ಯುಪಿಯಲ್ಲಿ ಬಿಜೆಪಿಗೆ ಮುಕೇಶ್ ವರ್ಮಾ ರಾಜೀನಾಮೆ; 2 ದಿನದಲ್ಲೇ ಪಕ್ಷ ತೊರೆದ 7 ಶಾಸಕರು
ಲಕ್ನೋ, ಜನವರಿ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಮೇಲಿಂದ ಮೇಲೆ ಹೊಡೆತ ಬೀಳುತ್ತಿದೆ. ಕಳೆದ 48 ಗಂಟೆಗಳಲ್ಲಿ 7ನೇ ಶಾಸಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಮುಕೇಶ್ ವರ್ಮಾ ಗುರುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆ ಮೂಲಕ ಎರಡು ದಿನಗಳಲ್ಲಿ ಬಿಜೆಪಿ ಏಳು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದಂತೆ ಆಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಉತ್ತರ ಪ್ರದೇಶದಲ್ಲಿ ದಲಿತರು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಸಮುದಾಯ, ರೈತರು ಮತ್ತು ನಿರುದ್ಯೋಗಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಮುಕೇಶ್ ವರ್ಮಾ ಆರೋಪಿಸಿದ್ದಾರೆ.
भाजपा सरकार द्वारा 5 वर्ष के कार्यकाल में दलित, पिछड़ों और अल्पसंख्यक समुदाय के नेताओं व जनप्रतिनिधियों को कोई तवज्जो नहीं दी गई व दलित, पिछड़ों किसानों व बेरोजगारों की उपेक्षा की गई। इसकारण मैं भारतीय जनता पार्टी की प्राथमिक सदस्यता से इस्तीफा देता हूँ।@swatantrabjp @JPNadda pic.twitter.com/5NGFBRSHnk
— Dr.Mukesh Verma (@DrMukeshMLASKB) January 13, 2022
ಮುಕೇಶ್ ವರ್ಮಾ ಟ್ವೀಟ್ ಸಂದೇಶ:
ಬಿಜೆಪಿ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಮುಖಂಡರು ಮತ್ತು ಜನಪ್ರತಿನಿಧಿಗಳ ಬಗ್ಗೆ ಗಮನ ಹರಿಸಿಲ್ಲ, ಈ ಸಮುದಾಯಗಳನ್ನು ನಿರ್ಲಕ್ಷಿಸಲಾಗಿದೆ. ಹೀಗಾಗಿ ನಾನು ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ," ಎಂದು ಮುಕೇಶ್ ವರ್ಮಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿಗೆ ಗುಡ್ ಬೈ ಎಂದ ಇಬ್ಬರು ಸಚಿವರು:
ಮಂಗಳವಾರ ಉತ್ತರ ಪ್ರದೇಶದ ಕಾರ್ಮಿಕ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಸಂಪುಟ ಮತ್ತು ಭಾರತೀಯ ಜನತಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದ ಇತರ ನಾಲ್ವರು ಶಾಸಕರು ಇದನ್ನೇ ಅನುಸರಿಸಿ ಬಿಜೆಪಿ ತೊರೆದಿದ್ದಾರೆ ಎನ್ನಲಾಗಿದೆ. ದಾರಾ ಸಿಂಗ್ ಚೌಹಾಣ್ ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಅರಣ್ಯ ಮತ್ತು ಪರಿಸರ ಸಚಿವರಾಗಿ ಸೇವೆ ಸಲ್ಲಿಸಿದರು. ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಅವರು ಬುಧವಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ದಾರಾ ಸಿಂಗ್ ಚೌಹಾಣ್ ಸೇರಿದಂತೆ ಸಚಿವರು ಹಾಗೂ ಶಾಸಕರ ರಾಜೀನಾಮೆ ಭಾರೀ ಹಿನ್ನಡೆಯಾಗಿದೆ. ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಜನವರಿ 11ರಂದು ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆಯೊಂದಿಗೆ ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗವಾಗಿತ್ತು. ಕೆಲ ಗಂಟೆಗಳಲ್ಲಿ ಅವರ ನಿಕಟವರ್ತಿ ರೋಷನ್ ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಭಗವತಿ ಸಾಗರ್ ಮತ್ತು ವಿನಯ್ ಶಾಕ್ಯ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದರು.
ಏಳು ಹಂತಗಳಲ್ಲಿ ನಡೆಯಲಿರುವ ಯುಪಿ ಚುನಾವಣೆ:
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ದಿನಾಂಕ ಪ್ರಕಟಿಸಿ ಆಗಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
2017ರ ಚುನಾವಣೆ ಫಲಿತಾಂಶ:
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications