KRS Dam: ಕಾವೇರಿ ಸಂಕಷ್ಟಕ್ಕೆ ಹಿಂಗಾರು ಮಳೆ ಆಸರೆ ಆಗುತ್ತಾ?
ಮಡಿಕೇರಿ, ಅಕ್ಟೋಬರ್, 12: ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಮಳೆ ಚೇತರಿಕೆಯಾಗಿರುವುದು ಕೊಡಗಿನಲ್ಲಿ ಕಾಣಿಸುತ್ತಿದೆ. ಈ ವೇಳೆಗೆ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರಲಿಲ್ಲ. ಆದರೆ ಈ ಬಾರಿ ಹಿಂಗಾರು ಮಳೆ ಅಬ್ಬರಿಸುತ್ತಿರುವುದು ಖಾಲಿಯಾಗುತ್ತಿರುವ ಕೆಆರ್‌ಎಸ್ ಜಲಾಶಯಕ್ಕೆ ಅಲ್ಪ ಮಟ್ಟಿಗೆ ಶಕ್ತಿ ತುಂಬಿದಂತಾಗಿದ್ದು, ಜನರಿಗೆ ಆಸರೆಯಾಗುತ್ತಾ? ಎಂಬ ಆಶಾ ಭಾವನೆ ಮೂಡಿಸುತ್ತಿದೆ.
ಹಾಗೆನೋಡಿದರೆ ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಮಳೆ ಸುರಿದಷ್ಟು ನಷ್ಟವೇ. ಅಕಾಲಿಕ ಮಳೆಯಿಂದ ಕಾಫಿ ಮತ್ತು ಭತ್ತ, ಶುಂಠಿ ಹೀಗೆ ಎಲ್ಲ ಬೆಳೆಗಳಿಗೆ ತೊಂದರೆಯೇ. ಆದರೆ ಕೊಡಗಿನಲ್ಲಿ ಮಳೆ ಸುರಿಯುವುದರಿಂದ ಕಾವೇರಿ ನದಿಯಲ್ಲಿ ನೀರು ಹರಿದು ಕೆಆರ್‌ಎಸ್ ಜಲಾಶಯವನ್ನು ಸೇರುವುದರಿಂದ ಕಾವೇರಿ ನೀರನ್ನು ನಂಬಿದವರಿಗೆ ನೆಮ್ಮದಿ ತರಲಿದೆ.

ಈಗಾಗಲೇ ತಮಿಳುನಾಡಿಗೆ ಕೆಆರ್‌ಎಸ್ ಜಲಾಶಯದಿಂದ ನೀರು ಹರಿದು ಹೋಗಿದ್ದು, ಇನ್ನು ಮುಂದೆಯೂ ನೀರು ಹರಿಸಬೇಕಾದ ಅನಿವಾರ್ಯತೆ ಸರ್ಕಾರಕ್ಕೆ ಎದುರಾಗಿದೆ. ಹೀಗಿರುವಾಗ ಜಲಾಶಯ ಬರಿದಾಗುವ ಲಕ್ಷಣಗಳು ಕಾಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೊಡಗಿನಲ್ಲಿ ಮಳೆ ಸುರಿಯುತ್ತಿರುವುದು. ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತಾಗಿದೆ.
ಹಿಂಗಾರು ಮಳೆಯಿಂದ ನಷ್ಟವೂ ಆಗಬಹುದು
ಈ ಹಿಂದೆಯೂ ಹಿಂಗಾರು ಮಳೆ ಧಾರಾಕಾರವಾಗಿ ಸುರಿದು ಕೆರೆಕಟ್ಟೆಗಳನ್ನು ತುಂಬಿಸಿದ ಉದಾಹರಣೆಗಳಿವೆ. ಒಂದು ವೇಳೆ ಹಿಂಗಾರು ಮಳೆ ಸುರಿದರೆ ಕೆರೆಕಟ್ಟೆಗಳಲ್ಲಿ, ನದಿಗಳಲ್ಲಿ ಒಂದಷ್ಟು ನೀರು ಕಾಣಿಸಿಕೊಳ್ಳಬಹು. ಅಲ್ಲದೆ, ಅಂತರ್ಜಲ ವೃದ್ದಿಗೂ ಸಹಕಾರಿಯಾಗಲಿದೆ. ಆದರೆ ಈಗಾಗಲೇ ರೈತರು ಬೆಳೆದ ಬೆಳೆಗೆ ಅನಾನುಕೂಲ ಆಗುತ್ತದೆ ಎಂಬುದನ್ನು ತಳ್ಳಿಹಾಕಲಾಗದು.
ಸದ್ಯದ ಮಟ್ಟಿಗೆ ಕೊಡಗು ಸೇರಿದಂತೆ ಮಲೆನಾಡು ಭಾಗದಲ್ಲಿ ಮಳೆಯಾದರಷ್ಟೆ ಕೆಆರ್‌ಎಸ್ ಜಲಾಶಯಕ್ಕೆ ನೀರು ಹರಿದು ಬರಲು ಸಾಧ್ಯ. ಸದ್ಯ ಅಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಈಗ ಮಳೆ ಬಂದಷ್ಟೂ ಕಾಫಿ ಬೆಳೆಗೆ ಹಾನಿಯಾಗಲಿದೆ ಎನ್ನುವುದು ಬೆಳೆಗಾರರ ಆತಂಕವಾಗಿದೆ.
ಕೊಡಗಿನಲ್ಲಿ ವಾತಾವರಣದ ಏರುಪೇರು
ಇತ್ತೀಚೆಗಿನ ವರ್ಷಗಳಲ್ಲಿ ವಾತಾವರಣದಲ್ಲಿ ಏರುಪೇರು ಆಗುತ್ತಿದ್ದು, ಅದರ ಹೊಡೆತವನ್ನು ಕೊಡಗಿನ ಜನ ಅನುಭವಿಸುತ್ತಲೇ ಬರುತ್ತಿದ್ದಾರೆ. ಭೂಕುಸಿತ, ಬೇಸಿಗೆಯಲ್ಲಿ ಗಿಡಗಳೇ ಸುಟ್ಟು ಹೋಗುವಂತಹ ಬಿಸಿಲ ಝಳ, ಗುಡುಗು ಸಿಡಿಲುಗಳ ಆರ್ಭಟ, ಮಳೆ ಸುರಿದರೂ ಅಂತರ್ಜಲದ ಕೊರತೆ ಹೀಗೆ ಹತ್ತಾರು ಸಮಸ್ಯೆಗಳು ಕೊಡಗಿನ ಜನರನ್ನು ಕಾಡುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಕಡಿಮೆ ಮಳೆ ಕಳೆದ 2022ರಲ್ಲಿ 3211.28 ಮಿ.ಮೀ ಸುರಿದಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಂದರೆ 2023ರಲ್ಲಿ ಜನವರಿಯಿಂದ ಇಲ್ಲಿವರೆಗೆ 2089.14 ಮಿ.ಮೀ ಮಾತ್ರ ಮಳೆ ಸುರಿದಿದೆ. ಒಟ್ಟಾರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 1122.14ಮಿ.ಮೀ ಮಳೆ ಕಡಿಮೆ ಸುರಿದಿದೆ.
ಕಳೆದ ವರ್ಷಕ್ಕಿಂತ ಕಡಿಮೆ ಮಳೆ
ಜಿಲ್ಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 3069.83 ಮಿ.ಮೀ. ಮಳೆ ಸುರಿದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 4671.69 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ 1641.91 ಮಿ.ಮೀ. ಮಳೆ ಸುರಿದಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2481.97 ಮಿ.ಮೀ. ಮಳೆ ಸುರಿದಿತ್ತು, ಸೋಮವಾರಪೇಟೆ ತಾಲ್ಲೂಕಿನಲ್ಲಿ 1555.69 ಮಿ.ಮೀ. ಮಳೆಯಾಗಿದ್ದರೆ ಕಳೆದ ವರ್ಷ 2480.18 ಮಿ.ಮೀ. ಮಳೆಯಾಗಿತ್ತು.
ಗರಿಷ್ಠ ಮಟ್ಟ 2,859 ಅಡಿಗಳ ಹಾರಂಗಿ ಜಲಾಶಯದಲ್ಲಿ ಸದ್ಯ 2856.87 ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2853.04 ಅಡಿಗಳಷ್ಟು ನೀರಿತ್ತು. ಈಗ ಒಳಹರಿವು 1939 ಕ್ಯುಸೆಕ್ ಇದ್ದರೆ, ಕಳೆದ ವರ್ಷ ಇದೇ ವೇಳೆಗೆ 1199 ಕ್ಯುಸೆಕ್ ಇತ್ತು. ಜಲಾಶಯದಿಂದ ನೀರಿನ ಹೊರ ಹರಿವು ನದಿಗೆ 1000 ಕ್ಯೂಸೆಕ್, ನಾಲೆಗೆ 200 ಕ್ಯೂಸೆಕ್ ಹರಿಯುತ್ತಿದ್ದರೆ, ಕಳೆದ ವರ್ಷ ಹೊರ ಹರಿವು ನದಿಗೆ 450 ಕ್ಯೂಸೆಕ್, ನಾಲೆಗೆ 687 ಕ್ಯೂಸೆಕ್ ಮಾತ್ರ ಇತ್ತು.
2017ರಲ್ಲಿ ಆದಂತೆ ಆಗುತ್ತಾ ಈ ವರ್ಷ?
ಕಳೆದ ವರ್ಷ ಮುಂಗಾರು ಮಳೆ ಸಮರ್ಪಕವಾಗಿ ಸುರಿದು ಹೆಚ್ಚುವರಿ ನೀರು ತಮಿಳುನಾಡನ್ನು ಸೇರಿದ್ದರಿಂದ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿಟ್ಟುಕೊಂಡು ಕೃಷಿಗೆ ಮಾತ್ರ ನೀರನ್ನು ಹರಿಸಲಾಗುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ತಮಿಳುನಾಡಿಗೆ ನೀರು ಬಿಡಬೇಕಾಗಿರುವುದರಿಂದ ಜಲಾಶಯದಲ್ಲಿ ಎಷ್ಟೇ ನೀರು ಸಂಗ್ರಹವಿದ್ದರೂ ಅದು ಖಾಲಿಯಾಗುವುದರಲ್ಲಿ ಸಂಶಯವಿಲ್ಲ.
ಹಿಂಗಾರು ಮಳೆ ನವೆಂಬರ್ ಡಿಸೆಂಬರ್ ತನಕವೂ ಸುರಿದ ನಿದರ್ಶನವಿದೆ. ಅದು ಮರುಕಳಿಸಿದರೆ ಕಾವೇರಿ ನದಿಯಲ್ಲಿ ನೀರು ಹರಿದು ಕೆಆರ್‌ಎಸ್ ಜಲಾಶಯವನ್ನು ಸೇರಬಹುದು. ಹಾಗೆಯೇ ಈಗಾಗಲೇ ಬತ್ತಿಹೋಗುತ್ತಿರುವ ಕೆರೆಗಳಿಗೂ ಜೀವಕಳೆ ಬರಬಹುದು. ಏಕೆಂದರೆ ಇಂತಹದೊಂದು ಪವಾಡ 2017ರಲ್ಲಿ ನಡೆದಿತ್ತು. ಅದು ಮರುಕಳಿಸುತ್ತಾ ಗೊತ್ತಿಲ್ಲ. ಹಾಗೇನಾದರೂ ಆದರೆ ಕಾವೇರಿ ನೀರನ್ನು ನಂಬಿ ಬದುಕುವವರು ನೆಮ್ಮದಿಯ ನಿಟ್ಟುಸಿರು ಬಿಡಬಹುದೇನೋ? ಎಲ್ಲವೂ ಕಾಲನ ನಿರ್ಣಯವಾಗಿರುವುದರಿಂದ ಪ್ರಾರ್ಥನೆಯಷ್ಟೇ ನಮಗಿರುವ ದಾರಿ ಎಂಬಂತಾಗಿದೆ.












Click it and Unblock the Notifications