ಇದೇ ಮೊದಲ ಬಾರಿಗೆ ಮಡಿಕೇರಿಯಲ್ಲಿ ಕಾಫಿ ದಸರಾ: ಹೇಗಿದೆ ಸಿದ್ಧತೆ? ವಿಶೇಷತೆಗಳೇನು..?
ಮಡಿಕೇರಿ, ಸೆಪ್ಟೆಂಬರ್ 25: ಇದೇ ಮೊದಲ ಬಾರಿಗೆ ಮಡಿಕೇರಿ ದಸರಾದಲ್ಲಿ ಆಯೋಜಿತ ಕಾಫಿ ದಸರಾವನ್ನು ಯಶಸ್ವಿಗೊಳಿಸಬೇಕು. ಜೊತೆಗೆ ಕೃಷಿಕ ವರ್ಗಕ್ಕೆ ಹೆಚ್ಚಿನ ಮಾಹಿತಿ ದೊರಕುವಂತಾಗಬೇಕು ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಕಾಫಿ ದಸರಾ ಆಯೋಜಕರಿಗೆ ಸಲಹೆ ನೀಡಿದ್ದಾರೆ.
ಮಡಿಕೇರಿ ದಸರಾ ಉತ್ಸವದಲ್ಲಿ ಅಕ್ಟೋಬರ್ 6 ಮತ್ತು 7ರಂದು ಆಯೋಜಿತ ಕಾಫಿ ದಸರಾ ಸಂಬಂಧಿತ ಜಿಲ್ಲೆಯ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ಪ್ರಮುಖರು, ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಶಾಸಕ ಡಾ.ಮಂತರ್ ಗೌಡ, ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಜಾನಪದ ದಸರಾದಂತೆಯೇ ಕಾಫಿ ದಸರಾ ಕೂಡ ಜನಾಕರ್ಷಣೆ ಪಡೆಯಬೇಕು ಎಂದರು.

ಜಿಲ್ಲೆಯಾದ್ಯಂತ ಕೃಷಿಕರಿಗೆ ಕಾಫಿ ದಸರಾ ಉತ್ಸವದ ಪ್ರಯೋಜನ ದೊರಕುವಂತಾಗಬೇಕು. ಕಾಫಿಗೆ ಸಂಬಂಧಿಸಿದ ಮಾಹಿತಿ ಮಾತ್ರವಲ್ಲದೇ ತೋಟಗಾರಿಕೆ ಬೆಳೆಗಳು, ಕೃಷಿ ಪದ್ದತಿ, ಜೇನು ಕೃಷಿ, ಬಿದಿರು ಕೃಷಿ, ಹೈನೋದ್ಯಮ, ಸೇರಿದಂತೆ ಪರ್ಯಾಯ ಕೃಷಿ ಮಾಹಿತಿಯೂ ಕಾಫಿ ದಸರಾದಲ್ಲಿ ದೊರಕಬೇಕು ಎಂದರು.
ಕಾಫಿ ಮಂಡಳಿ ಅಧ್ಯಕ್ಷರಾದ ದಿನೇಶ್ ಸೇರಿದಂತೆ ಕಾಫಿ ಮತ್ತು ಇತರ ಕೃಷಿ ತಜ್ಞರನ್ನು ಕಾಫಿ ದಸರಾಕ್ಕೆ ಆಹ್ವಾನಿಸಿ ಉತ್ತಮ ಮಾಹಿತಿಯನ್ನು ಬೆಳೆಗಾರರಿಗೆ ನೀಡಬೇಕು. ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಯೇಷನ್, ಕಾಫಿ ಮಂಡಳಿ, ಸೇರಿದಂತೆ ಕೃಷಿಗೆ ಸಂಬಂಧಿಸಿ ವಿವಿಧ ಸಂಘಟನೆಗಳು ಕಾಫಿ ದಸರಾದಲ್ಲಿ ಪಾಲ್ಗೊಳ್ಳಬೇಕು.

ಜಿಲ್ಲೆಯ ಕೃಷಿ ಕ್ಷೇತ್ರಕ್ಕೆ ಪ್ರಯೋಜನಕಾರಿಯಾದ ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಬೇಕು. ಉತ್ತಮ ಗುಣಮಟ್ಟದಲ್ಲಿ ಮಳಿಗೆಗಳನ್ನು ನಿರ್ಮಿಸಿ, ಎಲ್ಲಾ ಸೌಲಭ್ಯ ಒದಗಿಸಬೇಕು, ಮಳಿಗೆಗಳಲ್ಲಿ ಕಾಫಿ ಕೆಪೆಯನ್ನು ಕೂಡ ತೆರೆಯುವ ಮೂಲಕ ಕಾಫಿ ಕ್ಷೇತ್ರದ ನವೀನತೆಯ ಪರಿಚಯ ಮಾಡಿಕೊಡಬೇಕೆಂದೂ ಮಂತರ್ ಗೌಡ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, 32 ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 6 ರಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಮತ್ತು 7 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಳಿಗೆಗಳನ್ನು ತೆರೆಯಲಾಗುತ್ತದೆ ಎಂದರು.
ವೇದಿಕೆಯಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಮಸ್ಯೆಯಾಗದಂತೆ ಮಳಿಗೆಗಳನ್ನು ನಿರ್ವಹಿಸಲಾಗುತ್ತದೆ. ವೇದಿಕೆಯಲ್ಲಿ ಎರಡೂ ದಿನಗಳ ಕಾಲ ಮಧ್ಯಾಹ್ನ 11 ಗಂಟೆಯಿಂದ 1 ಗಂಟೆಯವರೆಗೂ ಕೃಷಿ ರಂಗಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳನ್ನು ಬೆಳೆಗಾರ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಕಾಫಿ ಸೇರಿದಂತೆ ಕೃಷಿ ಕ್ಷೇತ್ರದ ಆಗುಹೋಗುಗಳ ಬಗ್ಗೆ ಕೃಷಿಕರಿಗೆ ತಜ್ಞರು ಮಾಹಿತಿ ನೀಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ. ಜೊತೆಗೆ ಕಾಫಿ ದಸರಾದ ಲೋಗೋವನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.












Click it and Unblock the Notifications