ಅತ್ಯಾಚಾರ ಪ್ರಕರಣ; ಉ. ಪ್ರದೇಶದ ಬಿಜೆಪಿ ಶಾಸಕನಿಗೆ ಕ್ಲೀನ್ ಚಿಟ್
ಲಕ್ನೋ, ಫೆಬ್ರವರಿ 23 : ಅತ್ಯಾಚಾರ ಆರೋಪದಲ್ಲಿ ಉತ್ತರ ಪ್ರದೇಶದ ಬಾದೋಲಿ ಕ್ಷೇತ್ರದ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಶಾಸಕರ ಸಂಬಂಧಿಯೊಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
40 ವರ್ಷದ ಮಹಿಳೆ ನೀಡಿದ್ದ ದೂರಿನ ಆಧಾರದ ಮೇಲೆ ಶಾಸಕರ ರವೀಂದ್ರನಾಥ್ ತ್ರಿಪಾಠಿ ಮತ್ತು ಶಾಸಕರ ಬೆಂಬಲಿಗರಾದ ಇತರ ಐವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಎಲ್ಲರಿಗೂ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ.
2017ರಲ್ಲಿ ಒಂದು ತಿಂಗಳ ಕಾಲ ಹೋಟೆಲ್ ರೂಂನಲ್ಲಿ ಕೂಡಿಹಾಕಿ ನಿರಂತರವಾಗಿ ಅತ್ಯಾಚಾರ ನಡೆಸಲಾಗಿದೆ. ಇದರಿಂದ ನಾನು ಗರ್ಭಿಣಿಯಾಗಿದ್ದು, ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಳು.

"ವಿಚಾರಣೆ ವೇಳೆ ಶಾಸಕ ರವೀಂದ್ರನಾಥ್ ತ್ರಿಪಾಠಿ ಮತ್ತು ಇತರ ಐವರ ವಿರುದ್ಧ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಆದ್ದರಿಂದ, ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ" ಎಂದು ಎಸ್‌ಪಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ. ಶಾಸಕರ ಸಂಬಂಧಿಯೊಬ್ಬರನ್ನು ಮಹಿಳೆಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿಸಲಾಗಿದೆ.
2016ರಲ್ಲಿ ಮೊದಲ ಬಾರಿಗೆ ರವೀಂದ್ರ ನಾಥ್ ತ್ರಿಪಾಠಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಆದರೆ, ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ಕಾರಣಕ್ಕೆ ನಾನು ದೂರು ಕೊಟ್ಟಿರಲಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
2017ರಲ್ಲಿ ಉತ್ತರ ಪ್ರದೇಶ ಚುನಾವಣೆ ನಡೆದಾಗ ಒಂದು ತಿಂಗಳ ಕಾಲ ಹೋಟೆಲ್‌ನಲ್ಲಿ ಮಹಿಳೆಯನ್ನು ಕೂಡಿ ಹಾಕಲಾಗಿತ್ತು. ಆಗ ತ್ರಿಪಾಠಿ ಮತ್ತು ಆತನ ಬೆಂಬಲಿಗರು ನಿರಂತರವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಳು.
ಮಹಿಳೆ ವೈದ್ಯಕೀಯ ಪರೀಕ್ಷೆಗೆ ಒಪ್ಪಿಗೆ ಸೂಚಿಸದಿದ್ದಾಗ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ದೂರಿನ ಬಗ್ಗೆ ತನಿಖೆ ನಡೆಸಿದಾಗ ಶಾಸಕರ ವಿರುದ್ಧ ಯಾವುದೇ ಆರೋಪ ಸಾಬೀತಾಗಿಲ್ಲ.












Click it and Unblock the Notifications