚು ಮಳೆ ಸುರಿದರೆ ಅದರಿಂದ ಕಾಫಿ ಮತ್ತು ಕರಿಮೆಣಸಿಗೆ ಹಾನಿಯಾಗುತ್ತದೆ. ಮಳೆ ಹೆಚ್ಚಾಗುತ್ತಿದ್ದಂತೆಯೇ ಕಾಫಿ ಫಸಲು ಉದುರುತ್ತದೆ. ಕರಿಮೆಣಸಿಗೆ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ಮಳೆ ಕಡಿಮೆಯಾದರೆ ಕಾಫಿಗೆ ಒಳ್ಳೆಯದಾಗುತ್ತದೆ.
ಇನ್ನು ಕಳೆದ ಐದು ವರ್ಷಗಳಿಂದ ಮಳೆ, ಪ್ರವಾಹ, ಭೂಕುಸಿತ ಹೀಗೆ ಅನಾಹುತಗಳನ್ನು ಅನುಭವಿಸಿರುವ ಜನರಿಗೆ ಮಳೆ ಅಬ್ಬರಿಸದೆ ಮೊದಲಿನಂತೆ ಸಾಧಾರಣವಾಗಿ ಸುರಿದರೆ ಸಾಕು ಎಂಬ ಆಲೋಚನೆಯೂ ಇಲ್ಲದಿಲ್ಲ. ಮೊದಲೆಲ್ಲ ಮಳೆಗಾಲವೆಂದರೆ ಅಬ್ಬರಕ್ಕಿಂತ ಹೆಚ್ಚಾಗಿ ಜಿಟಿಜಿಟಿಯಾಗಿ ಸುರಿಯುತ್ತಲೇ ಇರುತ್ತಿತ್ತು. ಇದರಿಂದ ಯಾವುದೇ ಅನಾಹುತಗಳು ಆಗುತ್ತಿರಲಿಲ್ಲ. ನದಿಗಳಲ್ಲಿ ನೀರಿನ ಪ್ರಮಾಣವೂ ಕಡಿಮೆಯಾಗುತ್ತಿರಲಿಲ್ಲ. ಬಿಡುವು ನೀಡದೆ ವಾರಾನುಗಟ್ಟಲೆ ಮಳೆ ಸುರಿದ ನಿದರ್ಶನವೂ ಇದೆ.
ಜನ ಇದಕ್ಕೆ ಹೊಂದಿಕೊಂಡಿದ್ದಲ್ಲದೆ, ಮಳೆಯಲ್ಲಿಯೇ ತನ್ನ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಈಗ ಹಾಗಿಲ್ಲ. ವಾರಾನುಗಟ್ಟಲೆ ಬಿಡುವು ನೀಡುವ ಮಳೆ ಒಮ್ಮೆಲೆ ಸುರಿದು ಪ್ರವಾಹ ಮಾತ್ರವಲ್ಲದೆ, ಅನಾಹುತವನ್ನು ಸೃಷ್ಟಿಮಾಡುತ್ತಿದೆ. ಅದು ಏನೇ ಇರಲಿ ಈ ಬಾರಿ ಜಿಲ್ಲೆಯಲ್ಲಿ ಒಂದು ಸಾವಿರ ಮಿ.ಮೀ. ಮಳೆ ಕಡಿಮೆ ಸುರಿದಿರುವುದು ಆತಂಕದ ವಿಷಯವೇ.

ಮಳೆ ಪ್ರಮಾಣದ ಅಂಕಿ ಅಂಶಗಳು ಹೇಳುವುದೇನು?
ಹಾಗಾದರೆ ಕಳೆದ ವರ್ಷ ಈ ಅವಧಿಯಲ್ಲಿ ಕೊಡಗಿನಲ್ಲಿ ಮಳೆಯ ಪ್ರಮಾಣ ಹೇಗಿತ್ತು? ಜನವರಿಯಿಂದ ಇಲ್ಲಿವರೆಗೆ ಎಷ್ಟು ಮಳೆಯಾಗಿತ್ತು? ಈ ವರ್ಷದ ಮಳೆಯ ಪ್ರಮಾಣ ಹೇಗಿದೆ ಎಂಬುದರ ಅಂಕಿ ಅಂಶಗಳನ್ನು ನೋಡುತ್ತಾ ಹೋದರೆ.. ಕಳೆದ ವರ್ಷ ಇದೇ ದಿನ ಸುಮಾರು 91.75 ಮಿ,ಮೀ ಮಳೆ ಸುರಿದಿದ್ದರೆ. ಈ ಬಾರಿ ಕೇವಲ 1.78 ಮಿ.ಮೀ ಮಳೆ ಸುರಿದಿದೆ. ಇನ್ನು ಈ ಬಾರಿ ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯನ್ನು ನೋಡಿದ್ದೇ ಆದರೆ 1592.55 ಮಿ.ಮೀ, ಮಾತ್ರ, ಕಳೆದ ವರ್ಷ ಈ ಪ್ರಮಾಣ 2428.61 ಮಿ.ಮೀ. ಆಗಿತ್ತು. ಇದನ್ನು ಗಮನಿಸಿದರೆ ಮಳೆಯ ಪ್ರಮಾಣ ಕಡಿಮೆ ಇದೆ ಎನ್ನುವುದು ಗೊತ್ತಾಗಿ ಬಿಡುತ್ತದೆ.
ಇದೆಲ್ಲದರ ನಡುವೆ ಹಾರಂಗಿ ಜಲಾಶಯದ ನೀರಿನ ಮಟ್ಟ ಮತ್ತು ಅಲ್ಲಿನ ಒಳ ಮತ್ತು ಹೊರ ಹರಿವು ನೋಡುತ್ತಾ ಹೋದರೆ 2859 ಅಡಿಗಳ ಜಲಾಶಯದಲ್ಲಿ ಸದ್ಯ 2858.41 ಅಡಿಯಷ್ಟು ನೀರಿದೆ. ಕಳೆದ ವರ್ಷ 2855.29 ಅಡಿಯಷ್ಟು ನೀರಿತ್ತು. ಆದರೆ ಕಳೆದ ವರ್ಷ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ 16120 ಕ್ಯುಸೆಕ್ ಇತ್ತು. ಹೀಗಾಗಿ ಜಲಾಶಯದ ಭದ್ರತೆ ದೃಷ್ಟಿಯಿಂದ 2855 ಅಡಿಯಷ್ಟು ನೀರನ್ನಿಟ್ಟುಕೊಂಡು 16812 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿತ್ತು. ಆದರೆ ಈ ಬಾರಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕೇವಲ 1890 ಕ್ಯುಸೆಕ್ ಮಾತ್ರ. ಅದರಲ್ಲಿ 2800 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.
ಮುಂಗಾರು ಚೇತರಿಸಿದರೆ ಸಮಸ್ಯೆಗೆ ಪರಿಹಾರ
ಇದೆಲ್ಲವನ್ನು ಗಮನಿಸಿದರೆ ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯದೆ ಹೋದರೆ ಕೆಆರ್ ಎಸ್ ಜಲಾಶಯ ಭರ್ತಿಯಾಗಲು ಕಷ್ಟವಾಗುತ್ತದೆ. ಜೊತೆಗೆ ಮಳೆಯನ್ನು ನಂಬಿ ಕೃಷಿ ಮಾಡುವ ರೈತರಿಗೂ ಸಮಸ್ಯೆ ತಪ್ಪಿದಲ್ಲ. ದೇವರ ದಯೆಯಿಂದ ಮತ್ತೆ ಮುಂಗಾರು ಚೇತರಿಕೆ ಕಂಡರೆ ಮಾತ್ರ ಮುಂದೆ ಭುಗಿಲೇಳಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇಲ್ಲದೆ ಹೋದರೆ ಸಂಕಷ್ಟ ತಪ್ಪಿದಲ್ಲ.












Click it and Unblock the Notifications