ಹುಲಿ ಉಪಟಳದಿಂದ ದಕ್ಷಿಣ ಕೊಡಗಿಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

Posted By: Prithviraj
Subscribe to Oneindia Kannada

ಮಡಿಕೇರಿ, ಅಕ್ಟೋಬರ್, 20: ದಕ್ಷಿಣಕೊಡಗಿನಲ್ಲಿ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಿದರೂ ತಪ್ಪಿಸಿಕೊಂಡು ಅಡ್ಡಾಡುತ್ತಿರುವ ಹುಲಿ ಇದೀಗ ಶ್ರೀಮಂಗಲದಲ್ಲಿ ಕಾಣಿಸಿಕೊಂಡಿದ್ದು, ಹಸುವೊಂದನ್ನು ಬಲಿ ಪಡೆದಿದೆ.

ಅಳಮೇಂಗಡ ರಿವಿನಾ ಮೇದಪ್ಪ ಅವರ ಗದ್ದೆಯಲ್ಲಿ ಮೇಯಲು ಕಟ್ಟಿದ್ದ ಹಾಲು ಕರೆಯುವ ಹಸುವಿನ ಮೇಲೆ ಹಾಡಹಗಲೇ ಕಾರ್ಮಿಕರ ಎದುರಿನಲ್ಲೇ ಹುಲಿ ದಾಳಿ ಮಾಡಿ ಕೊಂದು ಹಾಕಿದೆ.

Cow killed in tiger attack in Kodagu

ಅಷ್ಟಕ್ಕೆ ಸುಮ್ಮನಾಗದ ಹುಲಿ ಸ್ವಲ್ಪ ದೂರದಲ್ಲಿರುವ ಲಕ್ಷ್ಮಿಕಾಂತ್ ಎಂಬುವರಿಗೆ ಸೇರಿದ ಕರುವಿನ ಕಾಲನ್ನು ತಿಂದು ಹಾಕಿದ್ದರೆ, ಮತ್ತೊಂದು ಕರು ಭಯದಿಂದ ಓಡುವಾಗ ಬಿದ್ದು ಕಾಲು ಮುರಿದು ಗಾಯಗೊಂಡಿದೆ.

ಬಾಳೆಲೆ, ನಿಟ್ಟೂರು, ರಾಜಪುರ, ಸುಳುಗೋಡು ವ್ಯಾಪ್ತಿಗಳಲ್ಲಿ ಕಳೆದ ಎರಡು ವರ್ಷದಿಂದ ಹುಲಿ ಹಾವಳಿ ಹೆಚ್ಚಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಹುಲಿ ಬರುತ್ತಿರಬಹುದೆಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಕಾಡಿಗಿಂತ ನಾಡಿನಲ್ಲೇ ಹೆಚ್ಚಾಗಿ ಬೇಟೆ ಸಿಗುತ್ತಿರುವ ಕಾರಣ ಕಾಫಿ ತೋಟ ಸೇರಿದಂತೆ ಕಾಡಿನಂಚಿನಲ್ಲಿದ್ದುಕೊಂಡು ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದೆ ಎನ್ನಲಾಗಿದೆ.

ಇದುವರೆಗೆ ಕಳೆದೊಂದು ವರ್ಷದ ಅವಧಿಯಲ್ಲಿ ಅಳಮೇಂಗಡ ರಿವಿನಾ ಮೇದಪ್ಪ ಅವರಿಗೆ ಸೇರಿದ ಐದು ಹಸುಗಳನ್ನು ಹುಲಿ ಬಲಿ ಪಡೆದಿದೆ ಎನ್ನಲಾಗಿದೆ.

ಕಲ್ಲಳ ಅರಣ್ಯ ವಲಯಕ್ಕೆ ಸೇರುವ ಈ ವ್ಯಾಪ್ತಿಯಲ್ಲಿ ಕಂಡುಬಂದಿರುವ ಹುಲಿ ಹಾವಳಿಯನ್ನು ತಡೆಗಟ್ಟಲು ಹುಲಿ ಸೆರೆಗೆ ಗಂಭೀರ ಕ್ರಮ ಕೈಗೊಳ್ಳಲು ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಹುಲಿಯ ಹಾವಳಿಯಿಂದಾಗಿ ತೋಟ ಗದ್ದೆಗಳಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ಅಷ್ಟೇ ಅಲ್ಲದೆ ದನಗಳನ್ನು ಸಾಕುವುದೇ ಕಷ್ಟವಾಗಿದೆ. ಎಂದು ಗ್ರಾಮಸ್ಥರು ತಮ್ಮ ಅಳಲುತೋಡಿಕೊಂಡಿದ್ದಾರೆ.

ಇನ್ನಾದರೂ ಅರಣ್ಯ ಇಲಾಖೆ ಹುಲಿಯಿಂದ ರಕ್ಷಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಿದೆ. ಇನ್ನೆಷ್ಟು ದಿನ ಹೀಗೆ ಬದುಕುವುದು ಎಂದ ಜನ ನೋವು ತೋಡಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A cow was killed in a tiger attack at South Kodagu. in front of farmers, in day time.
Please Wait while comments are loading...