ಭಾಗಮಂಡಲ ಬಳಿಯ ಅರಣ್ಯದಲ್ಲಿ ಬೇಟೆಗಾರನೇ ಬೇಟೆಯಾದ!
ಮಡಿಕೇರಿ, ಡಿಸೆಂಬರ್ 13: ಕೊಡಗಿನ ಅರಣ್ಯಗಳಲ್ಲಿ ನಡೆಯುತ್ತಿರುವ ಬೇಟೆಯನ್ನು ಹತ್ತಿಕ್ಕುವುದು ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ಕಷ್ಟವಾಗಿ ಪರಿಣಮಿಸುತ್ತಿದ್ದು, ಬೇಟೆಗೆಂದು ತೆರಳುವ ಗುಂಪುಗಳ ನಡುವೆಯೇ ಮಾತಿನ ಚಕಮಕಿ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗುವುದು ಹಿಂದಿನಿಂದಲೂ ನಡೆದು ಬಂದಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಮಡಿಕೇರಿ ತಾಲೂಕಿನ ಮಕ್ಕಂದೂರು ಬಳಿ ಬೇಟೆಗೆ ತೆರಳಿದ ಸಂದರ್ಭ ಗುಂಡಿಟ್ಟು ಕೊಲೆಗೈದ ಘಟನೆ ನಡೆದಿತ್ತು. ಆ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ ಆಗಲೇ ಬೇಟೆಗೆ ತೆರಳಿದ್ದ ವೇಳೆ ಎರಡು ಬೇಟೆಗಾರರ ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದು ಒಬ್ಬಾತ ಸಾವನ್ನಪ್ಪಿರುವ ಘಟನೆ ಭಾಗಮಂಡಲ ಬಳಿಯ ಮುಂಡ್ರೋಟು ಅರಣ್ಯಪ್ರದೇಶದಲ್ಲಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಸತ್ತವನು ಕೇರಳದ ಜಾರ್ಜ್(50) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದೆ. ಕೊಲೆಯಾದ ಜಾರ್ಜ್ ಕೇರಳದ ತಳಿಪರಂಬುವಿನ ಮೀನಂಕೇರಿ ನಿವಾಸಿಯಾಗಿದ್ದು ಶ್ರೀಮಂತನಾಗಿದ್ದನು ಎನ್ನಲಾಗಿದೆ. ಬಹುಶಃ ಈತ ಬೇಟೆಯಾಡುವ ಹವ್ಯಾಸ ಹೊಂದಿದ್ದು ಸಹಚರರೊಂದಿಗೆ ಬೇಟೆಯಾಡಲು ಬಂದಿದ್ದು, ಈ ವೇಳೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದಿರಬಹುದೆಂದು ಹೇಳಲಾಗುತ್ತಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಭಾಗಮಂಡಲ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ನೈಜ ಮಾಹಿತಿ ತಿಳಿದು ಬರಬೇಕಿದೆ.












Click it and Unblock the Notifications