Kodagu Rain: ಕೊಡಗಿನಲ್ಲಿ ಕೃಪೆ ತೋರಿದ ವರುಣ..ಬತ್ತಿದ ಕಾವೇರಿಗೆ ಜೀವಕಳೆ
ಮಡಿಕೇರಿ, ಮೇ 16 : ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿರುವುದರಿಂದ ಬಿಸಿಲ ಝಳಕ್ಕೆ ಒಣಗಿ ಹೋಗಿದ್ದ ಪ್ರಕೃತಿಯಲ್ಲಿ ಪುಳಕ ಶುರುವಾಗಿದ್ದರೆ, ಬತ್ತಿದ ನದಿಗಳಲ್ಲಿ ಅದರಲ್ಲೂ ಕಾವೇರಿ ನದಿಯಲ್ಲಿ ನೀರಿನ ಹರಿವು ನಿಧಾನವಾಗಿ ಆರಂಭವಾಗಿದ್ದು, ಜಿಲ್ಲೆಯ ಜನತೆಯಲ್ಲಿ ಹರ್ಷ ತಂದಿದೆ. ಪೂರ್ವ ಮುಂಗಾರು ಮಳೆ ಹೀಗೆ ಮುಂದುವರೆದರೆ ನದಿ, ಕೆರೆ, ಕಟ್ಟೆಗಳಿಗೆ ಜೀವ ಕಳೆ ಬರುವ ಸಾಧ್ಯತೆಯಿದೆ.
ಕೊಡಗಿನಲ್ಲಿ ಸಾಮಾನ್ಯವಾಗಿ ಇಷ್ಟರಲ್ಲೇ ಮಳೆ ಸುರಿಯ ಬೇಕಾಗಿತ್ತು. ಆದರೆ ವರುಣನ ಅವಕೃಪೆಯಿಂದ ಜನವರಿಯಿಂದ ಮೇ ತನಕವೂ ಮಳೆ ಸುರಿದಿರಲಿಲ್ಲ. ಕೆಲವು ಕಡೆ ಮಳೆ ಸುರಿದಿತ್ತಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮಳೆ ಸುರಿದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಈ ಬಾರಿ ಮಳೆ ಸುರಿಯಲೇ ಜತೆಗೆ ಬಿಸಿಲ ಧಗೆಯೂ ವಾಡಿಕೆಗಿಂತಲೂ ಜಾಸ್ತಿಯಾಗಿತ್ತು. ಇದೆಲ್ಲ ಕಾರಣದಿಂದಾಗಿ ಒಂದೆಡೆ ಕಾಫಿ ಗಿಡಗಳು, ಕರಿಮೆಣಸು ಬಳ್ಳಿಗಳು ಸಾಯುವಂತಾಗಿತ್ತು.

ಇನ್ನು ಮಳೆ ಸುರಿಯದ ಕಾರಣದಿಂದ ಸಕಾಲದಲ್ಲಿ ನಡೆಯಬೇಕಾದ ಕಾಫಿ ತೋಟಗಳ ಕೆಲಸಗಳು ನಡೆಯಲಿಲ್ಲ. ಮಳೆ ಸಕಾಲದಲ್ಲಿ ಬಾರದ ಕಾರಣ ಕಾಫಿ ಹೂ ಅರಳದೆ ಮುಂದಿನ ವರ್ಷದ ಫಸಲಿನ ಮೇಲೆ ಪರಿಣಾಮವುಂಟಾಗಿದೆ. ಇದರ ನಡುವೆ 2016ರ ಬಳಿಕ ಇದೇ ಮೊದಲ ಬಾರಿಗೆ ಕಾವೇರಿನದಿ ಬತ್ತಿ ನೀರು ಹರಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು. ದುಬಾರೆ ಬಳಿ ನೀರು ಬತ್ತಿದ ಪರಿಣಾಮ ದೋಣಿ ವಿಹಾರವನ್ನೇ ನಿಲ್ಲಿಸಲಾಗಿತ್ತು. ಮಡಿಕೇರಿ ಸೇರಿದಂತೆ ಹಲವು ಪಟ್ಟಣ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆವುಂಟಾಗಿತ್ತು. ತಂಪಾಗಿದ್ದ ಜಿಲ್ಲೆಯಲ್ಲಿ ಉಷ್ಣಾಂಶ ಏರಿಕೆಯಾಗಿ ತಲೆ ಸುಡುವಂತಾಗಿತ್ತು.
ಜಿಲ್ಲೆಯ ಜನರಿಗೆ ನೆಮ್ಮದಿ ತಂದ ಮಳೆ
ಜನವರಿಯಿಂದ ಮಳೆ ಸುರಿಯದ ಕಾರಣ ಜಿಲ್ಲೆಯ ಬಹುತೇಕ ಜಲಮೂಲಗಳು ಬತ್ತಿ ಹೋಗಿದ್ದು, ಜನ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಇನ್ನು ಕೆಲವು ದಿನಗಳು ಮಳೆ ಬಾರದೆ ಹೋಗಿದ್ದರೆ ಕೊಡಗಿನಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತೇನೋ? ಆದರೆ ಕಳೆದ ಕೆಲವು ದಿನಗಳಿಂದ ಆಗಾಗ್ಗೆ ಸುರಿಯುತ್ತಿರುವ ಮಳೆ ಜಿಲ್ಲೆಯ ಜನರಿಗೆ ಆಶಾಭಾವನೆ ಮೂಡಿಸಿದೆ. ಕೃಷಿ ಚಟುವಟಿಕೆಗಳನ್ನು ರೈತರು ಕೈಗೆತ್ತಿಗೊಂಡಿದ್ದಾರೆ. ಕಾಫಿ ತೋಟದಲ್ಲಿ ಮರಕಪಾತ್, ಕಾಫಿ ಗಿಡದ ಚಿಗುರು ಹೀಗೆ ಕೆಲಸ ಕಾರ್ಯಗಳು ಆರಂಭವಾಗಿವೆ.
ಜಿಲ್ಲೆಗೆ ಹೊಂದಿಕೊಂಡಂತಿರುವ ಆನೆಕಾಡು, ನಾಗರಹೊಳೆ ಸೇರಿದಂತೆ ಅರಣ್ಯ ಪ್ರದೇಶಗಳು ಬಿಸಿಲಿಗೆ ಬಸವಳಿದಿದ್ದವು. ಕುರುಚಲು ಕಾಡುಗಳು ಒಣಗಿದ್ದರೆ, ಕೆರೆಕಟ್ಟೆಗಳು ಬತ್ತಿದ್ದವು. ಕಾಡಿನಲ್ಲಿ ಮೇವು ನೀರು ಸಿಗದ ಕಾರಣದಿಂದಾಗಿ ವನ್ಯಪ್ರಾಣಿಗಳು ನಾಡಿನತ್ತ ಮುಖ ಮಾಡಿದ್ದವು. ಇದೀಗ ಮಳೆ ಬಂದ ಹಿನ್ನಲೆಯಲ್ಲಿ ಅರಣ್ಯದಲ್ಲಿ ಹುಲ್ಲು ಚಿಗುರಿದ್ದು, ಗಿಡಮರಗಳು ಹಸಿರಾಗಿವೆ. ಇದರ ಜತೆಗೆ ಕೆರೆ ಕಟ್ಟೆಗಳಲ್ಲಿ ಅಲ್ಪ ಸ್ವಲ್ಪ ನೀರು ಕಾಣಿಸಿದೆ. ಇದರಿಂದ ವನ್ಯ ಪ್ರಾಣಿಗಳು ಖುಷಿಯಲ್ಲಿ ತೇಲುತ್ತಿವೆ.

ನೀರಿನ ಸಮಸ್ಯೆಗೆ ಮಳೆಯೇ ಪರಿಹಾರ
ಇನ್ನು ಮಳೆ ಬಂದ ಹಿನ್ನಲೆಯಲ್ಲಿ ಕಾಫಿ ಬೆಳೆಗಾರರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆ ತಡವಾಗಿ ಆರಂಭವಾದರೂ ಮುಂದೆ ಇದೇ ರೀತಿ ಮುಂದುವರೆದರೆ ಮತ್ತು ಮುಂಗಾರು ಆರಂಭವಾದರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದ್ದು, ಇದರಿಂದ ನೀರಿನ ಸಮಸ್ಯೆ ಪರಿಹಾರವಾಗಲಿದೆ. ಕೊಡಗು ಸೇರಿದಂತೆ ಕಾವೇರಿ ಕೊಳ್ಳ ಹಾಗೂ ಮಲೆನಾಡು ಭಾಗಗಳಲ್ಲಿ ಉತ್ತಮವಾಗಿ ಮಳೆಯಾಗಿ ನೀರು ಹರಿದು ಬಂದರೆ ಕೆಆರ್ ಎಸ್ ಜಲಾಯದಲ್ಲಿಯೂ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು, ಕಾವೇರಿ ನೀರನ್ನು ನಂಬಿದವರು ನೆಮ್ಮದಿಯುಸಿರು ಬಿಡಲು ಸಾಧ್ಯವಾಗಲಿದೆ.
ಹವಾಮಾನ ಇಲಾಖೆ ಪ್ರಕಾರ ಈ ಬಾರಿ ಆಶಾದಾಯಕ ಮುಂಗಾರು ಎಂದು ಹೇಳಲಾಗಿದೆ. ಕಳೆದ ವರ್ಷ ಮುಂಗಾರು ಕೈಕೊಟ್ಟ ಪರಿಣಾಮ ಈ ಬಾರಿಯ ಬೇಸಿಗೆಯಲ್ಲಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಯಿತು. ಕೆಆರ್ ಎಸ್ ಮತ್ತು ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ಹಳೇ ಮೈಸೂರು ವ್ಯಾಪ್ತಿಯಲ್ಲಿನ ಜಲಾಶಯಗಳು ಭರ್ತಿಯಾಗದೆ ಸಮಸ್ಯೆ ಎದುರಿಸುವಂತಾಯಿತು. ಈ ಬಾರಿಯಾದರೂ ಉತ್ತಮ ಮಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದು ಜನ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications