ಯುಪಿ ಅಖಾಡದಲ್ಲಿ ಪ್ರಧಾನಿ ಮೋದಿ ವಿರುದ್ಧ "ಶೋಲೆ" ಡೈಲಾಗ್ ಹೊಡೆದ ಕೇಜ್ರಿವಾಲ್!
ಲಕ್ನೋ, ಫೆಬ್ರವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡುವೆ ಲಕ್ನೋದ ಅಖಾಡದಲ್ಲಿ ನಿಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಾಲಿವುಡ್ ಬ್ಲಾಕ್ ಬಸ್ಟರ್ ಸಿನಿಮಾ ಶೋಲೆ ಡೈಲಾಗ್ ಹೊಡೆದಿದ್ದಾರೆ. ದೇಶದಲ್ಲಿ ಭಯೋತ್ಪಾದಕರ ವಿರುದ್ಧ ಏಕವ್ಯಕ್ತಿ ಶಕ್ತಿಯಾಗಿ ಕುಮಾರ್ ವಿಶ್ವಾಸ್ ಅವರನ್ನೇ ನೇಮಿಸಿ ಎನ್ನುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿಕೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಲಕ್ನೋದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ಬಿಜೆಪಿ ಎಲ್ಲಾ ಏಜೆನ್ಸಿಗಳಿಂದ ದಾಳಿ ನಡೆಸಿತು ಆದರೆ ಅವರಿಗೆ ಏನೂ ಸಿಗಲಿಲ್ಲ. ನಾನು ಕೇಳಿದಾಗ, ಗಜಿಯಾಬಾದ್‌ನ ಕವಿಯೊಬ್ಬರು ಕೇಜ್ರಿವಾಲ್ ಭಯೋತ್ಪಾದಕ ಎಂದು ಕನಸು ಕಂಡಿರುವುದಾಗಿ ಹೇಳಿದರು. ಮೋದಿಯವರೇ ಎಲ್ಲಾ ತನಿಖಾ ಸಂಸ್ಥೆಗಳನ್ನು ತೆಗೆದು ಹಾಕಿ, ಆ ಕವಿಗೆ ಉದ್ಯೋಗವನ್ನು ನೀಡಿ. ಯಾರು ಭಯೋತ್ಪಾದಕರು ಎಂಬುದನ್ನು ಅವರೇ ನಿಮಗೆ ಹೇಳುತ್ತಾರೆ," ಎಂದು ಪ್ರತ್ಯುತ್ತರ ನೀಡಿದರು.
ಪಂಜಾಬ್‌ನ ಮುಖ್ಯಮಂತ್ರಿ ಅಥವಾ ಸ್ವತಂತ್ರ ಖಲಿಸ್ತಾನ್ ರಾಷ್ಟ್ರದ ಪ್ರಧಾನಿಯಾಗಲು ಅರವಿಂದ್ ಕೇಜ್ರಿವಾಲ್ ಬಯಸಿದ್ದರು ಎಂಬ ಕುಮಾರ್ ವಿಶ್ವಾಸ್ ಹೇಳಿಕೆಯು ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿತ್ತು. ಪ್ರಧಾನಿ ಆದಿಯಾಗಿ ಬಿಜೆಪಿಯ ಬಹುಪಾಲು ನಾಯಕರು ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಲು ಕುಮಾರ್ ವಿಶ್ವಾಸ್ ಹೇಳಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡರು. ಅಂಥ ಬಿಜೆಪಿ ನಾಯಕರಿಗೆ ಅರವಿಂದ್ ಕೇಜ್ರಿವಾಲ್ ತಿರುಗೇಟು ಕೊಟ್ಟಿದ್ದಾರೆ.

ಪಂಜಾಬ್ ಅಖಾಡದಲ್ಲಿ ಕೇಜ್ರಿವಾಲ್ ವಿರುದ್ಧ ಮೋದಿ ಆರೋಪ
ಪಂಜಾಬ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು. "ಕುಮಾರ್ ವಿಶ್ವಾಸ್ ಹೇಳಿಕೆಯನ್ನು ಜನರು ಸೂಕ್ಷ್ಮವಾಗಿ ಗಮನಿಸಬೇಕೆಂದು ಪ್ರಧಾನಿ ಸಲಹೆ ನೀಡಿದ್ದರು. ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಪಕ್ಷವು ಪಾಕಿಸ್ತಾನದ ಅಜೆಂಡಾವನ್ನು ಹೊಂದಿದೆ. "ಭಾರತವನ್ನು ಒಡೆಯಲು ಹಾಗೂ ಅಧಿಕಾರ ಪಡೆಯುವುದಕ್ಕಾಗಿ ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಿದ್ದಾರೆ," ಎಂದು ಮೋದಿ ಆರೋಪಿಸಿದ್ದರು.
"ಅಧಿಕಾರ ಪಡೆಯುವುದಕ್ಕಾಗಿ ಪ್ರತ್ಯೇಕತಾವಾದಿಗಳ ಜೊತೆ ಕೈ ಜೋಡಿಸುವುದಕ್ಕೂ ಆಪ್ ಸಿದ್ಧವಾಗಿದೆ. ಅಗತ್ಯಬಿದ್ದರೆ ದೇಶವನ್ನು ಒಡೆಯುವುದಕ್ಕೂ ಅವರು ಸಿದ್ಧರಾಗಿದ್ದಾರೆ. ದೇಶದ ಶತ್ರುಗಳು ಮತ್ತು ಪಾಕಿಸ್ತಾನದ ಅಜೆಂಡಾಗೂ ಇವರ ಅಜೆಂಡಾಗೂ ಯಾವುದೇ ವ್ಯತ್ಯಾಸವಿಲ್ಲ. ಅದಕ್ಕಾಗಿಯೇ ಅವರು ಸರ್ಜಿಕಲ್ ಸ್ಟ್ರೈಕ್‌ಗಳಲ್ಲಿ ಪಾಕಿಸ್ತಾನದ ಮಾರ್ಗವನ್ನು ಪ್ರತಿಧ್ವನಿಸುತ್ತಾರೆ. ಅದಕ್ಕಾಗಿಯೇ ಅವರು ಪಂಜಾಬ್‌ನಲ್ಲಿ ಡ್ರಗ್ಸ್ ಜಾಲವನ್ನು ಹೆಚ್ಚಿಸಲು ಬಯಸುತ್ತಾರೆ," ಎಂದು ಮೋದಿ ಆರೋಪಿಸಿದ್ದರು.

ಶೋಲೆ ಸಿನಿಮಾದ ಡೈಲಾಗ್ ಹೊಡೆದ ಕೇಜ್ರಿವಾಲ್
ಉತ್ತರ ಪ್ರದೇಶದ ಚುನಾವಣಾ ಅಖಾಡದಲ್ಲಿ ನಿಂದ ಅರವಿಂದ್ ಕೇಜ್ರಿವಾಲ್ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘರ್ಜಿಸಿದ್ದಾನೆ. ಬಾಲಿವುಡ್ ಬ್ಲಾಕ್ ಬಸ್ಟರಿ ಮೂವಿ ಶೋಲೆ ಸಿನಿಮಾದ ಡೈಲಾಗ್ ಹೊಡೆದಿದ್ದಾರೆ. "ನಾನು ಭ್ರಷ್ಟರನ್ನು ಬೆದರಿಸುವ ಭಯೋತ್ಪಾದಕ," ಎಂದು ಹೇಳಿದ್ದಾರೆ. ದೇಶದಲ್ಲಿ ಎರಡು ರೀತಿಯ ಭಯೋತ್ಪಾದಕರಿದ್ದಾರೆ, ಒಬ್ಬ ಭಯೋತ್ಪಾದಕರು ಜನರನ್ನು ಹೆದರಿಸಿದರೆ ಇನ್ನೊಂದು ರೀತಿಯ ಭಯೋತ್ಪಾದಕರು ಭ್ರಷ್ಟರನ್ನು ಹೆದರಿಸುತ್ತಾರೆ. ಕೇಜ್ರಿವಾಲ್ ಭ್ರಷ್ಟರನ್ನು ಹೆದರಿಸುವ ಭಯೋತ್ಪಾದಕ ಎಂದಿದ್ದಾರೆ. ಇದೇ ರೀತಿ ಶೋಲೆ ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. "ಯಾರಾದರೂ ಭ್ರಷ್ಟಾಚಾರದಲ್ಲಿ ತೊಡಗಿದರೆ, ತಾಯಿ ಹೇಳುತ್ತಾರೆ- ಮಗ ಮಲಗು, ಇಲ್ಲದಿದ್ದರೆ ಕೇಜ್ರಿವಾಲ್ ಬರುತ್ತಾನೆ ಎಂದಿದ್ದಾರೆ.

ಬಿಜೆಪಿ, ಕಾಂಗ್ರೆಸ್ ಮತ ಕೇಳಲು ಕೇಜ್ರಿವಾಲ್ ಹೆಸರು ಬೇಕೇ?
ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅರವಿಂದ್ ಕೇಜ್ರಿವಾಲ್, "ಕಳೆದ 70 ವರ್ಷಗಳಲ್ಲಿ ನೀವು ಕೆಲಸವನ್ನು ಮಾಡಿದ್ದರೆ, ಆ ಕೆಲಸದ ಹೆಸರಿನಲ್ಲಿ ಮತಯಾಚನೆ ಮಾಡುತ್ತಿದ್ದರು. ಆದರೆ ಈಗ ಕೇಜ್ರಿವಾಲ್ ಭಯೋತ್ಪಾದಕ ಎಂದು ಕರೆದು ಮತ ಕೇಳುವಂತಾಗಿದೆ. ಈ ಮೊದಲು ದೇಶದ ರೈತರನ್ನು ಭಯೋತ್ಪಾದಕರು ಎಂದು ಕರೆದರು. ಈಗ ಸೈಕಲ್ ಬಳಸಲು ಮುಂದಾಗಿರುವ ಬಡವರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ," ಎಂದು ಕಿಡಿ ಕಾರಿದರು.

ಕೇಜ್ರಿವಾಲ್ ವಿರುದ್ಧದ ಕುಮಾರ್ ವಿಶ್ವಾಸ್ ಆರೋಪವೇನು?
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬಿನಲ್ಲಿ ಖಲಿಸ್ತಾನಿಗಳ ಬೆಂಬಲಿಗರಾಗಿದ್ದಾರೆ ಎಂದು ಕುಮಾರ್ ವಿಶ್ವಾಸ್ ಆರೋಪಿಸಿದ್ದರು. "ಒಂದು ದಿನ ನನ್ನ ಬಳಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಅಥವಾ ಸ್ವತಂತ್ರ್ಯ ಖಲಿಸ್ತಾನ್ ರಾಷ್ಟ್ರದ ಮೊದಲ ಪ್ರಧಾನಮಂತ್ರಿ ಆಗುವ ಬಗ್ಗೆ ಹೇಳಿಕೊಂಡಿದ್ದರು. ಪ್ರತ್ಯೇಕತಾವಾದಿಗಳಿಗೆ ಬೆಂಬಲ ನೀಡುವುದರಲ್ಲಿ ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಪಂಜಾಬ್ ಎಂಬುದು ಒಂದು ರಾಜ್ಯವಲ್ಲ, ಅದು ಒಂದು ಭಾವನೆ. ಅದನ್ನು ಅರ್ಥ ಮಾಡಿಕೊಳ್ಳಬೇಕು. ನೀವು ಪ್ರತ್ಯೇಕತಾವಾದಿಗಳ ಪರವಾಗಿ ನಿಲ್ಲಬೇಡಿ ಎಂದು ನಾನು ಒಮ್ಮೆ ಹೇಳಿದೆ. ಅದಕ್ಕೆ ಅದೆಲ್ಲ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿರುವುದಾಗಿ," ಕುಮಾರ್ ವಿಶ್ವಾಸ್ ಆರೋಪಿಸಿದ್ದರು.












Click it and Unblock the Notifications