ಯುಪಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನ ವಿರುದ್ದ ಕೊಲೆ ಪ್ರಕರಣ
ಲಕ್ನೋ, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು ಹೇಳಲಾಗಿದೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ಇನ್ನು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಮಾತ್ರವಲ್ಲದೆ ಇನ್ನೂ ಕೂಡಾ ಹಲವು ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ. ಎಫ್‌ಐಆರ್‌ನಲ್ಲಿ ಇನ್ನೂ ಹಲವಾರು ಮಂದಿಯ ಹೆಸರನ್ನು ಉಲ್ಲೇಖ ಮಾಡಲಾಗಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ರೈತ ಮುಖಂಡರು ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಡಾ. ದರ್ಶನ್ ಪಾಲ್, "ನಾವು ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ಘೇರಾವು ನಡೆಸಿ ಹಿಂದಕ್ಕೆ ತೆರಳುವ ವೇಳೆ ಕಾರುಗಳು ರೈತರ ಮೇಲೆಯೇ ಹರಿದು ಹೋಗಿದೆ. ಈ ಸಂದರ್ಭ ಕಾರಿನಲ್ಲಿ ಸಚಿವರ ಮಗನೂ ಇದ್ದ," ಎಂದು ಆರೋಪ ಮಾಡಿದ್ದಾರೆ.

"ಸಚಿವರುಗಳ ಭೇಟಿಯನ್ನು ತಡೆಯುವ ನಿಟ್ಟಿನಲ್ಲಿ ರೈತರು ಹೆಲಿಪ್ಯಾಡ್‌ನಲ್ಲಿ ಘೆರವು ಹಾಕಲು ಯೋಜನೆ ರೂಪಿಸಿದ್ದೆವು. ನಮ್ಮ ಆ ಘೆರಾವು ಕಾರ್ಯಕ್ರಮ ಮುಗಿದ ಬಳಿಕ ನಮ್ಮ ಹೆಚ್ಚಿನ ರೈತರು ಹಿಂದಕ್ಕೆ ತೆರಳುತ್ತಿದ್ದೆವು. ಆದರೆ ಆ ಸಂದರ್ಭದಲ್ಲಿ ಮೂರು ಕಾರುಗಳು ಬಂದಿದೆ. ರೈತರುಗಳನ್ನು ತಳ್ಳಿಕೊಂಡು ರೈತರ ಮೇಲೆಯೇ ಆ ಕಾರುಗಳು ಸಾಗಿದೆ. ಈ ವೇಳೆ ಓರ್ವ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ," ಎಂದು ತಿಳಿಸಿದ್ದಾರೆ.
ಇನ್ನು ರೈತ ಮುಖಂಡ ರಾಕೇಶ್ ಟಿಕಾಯತ್ ಹಾಗೂ ಸಂಯುಕ್ತ ಕಿಸಾನ್ ಮೋರ್ಚಾವು ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಮಗ ಆಶೀಶ್ ವಿರುದ್ದ ಎಫ್‌ಐಆರ್ ದಾಖಲು ಮಾಡುವಂತೆ ಆಗ್ರಹ ಮಾಡಿದ್ದರು. ಆಶೀಶ್‌ರ ಬಂಧನ ಮಾಡಬೇಕು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ. "ಈ ಪ್ರದೇಶದಲ್ಲಿ ಕಳೆದ 10 ದಿನಗಳಿಂದ ವಾತಾವರಣ ಹಾಳಾಗುತ್ತಿದೆ," ಎಂದು ರಾಕೇಶ್ ಟಿಕಾಯತ್ ಅಭಿಪ್ರಾಯಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಈ ಘಟನೆಯ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ಸಚಿವರು ನಿರಾಕರಿಸಿದ್ದಾರೆ. "ನನ್ನ ಪುತ್ರ ಆ ಸಂದರ್ಭದಲ್ಲಿ ಕಾರಿನಲ್ಲಿ ಇರಲಿಲ್ಲ. ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಕೋಲು ಮತ್ತು ಕತ್ತಿಗಳಿಂದ ಹಲ್ಲೆ ಮಾಡಿದ್ದಾರೆ. ನನ್ನ ಮಗ ಅಲ್ಲಿ ಇದ್ದಿದ್ದರೆ, ಆತ ಜೀವಂತವಾಗಿ ಇರುತ್ತಿರಲಿಲ್ಲ," ಎಂದು ಹೇಳಿದ್ದಾರೆ.
"ನನ್ನ ಪುತ್ರ ಒಂದು ಕಾರ್ಯಕ್ರಮದಲ್ಲಿ ಇದ್ದ. ನಾನು ಉಪ ಮುಖ್ಯಮಂತ್ರಿಯ ಜೊತೆಗಿದ್ದೆ," ಎಂದು ಕೂಡಾ ಹೇಳಿದ್ದಾರೆ. "ಇನ್ನು ನಮ್ಮ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಚಾಲಕನಿಗೆ ಗಾಯವಾಗಿದೆ. ಹಾಗಾಗಿ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ. ಈ ಬಳಿಕ ಮೂವರು ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಕಾರಿಗೆ ಬೆಂಕಿ ಹಚ್ಚಲಾಗಿದೆ," ಎಂದು ಆರೋಪ ಮಾಡಿದ್ದಾರೆ.
"ಇವೆಲ್ಲ ಕೃತ್ಯವನ್ನು ಅವರೇ ಮಾಡಿದ್ದಾರೆ, ಈ ಬಗ್ಗೆ ನಮ್ಮಲ್ಲಿ ವಿಡಿಯೋ ಸಾಕ್ಷಿಯಿದೆ," ಎಂದು ಕೂಡಾ ಹೇಳಿಕೊಂಡಿದ್ದಾರೆ. ಇನ್ನು ಅಜಯ್ ಮಿಶ್ರಾರ ಪುತ್ರ ಆಶಿಶ್ ಕೂಡಾ ತಾನು ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆ ಈ ವಿಡಿಯೋ ಬಗ್ಗೆ ಹಾಗೂ ಘಟನೆಯ ಬಗ್ಗೆ ತನಿಖೆಗೆ ರೈತ ಮುಖಂಡರು ಆಗ್ರಹ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications