ಗೌರಿ ಹಬ್ಬಕ್ಕಾಗಿ ‘ಮೊರ’ಕ್ಕೆ ಗ್ರಾಹಕರ ಮೊರೆ: ತಯಾರಿ ಹೇಗೆ..? ಬೆಲೆ ಎಷ್ಟು..?

ಮೈಸೂರು, ಸೆಪ್ಟೆಂಬರ್‌ 05: ಗೌರಿ ಹಬ್ಬದಲ್ಲಿ ಮುತ್ತೈದೆಯರಿಗೆ ಬಾಗಿನ ನೀಡುವ ಸಂಪ್ರದಾಯವಿರುವ ಕಾರಣ ಇದೀಗ ನಗರದಲ್ಲಿ ಬಿದಿರಿನ ಮೊರಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿರುವುದು ಕಾಣಿಸುತ್ತಿದೆ. ರಾತ್ರಿ ಹಗಲೆನ್ನದೆ ಬಹುದಿನಗಳಿಂದ ಮೊರ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಹಬ್ಬದ ವೇಳೆ ಒಂದಷ್ಟು ಹಣ ಸಂಪಾದಿಸಿಕೊಳ್ಳುವ ತವಕದಲ್ಲಿರುವುದು ಕಂಡು ಬರುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಮೊರದ ಮಾರಾಟದ ಭರಾಟೆ ಕಂಡು ಬರುತ್ತಿದೆ.

ನಗರದ ಹಲವೆಡೆ ತಲತಲಾಂತರದಿಂದ ಬಿದಿರಿನಿಂದ ಬುಟ್ಟಿ, ಮೊರ ಹೀಗೆ ಹಲವು ರೀತಿಯ ಬಿದಿರಿನ ಹೂವಿನ ಬುಟ್ಟಿ, ಕುಕ್ಕೆ, ಬೀಸಣಿಕೆ, ಪಂಜರ, ಏಣಿ ಸೇರಿದಂತೆ ಹಲವು ರೀತಿಯ ವಸ್ತುಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಾ ಬಂದಿದ್ದು, ವರ್ಷಕ್ಕೊಮ್ಮೆ ಬರುವ ಗೌರಿ ಹಬ್ಬದಂದು ಎಲ್ಲರೂ ಬಾಗಿನ ನೀಡಲು ಮೊರವನ್ನು ಬಳಕೆ ಮಾಡುವುದರಿಂದ ಅದನ್ನು ಹೆಚ್ಚು ಹೆಚ್ಚಾಗಿ ತಯಾರಿಸಿ ಹಣವನ್ನು ಸಂಪಾದಿಸುವ ಚಿಂತನೆ ಮಾಡುತ್ತಾರೆ.

Consumers Clamor For Mora For Gowri Bagina In Ganesha Festival

ಹಾಗೆನೋಡಿದರೆ ಗೌರಿ ಹಬ್ಬ ಬರುತ್ತಿದೆ ಎನ್ನುವಾಗಲೇ ಅಂದರೆ ಸುಮಾರು ಒಂದು ತಿಂಗಳು ಇರುವಾಗಲೇ ಬಿದಿರಿನ ಕುಲಕಸುಬು ಮಾಡಿಕೊಂಡು ಬಂದಿರುವ ಜನಾಂಗದ ಕಸುಬುದಾರರು ಮೊರ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ರಾತ್ರಿ ಹಗಲು ಎನ್ನದೆ ಬಿದಿರನ್ನು ತುಂಡರಿಸಿ ಅದನ್ನು ಎಳೆಎಳೆಯಾಗಿ ಬಿಡಿಸಿ ಕಚ್ಚಾ ಪದಾರ್ಥಗಳನ್ನು ತಯಾರಿಸಿಕೊಂಡು ಮೊರ ತಯಾರಿ ಶುರುಮಾಡುತ್ತಾರೆ. ಇದಾದ ನಂತರ ಅದನ್ನು ರಸ್ತೆ ಬದಿಯಲ್ಲಿರಿಸಿಕೊಂಡು ಮಾರಾಟ ಮಾಡುತ್ತಾರೆ.

ಮೊರ ಮಾರುವವರ ಮೊಗದಲ್ಲಿ ಮಂದಹಾಸ

ಮೈಸೂರು ನಗರಕ್ಕೆ ಸುತ್ತು ಹಾಕಿಬಂದರೆ ಬಂಬೂಬಜಾರ್, ನೂರಾಒಂದು ಗಣಪತಿ ದೇವಸ್ಥಾನ ಬಳಿ, ನಂಜುಮಳಿಗೆ ಹೀಗೆ ಹಲವಾರು ಕಡೆಗಳಲ್ಲಿ ಬಿದಿರಿನ ವಸ್ತುಗಳನ್ನು ಮಾರಾಟ ಮಾಡುವವರು ಕಾಣಸಿಗುತ್ತಿದ್ದು, ಈಗಂತೂ ಬರೀ ಮೊರಗಳ ಮಾರಾಟವೇ ಹೆಚ್ಚಾಗಿ ಕಂಡುಬರುತ್ತದೆ. ಈ ಬಾರಿ ಮಳೆ, ಬೆಳೆ ಎಲ್ಲವೂ ಸಮೃದ್ಧವಾಗಿದೆ. ಹೀಗಾಗಿ ನೆಮ್ಮದಿಯ ವಾತಾವರಣ ರೈತಾಪಿ ವರ್ಗದಲ್ಲಿದೆ. ಹೀಗಾಗಿ ಹಬ್ಬವನ್ನು ಸಡಗರದಿಂದಲೇ ಮಾಡುತ್ತಿದ್ದು, ಬಾಗಿನ ನೀಡಲು ಮೊರವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬಹುದು ಎಂಬ ಆಶಾ ಭಾವನೆ ಮೊರ ತಯಾರಿಸುವವರಲ್ಲಿ ಬಂದಿದೆ.

ಇವತ್ತಿನ ಪರಿಸ್ಥಿತಿಯಲ್ಲಿ ಬಿದಿರಿನ ಮೊರ ತಯಾರಿ ದುಬಾರಿಯಾಗುತ್ತಿದೆ. ಏಕೆಂದರೆ ಮೊದಲಿನಂತೆ ಬಿದಿರು ಎಲ್ಲೆಂದರಲ್ಲಿ ಸಿಗುತ್ತಿಲ್ಲ. ಹೀಗಾಗಿ ಬಿದಿರಿನ ಬೆಲೆ ಗಗನಕ್ಕೇರಿದೆ. ದುಬಾರಿ ಬೆಲೆ ನೀಡಿ ಬೊಂಬನ್ನು ತಂದು ಮೊರ ಮಾಡಿ ಬಳಿಕ ಮಾರಬೇಕಾಗಿದೆ. ಹೀಗಾಗಿ ಮೊರದ ಬೆಲೆಯೂ ದುಬಾರಿಯಾಗಿದೆ. ಮೊರದ ಅಳತೆಗೆ ತಕ್ಕಂತೆ ಬೆಲೆಯನ್ನು ನಿಗದಿ ಮಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಬೆಲೆಗೆ ಮಾರಾಟ ಮಾಡುತ್ತಿರುವವುದರಿಂದ ಜನರು ಎಲ್ಲಿ ಕಡಿಮೆ ಬೆಲೆ ಇದೆ ಎಂದು ಹುಡುಕಾಟ ನಡೆಸುತ್ತಿದ್ದಾರೆ.

Consumers Clamor For Mora For Gowri Bagina In Ganesha Festival

ಮುತ್ತೈದೆಯರಿಗೆ ಗೌರವ ಸಮರ್ಪಣೆ

ಸದ್ಯ ಮೊರವೊಂದಕ್ಕೆ ನೂರು ರೂಪಾಯಿಗೂ ಹೆಚ್ಚಿನ ಬೆಲೆ ಹೇಳುತ್ತಿದ್ದಾರೆ. ಕೆಲವರು ಜೋಡಿಗೆ ಇನ್ನೂರು ರೂಪಾಯಿ ಕೇಳುತ್ತಿದ್ದು ಗ್ರಾಹಕರು ಚೌಕಾಸಿ ಮಾಡುತ್ತಾ ವ್ಯಾಪಾರ ನಡೆಸುವುದು ಮಾಮೂಲಿಯಾಗಿದೆ. ಗೌರಿ ಹಬ್ಬದವರೆಗೆ ಮೊರಗಳಿಗೆ ಬೇಡಿಕೆ ಇರುವುದರಿಂದ ಅವುಗಳ ಬೆಲೆ ಗಗನಕ್ಕೇರುತ್ತಿದೆ. ಇವತ್ತಿನ ಪರಿಸ್ಥಿತಿಯಲ್ಲಿ ಎಲ್ಲ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿರುವ ಕಾರಣದಿಂದಾಗಿ ಮೊರಕ್ಕೂ ಹೇಳಿದ ಬೆಲೆ ನೀಡಿ ಖರೀದಿಸುವುದು ಗ್ರಾಹಕರಿಗೆ ಅನಿವಾರ್ಯವಾಗಿದೆ.

ಸಾಮಾನ್ಯವಾಗಿ ಗೌರಿ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಹೀಗೆ ವಿವಿಧ ಪದಾರ್ಥಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಇದೇ ಸಂದರ್ಭ ಮೊರ ಮಾಡುವ ಕಸುಬುದಾರರಿಗೂ ಒಂದಷ್ಟು ಹಣ ಹರಿದಾಡುತ್ತದೆ. ಗೌರಿ ಹಬ್ಬದಲ್ಲಿ ಹಿಂದೂ ಸಂಪ್ರದಾಯದಂತೆ ಗೌರಿವ್ರತದ ಮೂಲಕ ಮುತ್ತೈದೆಯರಿಗೆ ಗೌರವ ಸಮರ್ಪಣೆಯ ಪದ್ಧತಿ(ಬಾಗಿನ) ರೂಢಿಯಲ್ಲಿದೆ. ಗೌರಿವ್ರತದ ವೇಳೆ ಮುತ್ತೈದೆಯರ ಮಾಂಗಲ್ಯ ಭಾಗ್ಯ ಮತ್ತಷ್ಟು ಗಟ್ಟಿಗೊಳ್ಳಲಿ ದೀರ್ಘ ಸುಮಂಗಲಿಯಾಗಿ ಬಾಳಲೆಂದು ಹರಸುವುದಕ್ಕಾಗಿಯೇ ಬಾಗಿನ ನೀಡುತ್ತಾರೆ.

ಹಬ್ಬಕ್ಕೆ ಸೀಮಿತವಾಗುತ್ತಿರುವ ಮೊರ

ಈ ಹಿಂದೆ ಪ್ರತಿ ಮನೆ- ಮನೆಯಲ್ಲೂ ಎರಡು ಜೊತೆ ಮೊರ ಇಡಬೇಕೆಂದು ಪ್ರತೀತಿ, ರಾಗಿ ಮತ್ತು ಭತ್ತದ ಶುದ್ಧೀಕರಿಸುವಿಕೆಗೆ ಕಣಗಳಲ್ಲಿ ಮೊರ ಇಲ್ಲದಿದ್ದರೆ ಆಗುತ್ತಿರಲಿಲ್ಲ. ಆದರೆ ಕಾಲಕ್ರಮೇಣ ಆಧುನಿಕತೆಯ ಜೀವನ ಶೈಲಿಗೆ ಮಾರು ಹೋಗುತ್ತಿರುವ ಜನರು ಯಂತ್ರಗಳಿಗೆ ಮೊರೆ ಹೋಗಿರುವುದರಿಂದ ಮೊರದಂತಹ ಗುಡಿ ಕೈಗಾರಿಕೆಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿಯುತ್ತಿವೆ. ಆದರೆ ಗೌರಿ ಹಬ್ಬದ ಸಮಯದಲ್ಲಿಯಾದರೂ ಬಿದಿರಿನ ಮೊರಕ್ಕೆ ಬೇಡಿಕೆ ಇದೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳುವಂತಾಗಿದೆ.

ನಗರದ ಬಂಬೂಬಜಾರ್ ನಿಂದ ಬಿದಿರನ್ನು ತಂದು ಮೊರಗಳನ್ನು ತಯಾರು ಮಾಡಲಾಗುತ್ತಿದೆ. ಒಂದು ಬೊಂಬಿನಲ್ಲಿ ಹತ್ತು ಜೊತೆ ಮೊರ ತಯಾರಿಸ ಬಹುದಾಗಿದ್ದು, ಮಾರಾಟವಾದರೆ ತೊಂದರೆಯಿಲ್ಲ. ಇಲ್ಲದೆ ಹೋದರೆ ನಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಆದರೂ ಹಬ್ಬಕ್ಕೆ ಮೊರಗಳನ್ನು ತಯಾರಿಸಿ ಒಂದಷ್ಟು ಸಂಪಾದಿಸಿಕೊಳ್ಳುವ ಸಲುವಾಗಿ ಶ್ರಮಪಡುತ್ತಾರೆ. ಗೌರಿ ಹಬ್ಬ ಕಳೆಯುತ್ತಿದ್ದಂತೆಯೇ ಮೊರಕ್ಕೆ ಬೇಡಿಕೆ ಕಡಿಮೆಯಾಗುತ್ತದೆ. ಅದು ಏನೇ ಇರಲಿ ಪ್ರತಿಯೊಂದು ಹಬ್ಬವೂ ಒಬ್ಬೊಬ್ಬರ ಕೈಹಿಡಿಯುತ್ತದೆ. ಅದರಂತೆ ಗೌರಿ ಹಬ್ಬ ಮೊರ ತಯಾರಿಸಿ ಜೀವನ ನಡೆಸುವವರ ಪಾಲಿಗೆ ಬೆಳಕಾಗಲಿ ಎನ್ನುವುದೇ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+