ಕೊಡಗಿನಲ್ಲಿ ಪುನರಾರಂಭವಾದವು 800 ಹೋಂ ಸ್ಟೇಗಳು
ಮಡಿಕೇರಿ,
ಜೂನ್ 09: ಕೊಡಗಿನಲ್ಲಿ ಬೇಸಿಗೆಯ ದಿನಗಳಲ್ಲಿ ಹವೆ ತಂಪಾಗಿರುವುದರಿಂದ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಹೋಂ ಸ್ಟೇಗಳಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಇದರಿಂದ ಒಂದಷ್ಟು ಆದಾಯ ಬರುತ್ತಿತ್ತು. ಆದರೆ ಈ ಬಾರಿ ಬೇಸಿಗೆಯಲ್ಲಿ ಲಾಕ್ ಡೌನ್ ಆದ ಹಿನ್ನಲೆಯಲ್ಲಿ ಹೋಂ ಸ್ಟೇಯ ನಂಬಿದ್ದ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. id="toptextpromo"> id='are-slot-1' class='oiad oi-axt oiadv'>ಇದೀಗ
ಹೋಂ ಸ್ಟೇಗಳ ಪುನರಾರಂಭಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅಧಿಕೃತ ಅನುಮತಿ ನೀಡಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಣಿಯಾದ ಸುಮಾರು 800 ಹೋಂ ಸ್ಟೇಗಳನ್ನು ತೆರೆಯಲು ಅನುಮತಿ ನೀಡಲಾಗುತ್ತಿದೆ. id='are-slot-2' class='oiad oi-axt oiadv'>
ಹೋಂಸ್ಟೇ ಮಾಲೀಕರು ಸಂಕಷ್ಟದಲ್ಲಿ...
ಹಾಗೆನೋಡಿದರೆ ಜಿಲ್ಲೆಯಲ್ಲಿ ಅಧಿಕೃತವಲ್ಲದೆ, ಅನಧಿಕೃತವಾಗಿಯೂ ಕಾರ್ಯಾಚರಿಸುತ್ತಿರುವ ಹಲವು ಹೋಂ ಸ್ಟೇಗಳಿವೆ. ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಂತೆಯೇ ಹೋಂ ಸ್ಟೇಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡವು. ಬೆಳೆಗಾರರು ಸಾಲ ಮಾಡಿ ಹೋಂ ಸ್ಟೇ ನಿರ್ಮಿಸಿದರು. ಆದರೆ ಈಗ ಪ್ರವಾಸಿಗರಿಲ್ಲದೆ ಮಾಡಿದ ಸಾಲಕ್ಕೆ ಬಡ್ಡಿಯೂ ಕಟ್ಟಲಾಗದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.

ಮಳೆಗಾಲದಲ್ಲಿ ಪ್ರವಾಸಿಗರ ಆಗಮನ ವಿರಳ
ಈಗ ಹೋಂ ಸ್ಟೇಗಳನ್ನು ತೆರೆಯಲು ಅನುಮತಿ ಸಿಕ್ಕರೂ ಮುಂದಿನ ದಿನಗಳು ಮಳೆಗಾಲವಾಗಿರುವುದರಿಂದ ಪ್ರವಾಸಿಗರು ಬರುವುದು ಸಂಶಯವೇ. ಹೀಗಾಗಿ ಹೋಂ ಸ್ಟೇಯನ್ನು ನಂಬಿ ಜೀವನ ಸಾಗಿಸುತ್ತಿದ್ದ ಮಾಲೀಕರ ಬದುಕು ಮೂರಾಬಟ್ಟೆಯಾಗಿದೆ. ಒಂದು ವೇಳೆ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ ಹೋಂ ಸ್ಟೇಗಳಲ್ಲಿ ವಾಸ್ತವ್ಯ ಹೂಡುವುದಾದರೆ ಮಾಲೀಕರು ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದೇನೆಂದರೆ, ಹೋಂ ಸ್ಟೇಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ಸ್ಯಾನಿಟೈಸರ್ ಇಡಬೇಕು, ಮಾಸ್ಕ್ ಧರಿಸಬೇಕು, ಥರ್ಮಲ್ ಸ್ಕ್ಯಾನರ್‌ನಿಂದ ಪರೀಕ್ಷಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಪ್ರವಾಸಿಗರ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ಹೋಂ ಸ್ಟೇ ಮಾಲೀಕರಿಗೆ ಹೆಚ್ಚಿನ ಜವಾಬ್ದಾರಿ
ಇದಲ್ಲದೆ, ತುರ್ತು, ಅನಿವಾರ್ಯ ವೈದ್ಯಕೀಯ ಹಿನ್ನಲೆ ಇದ್ದಲ್ಲಿ ಮಾತ್ರ 65 ವರ್ಷ ಮೇಲ್ಪಟ್ಟವರು, ಅಸ್ವಸ್ಥವಾದವರು, ಗರ್ಭಿಣಿಯರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶವಿರುತ್ತದೆ. ಈ ರೀತಿಯಾಗಿ ಆಗಮಿಸಿದಲ್ಲಿ ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಅಗತ್ಯ. ಜಿಲ್ಲೆಯಲ್ಲಿ ಸದ್ಯ ಯಾವುದೇ ಕಂಟೈನ್ಮೆಂಟ್ ವಲಯ ಇರುವುದಿಲ್ಲ. ಮುಂದೆ ಯಾವ ರೀತಿ ಎಂದು ಹೇಳಲು ಬರುವುದಿಲ್ಲವಾದ್ದರಿಂದ ಈ ವಿಚಾರದಲ್ಲಿ ಹೋಂ ಸ್ಟೇ, ರೇಸಾರ್ಟ್ ಮಾಲೀಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು ಸೂಚನೆ ನೀಡಿ ಪ್ರವಾಸಿಗರ ಆಗಮನ, ನಿರ್ಗಮನ, ಸಮಯ, ದಿನಾಂಕದ ನಿಖರ ಮಾಹಿತಿ ಒದಗಿಸಬೇಕು. ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರಬಾರದು ಎಂದು ಹೇಳಿದ್ದಾರೆ.

ಪ್ರವಾಸಿಗರಿಗೆ ರಕ್ಷಣೆ ಅಗತ್ಯ
ಈ ಸಂಬಂಧ ನಡೆದ ಸಭೆಯಲ್ಲಿ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ, ಪ್ರವಾಸಿಗರಿಗೆ ರಕ್ಷಣೆ ನೀಡಬೇಕು. ಯಾವುದೇ ಕಾರಣಕ್ಕೂ ಕಿರಿಕಿರಿ ಉಂಟಾಗಬಾರದು. ನೋಂದಿತ ಹೋಂ ಸ್ಟೇಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರೆ, ರೇಸಾರ್ಟ್ ಅಸೋಷಿಯೇಷನ್ ಗೌರವ ಸಲಹೆಗಾರರಾದ ಜಿ.ಚಿದ್ವಿಲಾಸ್ ಅವರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗೆ ಅವಕಾಶ ನೀಡುವಂತಾಗಬೇಕು ಎಂದಿದ್ದಾರೆ. ಒಟ್ಟಾರೆ ಹೋಂಸ್ಟೇ ತೆರೆಯಲು ಅನುಮತಿ ನೀಡಿದರೂ ಪ್ರವಾಸಿಗರೂ ಬರುತ್ತಾರಾ? ಬಂದರೂ ಹೋಂ ಸ್ಟೇಗಳು ಸರ್ಕಾರ ನೀಡಿದ ನಿರ್ದೇಶನಗಳನ್ನು ಪಾಲಿಸುತ್ತಾರಾ ಎಂಬ ಪ್ರಶ್ನೆಗಳು ಕಾಡತೊಡಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಜವಾಬ್ದಾರಿಯಿದ್ದು ಅದನ್ನರಿತರೆ ಎಲ್ಲವೂ ಸುಸೂತ್ರವಾಗಿ ನಡೆಯಲು ಸಾಧ್ಯವಾಗಲಿದೆ.












Click it and Unblock the Notifications