Heavy Rain: ಕೊಡಗಿನಲ್ಲಿ ಸುರಿಯುತ್ತಿರುವುದು ಬರೀ ಮಳೆಯಲ್ಲ.. ಮಹಾಮಳೆ.!
ಮಡಿಕೇರಿ, ಜುಲೈ, 25: ಮುಂಗಾರು ಚೇತರಿಕೆ ಕಾಣದೆ ಭಯದಲ್ಲಿದ್ದ ಕೊಡಗಿನ ಜನ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ಇಲ್ಲಿನವರು ತಮ್ಮ ಜೀವಿತಾವಧಿಯಲ್ಲಿ ಮಳೆಗಾಲವನ್ನು ನೋಡುತ್ತಲೇ ಬಂದಿದ್ದಾರೆ. ಆದರೆ 2018ರ ನಂತರದ ಮಳೆಗಾಲ ಮಾತ್ರ ಭಯಾನಕ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ. ಇದಕ್ಕೆ ಈ ಬಾರಿಯ ಮಳೆಗಾಲವೂ ಹೊರತಾಗಿಲ್ಲ.
2018ರ ಹಿಂದಿನ ಮತ್ತು ನಂತರದ ಮಳೆಗಾಲವನ್ನು ನೆನಪು ಮಾಡಿಕೊಂಡರೆ ತೀವ್ರತೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಹಿಂದೆ ನಿಧಾನವಾಗಿ ಎಡೆಬಿಡದೆ ಮಳೆ ಸುರಿಯುತ್ತಿತ್ತು. ಇದರಿಂದ ಕೆಲಸ ಕಾರ್ಯಗಳಿಗೆ ಸ್ವಲ್ಪ ಮಟ್ಟಿಗೆ ಅಡಚಣೆ ಮತ್ತು ಕಿರಿಕಿರಿಯಾಗುತ್ತಿತ್ತು. ಆಗ ಪ್ರವಾಹ ಏರ್ಪಡುತ್ತಿತ್ತಾದರೂ ಈಗಿನಂತೆ ಭೀಕರತೆ ಇರಲಿಲ್ಲ. ಆದರೆ ಈಗ ಮಳೆ ಕಾಲಕ್ಕೆ ಸರಿಯಾಗಿ ಸುರಿಯದೆ, ಒಮ್ಮೆಲೆ ಸುರಿದು ಅನಾಹುತಗಳನ್ನು ಸೃಷ್ಟಿ ಮಾಡುತ್ತಿದೆ.

ಕೊಡಗು ಜಿಲ್ಲೆಯ ಪೈಕಿ ಅತಿಹೆಚ್ಚು ಮಳೆ ಸುರಿಯುವುದು ಮಡಿಕೇರಿ ತಾಲೂಕಿನಲ್ಲಿ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇದುವರೆಗಿನ ಮಳೆಗಾಲದಲ್ಲಿ ಮಡಿಕೇರಿ ತಾಲೂಕಿನಲ್ಲಿಯೇ ಹೆಚ್ಚಿನ ಅನಾಹುತಗಳು ಸಂಭವಿಸಿವೆ. ಜೊತೆಗೆ ಮಳೆಯೂ ಸುರಿಯುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆಯಷ್ಟೇ ಜುಲೈ ತಿಂಗಳಾದರೂ ಮುಂಗಾರು ಚೇತರಿಸಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ ಪುಷ್ಯ ಮಳೆ ಆರಂಭದಿಂದಲೇ ಅಬ್ಬರಿಸಿದ ಪರಿಣಾಮ ಇವತ್ತು ಹಾರಂಗಿ ಜಲಾಶಯ ಭರ್ತಿಯಾಗುವುದರೊಂದಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 100ಕ್ಕೆ ಏರುವಂತಾಗಿದೆ.
ವಾರದ ಮಳೆ ಒಂದೇ ದಿನ ಸುರಿಯುತ್ತಿದೆ
ಹಿಂದೆ ವಾರವೆಲ್ಲ ಸುರಿಯುತ್ತಿದ್ದ ಮಳೆ ಈಗ ಒಂದೇ ದಿನ ಸುರಿಯುತ್ತಿದೆ. ಇದರಿಂದ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗುವುದರೊಂದಿಗೆ ಭೂಕುಸಿತದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ದಶಕಗಳ ಹಿಂದೆ ಇದೇ ರೀತಿಯ ಮಳೆ ಸುರಿದಿದ್ದರೂ ಅದು ಒಂದೇ ದಿನ ಸುರಿದಿರಲಿಲ್ಲ. ತಿಂಗಳಾನುಗಟ್ಟಲೇ ಸಾಧಾರಣವಾಗಿ ಸುರಿದಿತ್ತು. ಹೀಗಾಗಿ ಎಷ್ಟೇ ಮಳೆ ಬಂದರೂ ಇಲ್ಲಿ ಅಂತಹ ಅನಾಹುತಗಳೇನು ಆಗಿರಲಿಲ್ಲ.
ಮಳೆ ಜಾಸ್ತಿ ಬಂದಾಗ ಪ್ರವಾಹ ಬರುತ್ತಿತ್ತು. ಮಳೆ ಕಡಿಮೆ ಆಗುತ್ತಿದ್ದಂತೆಯೇ ಪ್ರವಾಹವೂ ತಗ್ಗುತ್ತಿತ್ತು. ಇದರಿಂದ ಭತ್ತದ ಗದ್ದೆಗಳಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗುತ್ತಿತ್ತಾದರೂ ಅದಕ್ಕಿಂತ ಹೆಚ್ಚಾಗಿ ಯಾವ ನಷ್ಟವೂ ಆಗುತ್ತಿರಲಿಲ್ಲ.
ಮಳೆಯ ದಿನಗಳ ಬಗ್ಗೆ ಮೆಲುಕು ಹಾಕಿದರೆ ಕಳೆದ ಎರಡು ದಶಕಗಳ ಪೈಕಿ 2007 ಮತ್ತು 2013ರಲ್ಲಿ ಹೆಚ್ಚಿನ ಮಳೆ ಸುರಿದಿತ್ತು. ಆ ನಂತರ ಮಳೆ ಅಷ್ಟೊಂದಾಗಿ ಸುರಿದಿರಲಿಲ್ಲ. ವಾಡಿಕೆಯ ಮಳೆಯೂ ಸುರಿದಿರಲಿಲ್ಲ. ಇದರಿಂದ ಜನ ತೊಂದರೆಯನ್ನು ಅನುಭವಿಸಿದ್ದರು. ಆದರೆ 2018ರ ಮುಂಗಾರು ಉತ್ತಮವಾಗಿದೆ ಎಂಬ ವಿಚಾರಗಳು ಜನರಲ್ಲಿ ನೆಮ್ಮದಿ ತಂದಿತ್ತು.
ಆದರಲ್ಲೂ ಜೂನ್ ಮೊದಲ ವಾರದಲ್ಲೇ ಮುಂಗಾರು ಮಳೆ ಆರಂಭವಾಗಿ, ಸಂತೋಷ ನೀಡಿತ್ತು. ಆದರೆ ಆ ನಂತರ ಬಂದಿದ್ದು ಮಾತ್ರ ಅಂತಿಂಥ ಮಳೆಯಲ್ಲ. ಆ ವರ್ಷ ಆಗಸ್ಟ್ 15ರ ಹೊತ್ತಿಗೆ 50,83 ಮಿ.ಮೀ. ಮಳೆ ಸುರಿದಿತ್ತು ಎಂದರೆ ಪರಿಸ್ಥಿತಿ ಹೇಗಿದ್ದಿರಬಹುದು ಎಂಬುದನ್ನು ಊಹೆ ಮಾಡಿ.
ಆಗಸ್ಟ್‌ನಲ್ಲಿ ಮಹಾಮಳೆ ಸುರಿಯುವುದು ಖಚಿತ
2018ರ ಬಳಿಕ ಪ್ರತಿ ವರ್ಷವೂ ಮಹಾಮಳೆಯೇ ಸುರಿಯುತ್ತಿದೆ. ಅದರಲ್ಲೂ ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ಸುರಿಯುವ ಪುನರ್ವಸು, ಪುಷ್ಯ ಮತ್ತು ಆಶ್ಲೇಷ ಮಳೆಗಳು ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಪ್ರವಾಹದ ಜೊತೆಗೆ ಭೂಕುಸಿತದಂತಹ ಮಹಾ ಹಾನಿಗಳು ಆಗಸ್ಟ್ ತಿಂಗಳಲ್ಲಿಯೇ ಸಂಭವಿಸಿರುವ ಕಾರಣ ಮುಂದಿನ ದಿನಗಳು ಏನು ಅನಾಹುತ ಸೃಷ್ಟಿಯಾಗುತ್ತೋ ಎಂಬ ಭಯ ಜಿಲ್ಲೆಯ ಪ್ರತಿಯೊಬ್ಬರನ್ನೂ ಕಾಡುತ್ತಿದೆ.
ಇನ್ನು ಕೊಡಗಿನಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸುರಿದ ಮಳೆ ಮತ್ತು ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣವನ್ನು ನೋಡಿದ್ದೇ ಆದರೆ ಅಚ್ಚರಿ ಮೂಡುತ್ತಿದೆ. ಮಂಗಳವಾರ ಬೆಳಗ್ಗೆ 8:30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಸರಾಸರಿ 104.36 ಮಿ.ಮೀ. ಮಳೆ ಸುರಿದಿದೆ. ಈ ಪ್ರಮಾಣದ ಮಳೆ ಸುರಿದರೆ ಜನಜೀವನಕ್ಕೆ ಸಂಕಷ್ಟವಂತೂ ತಪ್ಪಿದಲ್ಲ. ಅದರಲ್ಲೂ ಜಿಲ್ಲೆಯಲ್ಲಿ ಅತಿಹೆಚ್ಚು 212 ಮಿ.ಮೀ, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯಲ್ಲಿ ಹಾಗೂ ಭಾಗಮಂಡಲದಲ್ಲಿ 193.60 ಮಿ.ಮೀ. ಮಳೆ ಸುರಿದಿದೆ.
ತಾಲೂಕುವಾರು ಸರಾಸರಿ ಮಳೆ ಪ್ರಮಾಣ ಗಮನಿಸಿದರೆ ಮಡಿಕೇರಿ ತಾಲೂಕಿನಲ್ಲಿ 133.38 ಮಿ.ಮೀ, ವಿರಾಜಪೇಟೆ 91.63 ಮಿ.ಮೀ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 88.07 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿವರೆಗೆ ಸುರಿದ ಮಳೆಯ ಪ್ರಮಾಣ ಜಿಲ್ಲೆಯಲ್ಲಿ 1414.83 ಮಿ.ಮೀ ಆಗಿದ್ದರೆ, ಕಳೆದ ವರ್ಷ 1873.83 ಮಿ.ಮೀ ಮಳೆ ಸುರಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 459 ಮಿ.ಮೀ ಕಡಿಮೆ ಮಳೆ ಸುರಿದಿದೆ. ಆದರೆ ಇದೇ ರೀತಿ ಮಳೆ ಮುಂದುವರೆದರೆ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆ ಸುರಿಯುವುದರಲ್ಲಿ ಎರಡು ಮಾತಿಲ್ಲ.
ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಹಾರಂಗಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಹೀಗಾಗಿ ಗರಿಷ್ಠ 2859 ಅಡಿಗಳ ಜಲಾಶಯದಲ್ಲಿ 2853.05 ಅಡಿಗಳಷ್ಟು ನೀರಿದೆ. ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 19343 ಕ್ಯುಸೆಕ್‌ನಷ್ಟಿದ್ದು, ಜಲಾಶಯದಿಂದ 21166 ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದಂತೆಲ್ಲ ಹೊರ ಹರಿವು ಜಾಸ್ತಿಯಾಗಲಿದ್ದು, ನದಿ ಪಾತ್ರದ ಜನರು ಎಚ್ಚರವಾಗಿರಲು ಸೂಚಿಸಲಾಗಿದೆ.
ಯಾವುದೇ ಅನಾಹುತ ಆಗದಂತೆ ಪ್ರಾರ್ಥನೆ
ಒಟ್ಟಾರೆಯಾಗಿ ಹೇಳಬೇಕೆಂದರೆ ಒಂದೆರಡು ದಶಕಗಳ ಹಿಂದಿನ ಮಳೆಗಾಲಕ್ಕೂ ಈಗ ಸುರಿಯುತ್ತಿರುವ ಮಳೆಗೂ ಬಹಳಷ್ಟು ವ್ಯತ್ಯಾಸಗಳು ಕಾಣಿಸುತ್ತಿದ್ದು, ಮಳೆಯಿಂದ ಸಾಕಷ್ಟು ಅನಾಹುತಗಳನ್ನು ಎದುರಿಸಿರುವ ಜಿಲ್ಲೆಯ ಜನರು ಮಳೆಯ ರಭಸ ಹೆಚ್ಚಾದಂತೆಲ್ಲ ಹೆದರುವಂತಾಗಿದೆ. ಹೀಗಿರುವಾಗ ಮಹಾಮಳೆ ಸುರಿದರೆ ಜನರ ಪರಿಸ್ಥಿತಿ ಏನಾಗಬೇಕು? ಹೀಗಾಗಿಯೇ ಜನ ಯಾವುದೇ ಅನಾಹುತ ಎದುರಾಗದಂತೆ ಪ್ರಾರ್ಥಿಸುತ್ತಿದ್ದಾರೆ.












Click it and Unblock the Notifications