ದುಸ್ಥಿತಿಯಲ್ಲಿ ಮಡಿಕೇರಿಯ ಅಬ್ಬಿ ಜಲಪಾತದ ತೂಗುಸೇತುವೆ!
ಮಡಿಕೇರಿ, ಆಗಸ್ಟ್ 4: ಕೊಡಗಿನಲ್ಲಿರುವ ಪ್ರಮುಖ ಪ್ರವಾಸಿ ತಾಣ ಅಬ್ಬಿ ಜಲಪಾತಕ್ಕೆ ಲಕ್ಷಾಂತರ ಪ್ರವಾಸಿಗರು ಪ್ರತಿವರ್ಷ ಭೇಟಿ ನೀಡುತ್ತಾರೆ. ಹೀಗೆ ಬರುವ ಪ್ರವಾಸಿಗರು ಇಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗುಸೇತುವೆ ಮೇಲೆ ನಿಂತು ಜಲಧಾರೆಯ ಸೌಂದರ್ಯವನ್ನು ವೀಕ್ಷಿಸುತ್ತಾರೆ.
ಈ ಸೇತುವೆಯೀಗ ದುಸ್ಥಿತಿಗೆ ತಲುಪಿದ್ದು ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸೇತುವೆ ನಿರ್ಮಾಣವಾಗಿ ಹೆಚ್ಚು ವರ್ಷಗಳಾಗಿಲ್ಲ. ಆದರೆ ಈಗಲೇ ಇದು ದುಸ್ಥಿತಿಗೆ ತಲುಪಿದೆ. ಈ ಬಗ್ಗೆ ಕಳೆದ ವರ್ಷದಿಂದಲೇ ದೂರುಗಳಿತ್ತು. ಆದರೆ ಸೇತುವೆಯನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿರಲಿಲ್ಲ. ಈಗ ಸೇತುವೆಯನ್ನು ದುರಸ್ತಿ ಮಾಡದೆ ಹೋದರೆ ಮುಂದಿನ ದಿನಗಳಲ್ಲಿ ಭಾರೀ ಅನಾಹುತಗಳಾಗುವ ಸಾಧ್ಯತೆಯಿತ್ತು. ಏಕೆಂದರೆ ತೂಗುಸೇತುವೆಯ ಮೆಟ್ಟಿಲುಗಳು, ಚೈನ್‍ಲಿಂಕ್ ಬೇಲಿ ಎಲ್ಲವೂ ಹಾಳಾಗಿತ್ತು.
ಈ ಬಗ್ಗೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತೂಗುಸೇತುವೆಯ ದುರಸ್ತಿಗೆ ಮುಂದಾಗಿದೆ. ಹೀಗಾಗಿ ಅಬ್ಬಿಜಲಪಾತದ ಬಳಿಗೆ ತೆರಳಿ ಶಿಥಿಲಾವಸ್ಥೆಯಲ್ಲಿರುವ ತೂಗುಸೇತುವೆಯನ್ನು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಸಿ.ಜಗನ್ನಾಥ, ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ಧಿ ಪಡೆದಿರುವ ಸುಳ್ಯದ ಗಿರೀಶ್ ಭಾರಧ್ವಾಜ್ ಸಂಸ್ಥೆಯ ಶಿವಶಂಕರ್, ಗ್ರಾಮೀಣ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಇಂಜಿನಿಯರ್ ಪಾಂಡುರಂಗ, ಪ್ರಮೋದ್ ಅವರು ಪರಿಶೀಲನೆ ನಡೆಸಿದ್ದಾರೆ.

ತೂಗು ಸೇತುವೆ ದುರಸ್ತಿ ನವೀಕರಣ ಸಂಬಂಧಿಸಿದಂತೆ ಸುಮಾರು 23 ಲಕ್ಷ ರೂ. ಅಂದಾಜು ವೆಚ್ಚದ ಪಟ್ಟಿಯನ್ನು ತಯಾರಿಸಲಾಗಿದ್ದು, ಈ ಸಂಬಂಧ ಪರಿಶೀಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.
ಶಿಥಿಲಗೊಂಡಿರುವ ತೂಗು ಸೇತುವೆ, ಮೆಟ್ಟಿಲುಗಳು, ಚೈನ್‍ಲಿಂಕ್ ಬೇಲಿ ನಿರ್ಮಾಣ ಇತರ ಕಾಮಗಾರಿ ಎಲ್ಲವೂ ಇದೇ ವೇಳೆ ನಡೆಯಲಿದ್ದು, ಎಲ್ಲವೂ ಸುಸೂತ್ರವಾಗಿ ನೆರವೇರಿದರೆ ಮುಂದಿನ ದಿನಗಳಲ್ಲಿ ಪ್ರವಾಸಿಗರು ನೆಮ್ಮದಿಯಾಗಿ ತೂಗುಸೇತುವೆಯಲ್ಲಿ ನಿಂತು ಜಲಧಾರೆಯ ಸೊಬಗನ್ನು ಸವಿಯಲು ಅನುಕೂಲವಾಗಲಿದೆ.












Click it and Unblock the Notifications