ಸಿಎಂ ಆಗಿ ಯೋಗಿ ಆದಿತ್ಯನಾಥ್‌ರ ಮೊದಲ ನಿರ್ಧಾರ: ಉಚಿತ ಪಡಿತರ ಯೋಜನೆ ವಿಸ್ತರಣೆ
ಲಕ್ನೋ ಮಾರ್ಚ್ 26: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ತನ್ನ ಉಚಿತ ಪಡಿತರ ಯೋಜನೆಯನ್ನು ಮೂರು ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿದೆ. ನಿನ್ನೆ ಎರಡನೇ ಬಾರಿಗೆ ಯುಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಉಚಿತ ಪಡಿತರ ಯೋಜನೆಯನ್ನು ಮುಂದಿನ 3 ತಿಂಗಳವರೆಗೆ ವಿಸ್ತರಿಸಲು ನಿರ್ಧರಿಸಿದ್ದೇವೆ. ಇದರಿಂದ ರಾಜ್ಯದ 15 ಕೋಟಿ ಜನರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಯೋಜನೆಗಾಗಿ ಸರ್ಕಾರ ₹ 3,270 ಕೋಟಿ ವೆಚ್ಚ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರಾರಂಭಿಸಲಾದ ಉಚಿತ ಪಡಿತರ ಯೋಜನೆಯು ಮಾರ್ಚ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಈ ಕಾರ್ಯಕ್ರಮ ಉತ್ತರ ಪ್ರದೇಶದಲ್ಲಿ ಈಗಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ವಿಚಾರವಾಗಿತ್ತು.

"ಉತ್ತರಪ್ರದೇಶದಲ್ಲಿ ಮೂರು ತಿಂಗಳ ಕಾಲ ಉಚಿತ ಪಡಿತರ ನೀಡಲಾಗುವುದು. ಬಡವರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಜನರಿಗೆ ತಲುಪಬೇಕು" ಎಂದು ಲಕ್ನೋದ ಲೋಕಭವನದಲ್ಲಿ ಕ್ಯಾಬಿನೆಟ್ ಸಭೆಯ ನಂತರ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.
ಯೋಗಿ ಆದಿತ್ಯನಾಥ್ ಅವರು 37 ವರ್ಷಗಳ ನಂತರ ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು. ಅದ್ಧೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಮಂತ್ರಿಗಳು ಮತ್ತು ನಿತೀಶ್ ಕುಮಾರ್ ಅವರಂತಹ ಮಿತ್ರಪಕ್ಷಗಳು ಭಾಗವಹಿಸಿದ್ದರು.
ಯೋಗಿ ಆದಿತ್ಯನಾಥ್ ಅವರಲ್ಲದೆ, 52 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. 2024 ರ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಸಚಿವರನ್ನು ಆಯ್ಕೆ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಯುಪಿ ಚುನಾವಣೆಯಲ್ಲಿ ಸೋತಿದ್ದ ಕೇಶವ್ ಪ್ರಸಾದ್ ಮೌರ್ಯ ಮತ್ತೆ ಉಪಮುಖ್ಯಮಂತ್ರಿಯಾಗಿದ್ದಾರೆ. ದಿನೇಶ್ ಶರ್ಮಾ ಬದಲಿಗೆ ಬ್ರಾಹ್ಮಣ ನಾಯಕ ಬ್ರಜೇಶ್ ಪಾಠಕ್ ಅವರನ್ನು ನೇಮಕ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ 403 ಕ್ಷೇತ್ರಗಳ ಪೈಕಿ 255 ಕ್ಷೇತ್ರಗಳನ್ನು ಗೆಲ್ಲುವ ಮೂಲಕ 41.29 ಶೇಕಡಾ ಮತಗಳನ್ನು ಪಡೆಯುವ ಮೂಲಕ ಅಧಿಕಾರವನ್ನು ಉಳಿಸಿಕೊಂಡಿದೆ. ಯೋಗಿ ಆದಿತ್ಯನಾಥ್ ಅವರು ತಮ್ಮ ಪಕ್ಷವನ್ನು ಭಾರಿ ಗೆಲುವಿನತ್ತ ಮುನ್ನಡೆಸಿದರು. ಯೋಗಿ ಆದಿತ್ಯನಾಥ್ ಅಅವರು ರಾಜ್ಯದಲ್ಲಿ ಪೂರ್ಣಾವಧಿಯನ್ನು ಪೂರ್ಣಗೊಳಿಸಿದ, 37 ವರ್ಷಗಳಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿಯಾಗಿದ್ದಾರೆ.












Click it and Unblock the Notifications