ಮತದಾನ ಮಾಡಿ ಸೆಲ್ಫಿ ತಗೊಳ್ಳಿ, ಬಹುಮಾನ ಗೆಲ್ಲಿ
ಕೊಡಗು, ಮೇ 10; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಮತದಾನ ಆರಂಭವಾಗಿದೆ. ಬುಧವಾರ ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವಿದೆ. ಎಲ್ಲ ಅರ್ಹರು ತಪ್ಪದೇ ಮತದಾನ ಮಾಡಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ 'ಸೆಲ್ಫಿ ಕಂಟೆಸ್ಟ್' ಸ್ಪರ್ಧೆ ಆಯೋಜಿಸಿದೆ. ಮತದಾನ ಮಾಡಿದ ಎಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಯುವಕ-ಯುವತಿಯರನ್ನು ಒಳಗೊಂಡಂತೆ ಜಿಲ್ಲೆಯ ಎಲ್ಲಾ ಮತದಾರರು ತಮ್ಮ ಕುಟುಂಬದವರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಉತ್ತಮ ಫೋಟೋಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.
ನಿಯಮಗಳು ಏನು?; ಬುಧವಾರ ಮತದಾನ ಮಾಡಿದ ನಂತರ ಒಬ್ಬರೇ ಅಥವಾ ಗುಂಪಿನಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಕುಟುಂಬ ವರ್ಗ, ಸ್ನೇಹಿತರೊಂದಿಗೆ ಇರುವ ಫೋಟೋಗಳಿಗೆ ಆದ್ಯತೆ ನೀಡಲಾಗುವುದು. ಮತಗಟ್ಟೆಯ ಒಳಗೆ ಮೊಬೈಲ್ ಪೋನ್ ತೆಗೆದುಕೊಂಡು ಹೋಗುವಂತಿಲ್ಲ. ಮತದಾನ ಮಾಡಿದ ನಂತರ ತಮ್ಮ ಫೋನ್ ಬಳಸಿ ಮತಗಟ್ಟೆಯ ಹೊರಭಾಗದಲ್ಲಿ ನಿಂತು ಸೆಲ್ಫಿ ತೆಗೆದು ಕಳುಹಿಸಬಹುದು.

ಫೋಟೋಗಳನ್ನು ಮೇ 10ರ ಮತದಾನದ ದಿನದಂದು ಸಂಜೆ 6 ಗಂಟೆಯೊಳಗೆ ಕಳುಹಿಸಬೇಕು. ಉತ್ತಮವಾದ ಒಂದು ಫೋಟೋ ಮಾತ್ರ ಕಳುಹಿಸಿ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಲು ಅವಕಾಶವಿದೆ. ಫೋಟೋವನ್ನು 6363994172 ಅಥವಾ 9743144135 ನಂಬರ್‌ಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು.
ಸ್ಪರ್ಧಿಯ ಹೆಸರು, ತಂದೆಯ/ ಗಂಡನ ಹೆಸರು, ಮತಗಟ್ಟೆ ಸಂಖ್ಯೆ, ಜನ್ಮ ದಿನಾಂಕ ಹಾಗೂ ತಮ್ಮ ಮೊಬೈಲ್ ಸಂಖ್ಯೆಯ ವಿವರಗಳೊಂದಿಗೆ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ಸೆಲ್ಫಿ ಫೋಟೋ ಕಳುಹಿಸಬೇಕು. ಮತಗಟ್ಟೆಯ 100 ಮೀಟರ್ ಒಳಗಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮತ ಹಾಕಿದ ಗುರುತಾಗಿ, ಮತ ಕೇಂದ್ರದಲ್ಲಿ ಬೆರಳಿಗೆ ಹಾಕಿರುವ ಇಂಕ್ ಕಾಣಿಸುವಂತೆ ಫೋಟೋ ತೆಗೆಯಬೇಕು. ತಾವುಗಳು ಕಳುಹಿಸುವ ಉತ್ತಮವಾದ ಫೋಟೋಗಳನ್ನು ಕೊಡಗು ಜಿಲ್ಲಾಡಳಿತದ ವೆಬ್‍ಸೈಟ್, ಫೇಸ್‍ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬಳಸಲಾಗುವುದು ಎಂದು ತಿಳಿಸಲಾಗಿದೆ.












Click it and Unblock the Notifications