ಕೊಪ್ಪಳಕ್ಕೆ ಬಂತು ಜಗತ್ತಿನ ದುಬಾರಿ ಮಾವು ಮೀಯಾಜಾಕೀ: ನೋಡೋಕೆ ಮಾತ್ರ ಚೆಂದ ಅಂದರು ಜನ
ಕೊಪ್ಪಳ, ಮೇ 14: ಕೊಪ್ಪಳದ ತೋಟಗಾರಿಕೆ ಇಲಾಖೆ ವತಿಯಿಂದ ಕೊಪ್ಪಳ ನಗರದ ತೋಟಗಾರಿಕೆ ಇಲಾಖೆ ಉಪನಿರ್ದೆಶಕರ ಕಛೇರಿ ಆವರಣದಲ್ಲಿ 'ಕೊಪ್ಪಳ ಮಾವು ಮೇಳ-2025' ಆಯೋಜನೆ ಮಾಡಲಾಗಿದೆ. ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಉದ್ಘಾಟಿಸಿದರು. ಮೇ 22ರ ತನಕ ಒಟ್ಟು 10 ದಿನಗಳ ಕಾಲ ಈ ಮೇಳ ನಡೆಯಲಿದೆ.
'ಕೊಪ್ಪಳ ಮಾವು ಮೇಳ-2025' ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, "ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಪಪ್ಪಾಯಿಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗುವುದರಿಂದ ರೈತರು ಇವುಗಳನ್ನು ಬೆಳೆಸುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕು" ಎಂದು ಕರೆ ನೀಡಿದರು.

ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 100ಕ್ಕೂ ಹೆಚ್ಚು ತಳಿಯ ವಿವಿಧ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಮುಖ್ಯವಾಗಿ ಜಗತ್ತಿನ ದುಬಾರಿ ಮಾವು 'ಮಿಯಾ ಜಾಕೀ' ಈ ಮೇಳದ ವಿಶೇಷ ಆಕರ್ಷಣೆಯಾಗಿದೆ. ಮಿಯಾ ಜಾಕೀ ಮಾವಿನ ತಳಿಯ ಸಸಿಗಳಿಗೆ ಬಹಳ ಬೇಡಿಕೆಯಿದ್ದು, ಈ ಸಸಿಗಳನ್ನು ಸಹ ಮೇಳದಲ್ಲಿ ಮಾರಾಟಕ್ಕಿಡಲಾಗಿದೆ.
ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, "ಈ ಮೇಳದಲ್ಲಿ ಒಂದು ಕೆಜಿ ಮಿಯಾಜಾಕೀ ಹಣ್ಣಿನ ಬೆಲೆ 2. 50 ಲಕ್ಷ ಇರುವ ಹಣ್ಣನ್ನು ಪ್ರದರ್ಶನಕ್ಕೆ ಇಟ್ಟಿರುವುದು ವಿಶೇಷತೆಯಾಗಿದೆ. ಇಂತಹ ಹಣ್ಣುಗಳನ್ನು ನಮ್ಮ ಭಾಗದಲ್ಲಿ ರೈತರು ಬೆಳೆಯುವಂತಾಗಬೇಕೆಂದು" ಎಂದು ಹೇಳಿದರು.
"ಹೆಚ್ಚು ಮಾವು ಬೆಳೆದ ರೈತರಿಗೆ ಮಾರ್ಕೆಟಿಂಗ್ ಆಗಬೇಕೆಂದು ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ ಕೊಪ್ಪಳ ಮಾವು ಮೇಳ ಕಾರ್ಯಕ್ರಮವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಮಾವಿನ ಹಣ್ಣುಗಳನ್ನು ಬೆಳೆದ ರೈತರಿಗೆ ಸರಿಯಾದ ಬೆಲೆ ಸಿಗಬೇಕು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಮಳೆಯಾಗಿರುವುದರಿಂದ ಮಾವಿನ ಬೆಲೆ ಸ್ವಲ್ಪ ಕಡಿಮೆಯಾಗಿದೆ" ಎಂದು ಶಾಸಕರು ತಿಳಿಸಿದರು.
ಮೇಳದ ವಿಶೇಷತೆಗಳು: ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಸಿ. ಉಕ್ಕುಂದ ಮಾತನಾಡಿ, "ತೋಟಗಾರಿಕೆ ಇಲಾಖೆ ವತಿಯಿಂದ 9ನೇ ವರ್ಷದ ಮಾವು ಮೇಳವನ್ನು ಕೊಪ್ಪಳ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮೇ 22ರ ತನಕ ಮೇಳ ನಡೆಯಲಿದೆ. 100ಕ್ಕೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಮೇಳದಲ್ಲಿ 30ಕ್ಕೂ ಹೆಚ್ಚು ಸ್ಟಾಲ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ" ಎಂದರು.
"ರೈತರು ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಯೋಗ್ಯ ಬೆಲೆಯಲ್ಲಿ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಗ್ರಾಹಕರಿಗೆ ಮಾರಕಟ್ಟೆಗಿಂತಲೂ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನೈಸರ್ಗಿಕವಾದ ಹಣ್ಣುಗಳು ಸಿಗಲಿವೆ. 100ಕ್ಕೂ ಹೆಚ್ಚು ತಳಿಯ ವಿವಿಧ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಮುಖ್ಯವಾಗಿ ಜಗತ್ತಿನ ದುಬಾರಿ ಮಾವು ಮೀಯಾ ಜಾಕೀ' ಮಾವಿನ ಹಣ್ಣು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ. ಮೀಯಾ ಜಾಕೀ ಮಾವಿನ ತಳಿಯ ಸಸಿಗಳಿಗೆ ಬಹಳ ಬೇಡಿಕೆಯಿದೆ" ಎಂದು ಹೇಳಿದರು.
"ವೈಜ್ಞಾನಿಕವಾಗಿ ಹಣ್ಣುಗಳನ್ನು ಯಾವ ರೀತಿ ಮಾಗಿಸಬೇಕೆಂಬುವುದಕ್ಕೆ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ ನೀಡಲಾಗುತ್ತಿದೆ. ನೈಸರ್ಗಿಕವಾಗಿ ಹಣ್ಣು ಮಾಡುವ ಬಗ್ಗೆಯೂ ಮಾಹಿತಿ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯ 6 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಮೇಳದಲ್ಲಿ ನಮ್ಮ ಜಿಲ್ಲೆಯ 10 ರಿಂದ 12 ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕಿಡಲಾಗಿದ್ದು, 'ಕೊಪ್ಪಳ ಕೇಸರ್' ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ. ಮೇಳದಲ್ಲಿ ಉಪ್ಪಿನ ಕಾಯಿ ಮಾರಟಕ್ಕೂ ರೈತರು ಮುಂದೆ ಬಂದಿದ್ದಾರೆ ಹಾಗೂ ಇತರೆ ಮಾವಿನ ಉತ್ಪನ್ನಗಳನ್ನು ಸಹ ಪ್ರದರ್ಶನ ಮತ್ತು ಮಾರಾಟಕ್ಕಿವೆ" ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಕೊಪ್ಪಳ ವತಿಯಿಂದ 9ನೇ ವರ್ಷದ ಮಾವು ಮೇಳವನ್ನು ಮೇ. 13 ರಿಂದ ಮೇ 22ರ ತನಕ ಆಯೋಜಿಸಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 6000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಮಾವಿನ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು ಇವುಗಳಲ್ಲಿ ಮುಖ್ಯವಾಗಿ ಕೇಸರ್ ತಳಿಯು ಅತ್ಯಂತ ಬೇಡಿಕೆಯ ತಳಿಯಾಗಿದೆ. ದಶಹರಿ, ತೋತಾಪೂರಿ, ಮಲ್ಲಿಕಾ, ಬೆನೆಶಾನ್, ಸಿಂಧೂರಿ. ಇಮಾಮ ಪಸಂದ, ಉಪ್ಪಿನಕಾಯಿ ತಳಿಗಳನ್ನು ಬೆಳೆಯತ್ತಿದ್ದು ರೈತರ ಅನುಕೂಲಕ್ಕಾಗಿ ಹಾಗೂ ಗ್ರಾಹಕರಿಗೆ ಯೋಗ್ಯ ಬೆಲೆಗೆ ಗುಣಮಟ್ಟದ ಹಣ್ಣುಗಳನ್ನು ಮಾರಾಟ ಮಾಡಲು, ರೈತರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು ತಲುಪಿಸಲು ಈ ಮೇಳವನ್ನು ಆಯೋಜಿಸಲಾಗಿದೆ.
ಕೊಪ್ಪಳ ಕೇಸರ್ ಮಾವಿನ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು ಬಾಕ್ಸ್‌ನಲ್ಲಿ 'ಕೊಪ್ಪಳ ಕೇಸರ್ ಮಾವು' ಬ್ರಾಂಡ್ ಅನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ. ಜನರು ಈ ಬಾಕ್ಸ್‌ಗಳನ್ನು ಮೆಚ್ಚಿಕೊಂಡಿದ್ದು, ಈ ಬಾಕ್ಸ್‌ಗಳನ್ನು ರೈತರಿಗೆ ಆರ್. ಕೆ. ವಿ. ವೈ. ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಾಗುತ್ತಿದೆ.












Click it and Unblock the Notifications