ಕೊಪ್ಪಳ; ಶ್ರೀರಾಮ್ ಎಂದು ಘೋಷಣೆ ಕೂಗಿಲ್ಲ ಎಂದು ಹಲ್ಲೆ, ಟ್ವಿಸ್ಟ್
ಕೊಪ್ಪಳ, ಡಿಸೆಂಬರ್ 07; ಕೊಪ್ಪಳದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ನಿರಾಕರಿಸಿದ ಕಾರಣಕ್ಕೆ ಮುಸ್ಲಿಂ ಸಮುದಾಯದ ಹುಸೇನಸಾಬ ಹಸನಸಾಬ್ ಎಂಬ ವೃದ್ಧನ ಮೇಲೆ ಹಲ್ಲೆ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು.
ಈ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ, ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಈ ಘಟನೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ನವೆಂಬರ್ 25ರಂದು ಗಂಗಾವತಿಯಲ್ಲಿ ಹುಸೇನಸಾಬ ಹಸನಸಾಬ್ ಎಂಬ ವೃದ್ಧನ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಹುಸೇನಸಾಬ ನೀಡಿದ ದೂರಿನನ್ವಯ ಪೊಲೀಸರು ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದರು. ತನಿಖೆಯಲ್ಲಿ ಸಂತ್ರಸ್ತರಿಗೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲು ಒತ್ತಾಯ ಮಾಡಿಲ್ಲ ಎಂಬುದು ಸಾಬೀತಾಗಿದ್ದು, ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಸ್ಪಷ್ಟಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿ; ನವೆಂಬರ್ 25ರ ಮುಂಜಾನೆ 3 ಗಂಟೆಗೆ ಹುಸೇನಸಾಬ ಹಸನಸಾಬ (65)ರನ್ನು ಗಂಗಾವತಿ ಬಸ್ ನಿಲ್ದಾಣದಿಂದ ಯಾರೋ ಇಬ್ಬರು ವ್ಯಕ್ತಿಗಳು ಮೋಟರ್‌ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದಲ್ಲದೇ ಗಡ್ಡಕ್ಕೆ ಬೆಂಕಿ ಹಚ್ಚಿ ಅವರ ಹತ್ತಿರ ಇದ್ದ ರೂ. 250 ಗಳನ್ನು ಕಸಿದುಕೊಂಡು ಹೋಗಿದ್ದಾರೆ ಎಂದು ನವೆಂಬರ್ 30ರಂದು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹಾಗೂ ಗಂಗಾವತಿ ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಮಾರ್ಗದರ್ಶನದಲ್ಲಿ ಗಂಗಾವತಿ ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ ಮಾಳಿ ನೇತೃತ್ವದಲ್ಲಿ ಮರಿಶಾಂತಗೌಡ, ಚಿರಂಜೀವಿ, ವಿಶ್ವನಾಥ, ಸುಭಾಸ್ ಬಸುದೆ, ರಾಘವೇಂದ್ರ, ರಮೇಶ, ಮೈಲಾರಪ್ಪ, ಶ್ರೀಶೈಲ, ಶಿವಕುಮಾರ ಹಾಗೂ ಜಿಲ್ಲಾ ಪೊಲೀಸ್ ಕಾರ್ಯಾಲಯದ ಕೋಟೇಶ, ಪ್ರಸಾದ ಅವರನ್ನು ಒಳಗೊಂಡ ತಂಡವನ್ನು ಪ್ರಕರಣದ ತನಿಖೆಗೆ ರಚನೆ ಮಾಡಲಾಗಿತ್ತು.
ಪೊಲೀಸರ ತಂಡ ಸಿಸಿಟಿವಿ ದೃಶ್ಯಾವಳಿ ಮತ್ತು ಇನ್ನಿತರ ತಂತ್ರಜ್ಞಾನದ ಸಹಾಯದಿಂದ ಆರೋಪಿಗಳ ಹುಡುಕಾಟ ಆರಂಭಿಸಿತ್ತು. ಆರೋಪಿಗಳಾದ ಗಂಗಾವತಿಯ ಸಾಫ್ಟ್‌ವೇರ್ ಇಂಜಿನಿಯರ್ ಕೆ. ಸಾಗರ್ ಜನಾರ್ಧನಶೆಟ್ಟಿ ಕಲ್ಕಿ(24) ಹಾಗೂ ನರಸಪ್ಪ ಹೊನ್ನಪ್ಪ ದನಕಾಯರ (25) ಎಂಬುವವರನ್ನು ಬಂಧಿಸಿದೆ.
ಅಂಧ ವೃದ್ಧರು ಕತ್ತಲಲ್ಲಿ ಡ್ರಾಪ್ ಮಾಡಲು ಕೇಳಿದ್ದರಿಂದ ಅವರನ್ನು ಮೋಟರ್‌ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ವೃದ್ಧರ ಟೊಪ್ಪಿ ಮುಟ್ಟಿದ್ದರಿಂದ ವೃದ್ಧರು ಕೋಪಗೊಂಡು ಅವಾಚ್ಯವಾಗಿ ಬೈದರು. ಆದ್ದರಿಂದ ಅವರ ಮೇಲೆ ಇಬ್ಬರೂ ಆರೋಪಿಗಳು ಪಂಪಾಕ್ರಾಸ್ ಬಳಿ ಹಲ್ಲೆ ಮಾಡಿದ್ದಾರೆ. ನಂತರ ಬೀಟ್ ಪೊಲೀಸರು ನೋಡುತ್ತಾರೆಂದು ಇಬ್ಬರೂ ಸೇರಿಕೊಂಡು ಗಂಗಾವತಿಯ ಬೈಪಾಸ್ ರಸ್ತೆಯಲ್ಲಿ ರೈಲ್ವೇ ಬ್ರಿಡ್ಜ್ ಕೆಳಗೆ ಕರೆದುಕೊಂಡು ಹೋಗಿ ವೃದ್ಧರನ್ನು ಹೊಡೆದು ಅವರ ಬಳಿ ಇದ್ದ ರೂ. 250 ಗಳನ್ನು ಕಸಿದುಕೊಂಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಇದು ಕುಡಿದ ಮತ್ತಿನಲ್ಲಿ ನಡೆದ ಹಲ್ಲೆಯಾಗಿದ್ದು ಬೇರೆ ಯಾವುದೇ ಊಹೆ, ವದಂತಿಗಳು ನಿಜವಲ್ಲ. ಪ್ರಕರಣದ ಆರೋಪಿತರನ್ನು ಬಂಧಿಸಿದ ತನಿಖಾ ವಿಶೇಷ ತಂಡಕ್ಕೆ ಕಾರ್ಯ ಪ್ರಶಂಸನೀಯವಾಗಿದ್ದು, ತಂಡಕ್ಕೆ ಬಹುಮಾನ ಘೋಷಣೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.












Click it and Unblock the Notifications