ಕೊಡಗಿನಲ್ಲಿ ಅಬ್ಬರಿಸಿದ ಪುನರ್ವಸು ಮಳೆ: ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತ
ಮಡಿಕೇರಿ, ಜುಲೈ 06: ದುರ್ಬಲಗೊಂಡಿದ್ದ ಮುಂಗಾರು ಕೊಡಗಿನಲ್ಲಿ ಚೇತರಿಕೆ ಕಂಡಿದೆ. ಜೂನ್ ತಿಂಗಳಿನಲ್ಲಿಯೇ ಭಾರಿ ಮಳೆಯೊಂದಿಗೆ ಮುಂಗಾರಿಗೆ ಮುನ್ನುಡಿ ಬರೆಯಬೇಕಾಗಿದ್ದ ಮೃಗಶಿರಾ ಮತ್ತು ಆರಿದ್ರಾ ನಕ್ಷತ್ರದ ಮಳೆ ಈ ಬಾರಿ ಸುರಿಯಲೇ ಇಲ್ಲ. ಹೀಗಾಗಿ ಜುಲೈ ಆರಂಭವಾದರೂ ಮಳೆಯೇ ಸುರಿಯುತ್ತಿಲ್ಲ ಎಂದು ಆತಂಕಗೊಂಡಿದ್ದ ಜನರಿಗೆ ಇದೀಗ ಪುನರ್ವಸು ಮಳೆ ಅಭಯ ನೀಡಿದೆ.
ಗುರುವಾರ(ಜು.6)ದಿಂದ ಪುನರ್ವಸು ಮಳೆ ಆರಂಭವಾಗಿದೆ. ಆರಂಭದ ದಿನವೇ ಅಬ್ಬರಿಸುತ್ತಿರುವ ಪರಿಣಾಮ ಕೊಡಗಿನಲ್ಲಿರುವ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಇತರೆ ನದಿಗಳು, ಸಣ್ಣಪುಟ್ಟ ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಕಾವೇರಿ ನದಿ ಉಗಮಸ್ಥಾನ ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಇದೇ ರೀತಿ ಮಳೆ ಮುಂದುವರೆದರೆ ಭಾಗಮಂಡಲ ರಸ್ತೆ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಮೊದಲೆಲ್ಲ ಮೃಗಶಿರಾ ಮತ್ತು ಆರಿದ್ರಾ ಮಳೆಗಳು ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದ್ದರಿಂದ ನದಿ, ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿತ್ತು. ಅದರಲ್ಲೂ ಜುಲೈ ಮತ್ತು ಆಗಸ್ಟ್ ತಿಂಗಳು ನಡುಮಳೆಗಾಲದ ದಿನಗಳಾಗಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಈ ಬಾರಿ ಜೂನ್ ನಲ್ಲಿ ಮಳೆ ಸುರಿಯದ ಕಾರಣದಿಂದಾಗಿ ಈಗ ಸುರಿಯುತ್ತಿರುವ ಮಳೆಯಿಂದ ನಿಧಾನವಾಗಿ ನದಿಗಳಲ್ಲಿ ಅದರಲ್ಲೂ ಕಾವೇರಿ ನದಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಮಳೆಗಾಲ ನಿಧಾನವಾಗಿ ಆರಂಭಗೊಂಡು ಕ್ರಮೇಣ ಬಿರುಸುಪಡೆದುಕೊಳ್ಳುವುದು ವಾಡಿಕೆ. ಆದರೆ ಈ ಬಾರಿ ತದ್ವಿರುದ್ಧವಾಗಿದ್ದು, ಒಮ್ಮೆಲೇ ಮಹಾಮಳೆ ಸುರಿಯಲು ಆರಂಭಿಸಿರುವುದರಿಂದ ಪ್ರವಾಹ ಮಾತ್ರವಲ್ಲದೆ, ಗುಡ್ಡಕುಸಿತ, ಮರಗಿಡಗಳು ನೆಲಕ್ಕುರುಳುವ ಭಯ ಆರಂಭವಾಗಿದೆ.

ಎರಡು ದಿನದಲ್ಲಿ ಸುರಿದ ಭಾರೀ ಮಳೆ
ಎರಡು ದಿನದ ಅವಧಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ಕಾರಣದಿಂದಾಗಿ ಈಗಾಗಲೇ ಅಲ್ಲಲ್ಲಿ ಹಾನಿಗಳು ಸಂಭವಿಸಿದ ವರದಿಗಳು ಜಿಲ್ಲೆಯಾದ್ಯಂತ ಬರುತ್ತಿದೆ. ಮುಂದಿನ ದಿನಗಳಲ್ಲಿ ಪುನರ್ವಸು ಮಳೆ ಧಾರಾಕಾರವಾಗಿ ಸುರಿಯಲು ಆರಂಭಿಸಿದರೆ ಮಳೆಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಜಿಲ್ಲೆಯಲ್ಲಿ ವಾಡಿಕೆಯಂತೆ ಮುಂಗಾರು ಮೇ ಕೊನೆಯವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಆರಂಭಗೊಂಡಿದ್ದರೆ ಇಷ್ಟರಲ್ಲೇ ಭತ್ತದ ಕೃಷಿ ಬಿರುಸು ಪಡೆದುಕೊಳ್ಳುತ್ತಿತ್ತು. ಆದರೆ ಇದುವರೆಗೆ ಮಳೆಯಿಲ್ಲದ ಕಾರಣ ಭತ್ತ ಕೃಷಿ ಚಟುವಟಿಕೆ ಮಂದಗತಿಯಲ್ಲಿ ಸಾಗಿತ್ತು. ಇದೀಗ ಮಳೆ ಚೇತರಿಕೆಯಾಗಿರುವುದರಿಂದ ರೈತರು ಅತ್ತ ಗಮನಹರಿಸಲಿದ್ದಾರೆ.
ಭಾಗಮಂಡಲ ವ್ಯಾಪ್ತಿಯಲ್ಲಿ ಒಂದೇ ದಿನದ ಅವಧಿಯಲ್ಲಿ 120 ಮಿ.ಮೀಟರ್ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಜತೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಕೊಡಗಿನಲ್ಲಿ ಮಳೆಯ ಪರಿಸ್ಥಿತಿ ಹೇಗಿದೆ? ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಹೇಗಿದೆ? ಎಂಬುದನ್ನು ನೋಡಿದ್ದೇ ಆದರೆ ಕಳೆದ ವರ್ಷದ ಅರ್ಧದ ಮಳೆಯೂ ಸುರಿದಿಲ್ಲ. ಆದರೆ ಈಗಿನ ಪರಿಸ್ಥಿತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆ ಕಂಡು ಬರುತ್ತದೆ. ಒಮ್ಮೆಲೆ ಭಾರಿ ಮಳೆ ಸುರಿಯಲು ಆರಂಭಿಸಿದರೆ ಸಂಕಷ್ಟ ತಪ್ಪಿದಲ್ಲ.
ಮಡಿಕೇರಿಯಲ್ಲಿ ಸುರಿದ ಮಳೆಯ ಪ್ರಮಾಣವೆಷ್ಟು?
ಕೊಡಗಿನಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಒಂದು ದಿನದ ಅವಧಿಯಲ್ಲಿ ಸರಾಸರಿ ಮಳೆಯನ್ನು ಗಮನಿಸಿದರೆ 58.12 ಮಿ.ಮೀ.ನಷ್ಟು ಮಳೆ ಸುರಿದೆ. ಕಳೆದ ವರ್ಷ ಇದೇ ದಿನ ಎಷ್ಟು ಮಳೆಯಾಗಿತ್ತು ಎಂಬುದನ್ನು ನೋಡಿದ್ದೇ ಆದರೆ 68.01 ಮಿ.ಮೀ. ಮಳೆ ಸುರಿದಿತ್ತು. ಇಷ್ಟೇ ಅಲ್ಲದೆ ಜನವರಿಯಿಂದ ಇಲ್ಲಿಯವರೆಗೆ ಸುರಿದಿರುವ ಮಳೆಯ ಪ್ರಮಾಣವನ್ನು ಗಮನಿಸಿದರೆ ಈ ಬಾರಿ ಕೇವಲ 451.44 ಮಿ.ಮೀ.ನಷ್ಟು ಮಳೆಯಾಗಿದೆ. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1024.84 ಮಿ.ಮೀ ಮಳೆಯಾಗಿತ್ತು. ಈ ಮಳೆಯ ಪ್ರಮಾಣ ಗಮನಿಸಿದರೆ ಕಳೆದ ವರ್ಷಕ್ಕಿಂತ ಈ ಬಾರಿ ಮುಂಗಾರು ದುರ್ಬಲವಾಗಿದೆ ಎನ್ನುವುದಂತು ನಿಜ.
ಇಷ್ಟೇ ಅಲ್ಲದೆ, ಜಿಲ್ಲೆಯಲ್ಲಿ ತಾಲೂಕುವಾರು ಮಳೆಯ ಪ್ರಮಾಣವನ್ನು ಗಮನಿಸಿದರೆ ಮಡಿಕೇರಿ ತಾಲ್ಲೂಕಿನಲ್ಲಿ ಗುರುವಾರ ಸರಾಸರಿ 87.28 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 98.28 ಮಿ.ಮೀ. ಮಳೆಯಾಗಿತ್ತಲ್ಲದೆ, ಜನವರಿಯಿಂದ ಇಲ್ಲಿಯವರೆಗಿನ 705.17 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 1510.87 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲೂಕಿನಲ್ಲಿ ಗುರುವಾರ ಸರಾಸರಿ 47.08 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 48.73 ಮಿ.ಮೀ. ಆಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಈ ಬಾರಿ 326.57 ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 827.32 ಮಿ.ಮೀ. ಮಳೆ ಸುರಿದಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಗುರುವಾರ ಸರಾಸರಿ 40ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 57.03 ಮಿ.ಮೀ. ಮಳೆ ಸುರಿದಿತ್ತು. ಈ ಬಾರಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 322.59 ಮಿ.ಮೀ. ಆಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 736.34 ಮಿ.ಮೀ. ಮಳೆಸುರಿದಿತ್ತು.
ಶಾಂತಳ್ಳಿ, ಭಾಗಮಂಡಲದಲ್ಲಿ ಭಾರೀ ಮಳೆ
ಒಂದು ದಿನದ ಅವಧಿಯಲ್ಲಿ ಹೋಬಳಿವಾರು ಮಳೆ ಹೇಗೆ ಸುರಿದಿದೆ ಎನ್ನುವುದನ್ನು ನೋಡುತ್ತಾ ಹೋದರೆ, ಮಡಿಕೇರಿ ವ್ಯಾಪ್ತಿಯಲ್ಲಿ 54.20, ನಾಪೋಕ್ಲು 76.40, ಸಂಪಾಜೆ 98.50, ಭಾಗಮಂಡಲ 120, ವಿರಾಜಪೇಟೆ ಕಸಬಾ 68.40, ಹುದಿಕೇರಿ 53.30, ಶ್ರೀಮಂಗಲ 59.40, ಪೊನ್ನಂಪೇಟೆ 50, ಅಮ್ಮತಿ 50, ಬಾಳೆಲೆ 1.40, ಸೋಮವಾರಪೇಟೆ ಕಸಬಾ 48.20, ಶನಿವಾರಸಂತೆ 23, ಶಾಂತಳ್ಳಿ 100.20, ಕೊಡ್ಲಿಪೇಟೆ 24, ಕುಶಾಲನಗರ 18.60, ಸುಂಟಿಕೊಪ್ಪ 26 ಮಿ.ಮೀ.ಮಳೆಯಾಗಿರುವುದು ಕಂಡು ಬಂದಿದೆ.
ಜಿಲ್ಲೆಯಲ್ಲಿ ಮಳೆ ಬಿರುಸು ಕಂಡ ಕಾರಣದಿಂದ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಸದ್ಯ ಗರಿಷ್ಠ 2859 ಅಡಿಯ ಜಲಾಶಯದಲ್ಲಿ ನೀರಿನ ಮಟ್ಟ ಈಗ 2826.48 ಅಡಿಗೇರಿದೆ. ಕಳೆದ ವರ್ಷ ಇದೇ ದಿನ 2854.54 ಅಡಿಯಷ್ಟು ನೀರಿತ್ತು. ಇದೀಗ ಜಲಾಶಯಕ್ಕೆ 1557 ಕ್ಯುಸೆಕ್ ನೀರು ಹರಿದು ಬರುತ್ತಿದ್ದರೆ, ಕಳೆದ ವರ್ಷ ಇದೇ ದಿನ 12644ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಇದೀಗ ಜಲಾಶಯದಿಂದ 50 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದರೆ ಕಳೆದ ವರ್ಷ ಇದೇ ನದಿಗೆ 11940 ಕ್ಯುಸೆಕ್ ನೀರನ್ನು ಬಿಡಲಾಗುತ್ತಿತ್ತು. ಸದ್ಯ ಕೊಡಗಿನಲ್ಲಿ ಮಳೆ ಬಿರುಸು ಪಡೆದುಕೊಂಡಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೆಆರ್ ಎಸ್ ಜಲಾಶಯದ ಒಳಹರಿವು ಹೆಚ್ಚಾಗುತ್ತಿರುವುದು ಆಶಾಭಾವನೆ ಮೂಡಿಸಿದೆ.












Click it and Unblock the Notifications