ಇದ್ಯಾಕೆ ಹೀಗೆ?: ಉತ್ತರ ಪ್ರದೇಶದಲ್ಲಿ 4ನೇ ಹಂತದ ಮತದಾನದಿಂದಲೇ ಬಿಜೆಪಿ ಭವಿಷ್ಯ ನಿರ್ಧಾರ
ಲಕ್ನೋ, ಫೆಬ್ರವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಕಣ ರಂಗೇರಿದೆ. ನಾಲ್ಕನೇ ಹಂತದಲ್ಲಿ ರಾಜ್ಯದ 9 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಸುವುದಕ್ಕೆ ಚುನಾವಣಾ ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಿಜೆಪಿಯ ಪಾಲಿಗೆ ಈ ನಾಲ್ಕನೇ ಹಂತದ ಮತದಾನ ಹೆಚ್ಚು ನಿರ್ಣಾಯಕ ಎನಿಸಿದೆ.
ಬುಧವಾರ ರಾಜ್ಯದ ಪಿಲಿಭಿತ್, ಲಖಿಂಪುರ್ ಖೇರಿ, ಸೀತಾಪುರ್, ಲಕ್ನೋ, ಹರ್ದೋಯಿ, ಉನ್ನಾವೋ, ರಾಯ್ ಬರೇಲಿ, ಫತೇಪುರ್ ಮತ್ತು ಬಂದಾ ಜಿಲ್ಲೆಗಳಲ್ಲಿ ನಡೆಯಲಿರುವ ಮತದಾನ ಪ್ರಕ್ರಿಯೆಯು ಭವಿಷ್ಯದ ಫಲಿತಾಂಶವನ್ನು ನಿರ್ಧರಿಸುತ್ತದೆ ಎಂದು ಅವಲೋಕಿಸಲಾಗುತ್ತಿದೆ.
ಉತ್ತರ ಪ್ರದೇಶದ ನಾಲ್ಕನೇ ಹಂತದ ಚುನಾವಣೆಯು ಭಾರತೀಯ ಜನತಾ ಪಕ್ಷದ ಮಟ್ಟಿಗೆ ಏಕೆ ನಿರ್ಣಾಯಕ ಎನಿಸಿದೆ?, ಮೊದಲು ಮೂರು ಹಂತದ ಮತದಾನಕ್ಕಿಂತ ಇದು ಹೇಗೆ ವಿಶೇಷವಾಗಿದೆ?, ಬಿಜೆಪಿ ಅಧಿಕಾರದ ಲಾಭ-ನಷ್ಟದ ಲೆಕ್ಕಾಚಾರಕ್ಕೆ ಈ ಚುನಾವಣೆ ಎಷ್ಟರ ಮಟ್ಟಿಗೆ ಮಹತ್ವದ ಪಾತ್ರ ವಹಿಸಲಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಯುಪಿಯ ನಾಲ್ಕನೇ ಹಂತದಲ್ಲಿ 59 ಕ್ಷೇತ್ರಗಳಿಗೆ ಮತದಾನ
ಉತ್ತರ ಪ್ರದೇಶದಲ್ಲಿ ಫೆಬ್ರವರಿ 23ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಯಲ್ಲಿ 59 ಕ್ಷೇತ್ರಗಳ 624 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾರ್ದೋಯ್‌ನ ಸವಾಯಜ್‌ಪುರದಲ್ಲಿ ಅತಿಹೆಚ್ಚು ಅಂದರೆ 15 ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ, ಲಖಿಂಪುರದ ಪಾಲಿಯಾ ಮತ್ತು ಸೀತಾಪುರದ ಸೇವಾತಾ ಕ್ಷೇತ್ರಗಳಲ್ಲಿ ಅತಿಕಡಿಮೆ ಅಂದರೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

59 ಕ್ಷೇತ್ರಗಳಲ್ಲಿ 2017ರ ಮತದಾರರ ತೀರ್ಪು ಹೇಗಿತ್ತು?
ಕಳೆದ 2017ರಲ್ಲಿ ಉತ್ತರ ಪ್ರದೇಶದ ಇದೇ 59 ಕ್ಷೇತ್ರಗಳಲ್ಲಿ ಮತದಾರರು ಯಾವ ರೀತಿ ತೀರ್ಪು ನೀಡಿದ್ದರು ಎಂಬುದು ಬಹುಮುಖ್ಯವಾಗಿರುತ್ತದೆ. 9 ಜಿಲ್ಲೆಗಳ 59 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಕ್ಷವೇ 51 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಒಂದು ಕ್ಷೇತ್ರವು ಬಿಜೆಪಿಯ ಮಿತ್ರಪಕ್ಷ ಅಪ್ನಾ ದಳದ ಪಾಲಾಗಿತ್ತು. ಸಮಾಜವಾದಿ ಪಕ್ಷ 4 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, 2 ಸ್ಥಾನಗಳಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿತ್ತು. ಬಹುಜನ ಸಮಾಜವಾದಿ ಪಕ್ಷವು ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು.

ನಾಲ್ಕನೇ ಹಂತದಲ್ಲಿ ಲಖೀಂಪುರ ಖೇರಿ ಜಿಲ್ಲೆ
ರೈತ ಚಳುವಳಿ ಸಂದರ್ಭದಲ್ಲಿ ಸಾಕಷ್ಟು ಸುದ್ದಿಯಾದ ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯುಲ್ಲಿ ಫೆಬ್ರವರಿ 23ರಂದು ಮತದಾನ ನಡೆಯಲಿದೆ. ಕಳೆದ ಅಕ್ಟೋಬರ್ 3ರಂದು ರೈತರ ಪ್ರತಿಭಟನೆ ಸಂದರ್ಭದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಟೇನಿ ಪುತ್ರ ಆಶಿಶ್ ಮಿಶ್ರಾರಿದ್ದ ಕಾರನ್ನು ಜನರ ಮೇಲೆ ಹರಿಸಿದ ಘಟನೆ ನಡೆದಿತ್ತು. ಈ ದುರ್ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಪ್ರಾಣ ಬಿಟ್ಟಿದ್ದರು. ಇದೇ ಪ್ರಕರಣ ಸಂಬಂಧ ಬಂಧಿಸಲ್ಪಟ್ಟಿದ್ದ ಅಶಿಶ್ ಮಿಶ್ರಾ ಇತ್ತೀಚಿಗಷ್ಟೇ ಜಾಮೀನು ಪಡೆದು ಹೊರ ಬಂದಿದ್ದಾರೆ.

ಯುಪಿ ನಾಲ್ಕನೇ ಹಂತದ ಚುನಾವಣೆ ಬಿಜೆಪಿಗೆ ಬಹುಮುಖ್ಯ?
ಲಖೀಂಪುರ ಖೇರಿ ಪ್ರಕರಣವನ್ನು ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿವೆ. ಅದರಲ್ಲೂ ಇತ್ತೀಚಿಗೆ ಅಶಿಶ್ ಮಿಶ್ರಾ ಬಿಡುಗಡೆ ನಂತರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇಂಥ ಸನ್ನಿವೇಶದ ಮಧ್ಯೆ ನಾಲ್ಕನೇ ಹಂತದಲ್ಲಿ ನಡೆಯುವ ಮತದಾನದಲ್ಲಿ ಬಿಜೆಪಿಯು ಈ ಹಿಂದೆ ಗೆದ್ದುಕೊಂಡಿದ್ದ 51 ವಿಧಾನಸಭೆ ಕ್ಷೇತ್ರಗಳನ್ನು ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ತಮ್ಮದೇ ಪಕ್ಷದ ವಿರುದ್ಧ ಮಾತನಾಡುತ್ತಿರುವ ತೆರಾಯ್ ಪ್ರದೇಶದಲ್ಲಿ ಪಕ್ಷವು ಪ್ರತಿರೋಧವನ್ನು ಎದುರಿಸುತ್ತಿದೆ. ವರುಣ್ ಗಾಂಧಿ ರೈತರ ಪ್ರಾಬಲ್ಯವಿರುವ ಪಿಲಿಭಿತ್‌ನ ಸಂಸದರಾಗಿದ್ದಾರೆ. ಲಖೀಂಪುರ ಖೇರಿಯಲ್ಲಿ ನಡೆದ ದುರ್ಘಟನೆಯನ್ನು ಪ್ರತಿಪಕ್ಷಗಳು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದು, ಜನರ ಮನದಲ್ಲೂ ಆ ಘಟನೆ ಇನ್ನೂ ಹಸಿರಾಗಿದೆ. ಇದರ ಮಧ್ಯೆ ಸೀತಾಪುರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯನ್ನು ಎದುರಿಸಬೇಕಿದೆ.

ಬಂಡಾಯದ ಬೇಗುದಿಯಲ್ಲಿ ಕಾಂಗ್ರೆಸ್
ಕಾಂಗ್ರೆಸ್ ಪಕ್ಷದ ಪಾಲಿಗೆ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಕಾಂಗ್ರೆಸ್ ಶಾಸಕರಾದ ಅದಿತಿ ಸಿಂಗ್ ಮತ್ತು ರಾಕೇಶ್ ಸಿಂಗ್ ಇಬ್ಬರೂ ಬಂಡಾಯದ ಬಾವುಟ ಹಾರಿಸಿದ್ದು ಬಿಜೆಪಿ ಪಾಳಯಕ್ಕೆ ಸೇರಿದ್ದಾರೆ. ರಾಯ್ ಬರೇಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಸದೀಯ ಕ್ಷೇತ್ರವಾಗಿದ್ದು, ಇಲ್ಲಿ ಸ್ಥಾನಗಳನ್ನು ಗೆಲ್ಲುವಲ್ಲಿ ಸೋತರೆ ಕಾಂಗ್ರೆಸ್ ಪಕ್ಷವು ದೊಡ್ಡ ಮುಖಭಂಗವನ್ನು ಎದುರಿಸಬೇಕಾಗುತ್ತದೆ.












Click it and Unblock the Notifications