ಸೂಲಿಬೆಲೆಗೆ ದೇಶದ್ರೋಹಿ ಎಂದಿಲ್ಲ: ಕೇಂದ್ರ ಸಚಿವ ಸದಾನಂದ ಗೌಡ ಸ್ಪಷ್ಟನೆ
ಗಂಗಾವತಿ, ಅಕ್ಟೋಬರ್ 5: ದೇಶದ್ರೋಹಿ ಎಂಬ ಹೇಳಿಕೆ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಉದ್ದೇಶಿಸಿ ಹೇಳಿದ್ದಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿವಿ ಸದಾನಂದ ಗೌಡ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
'ಅನವಶ್ಯಕವಾಗಿ ಮಾತನಾಡುವವರು, ಸುಳ್ಳು ಸುದ್ದಿಗಳನ್ನು ಹರಡುವವರನ್ನು ಕುರಿತು ದೇಶದ್ರೋಹಿ ಎಂದು ಹೇಳಿದ್ದೇನೆಯೇ ವಿನಾ ಚಕ್ರವರ್ತಿ ಸೂಲಿಬೆಲೆ ಅವರಿಗೆ ಅಲ್ಲ. ನನ್ನ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ' ಎಂದು ಹೇಳಿದರು.

ರಾಜ್ಯದಿಂದ ಬಿಜೆಪಿಯ 25 ಸಂಸದರು ಇದ್ದರೂ ನೆರೆ ಪರಿಹಾರಕ್ಕಾಗಿ ಏನನ್ನೂ ಮಾಡಿಲ್ಲ ಎಂಬ ಆರೋಪ ಮನಸ್ಸಿಗೆ ನೋವುಂಟು ಮಾಡಿತ್ತು. ಕೇಂದ್ರ ಸರ್ಕಾರವು ಪ್ರವಾಹ ಸಮಸ್ಯೆಯ ಪರಿಹಾರಕ್ಕಾಗಿ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.
ಮಳೆ ಬರುವ ಸಂದರ್ಭದಲ್ಲಿ ನೀಡುವ ಪರಿಹಾರದ ಹಣ ಯಾವುದಕ್ಕೂ ಉಪಯೋಗವಾಗುವುದಿಲ್ಲ. ಮಳೆ ನಿರಂತರವಾಗಿ ಮುಂದುವರಿದಿದ್ದರಿಂದ ಪರಿಹಾರ ಘೋಷಣೆ ಮಾಡಿರಲಿಲ್ಲ. ಎರಡು ತಿಂಗಳು ವಿಳಂಬವಾಗಿ ಪರಿಹಾರ ನೀಡಲಾಗಿದೆ ಎಂದರೆ ಮಳೆ ನಿಂತ ಮೇಲೆ ಪರಿಹಾರಕ್ಕೆ ಬಳಕೆಯಾಗುತ್ತದೆ ಎಂದು. ದೇಶದ 9 ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇವುಗಳ ಪೈಕಿ ಕರ್ನಾಟಕಕ್ಕೆ ಮೊದಲು ಪರಿಹಾರವನ್ನು ನೀಡಲಾಗಿದೆ. ಈ ವಾಸ್ತವಗಳನ್ನು ಅರ್ಥ ಮಾಡಿಕೊಂಡ ಬಳಿಕ ಟೀಕೆ ಮಾಡಲಿ ಎಂದು ವಿರೋಧಿಗಳಿಗೆ ಹೇಳಿದರು.
ಅನಂತಕುಮಾರ್ ಅವರ ನಿಧನದ ಬಳಿಕ ಯಾವ ಸಂಸದರೂ ಕೇಂದ್ರ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿಲ್ಲ ಎಂಬ ಆರೋಪಕ್ಕೆ ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಎರಡು ದಿನಗಳ ಹಿಂದಷ್ಟೇ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿದ್ದೆ. ಒಂದೇ ದಿನದಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರೆ ನೀವೇ ಅರ್ಥಮಾಡಿಕೊಳ್ಳಬೇಕು. ಇದು ನಮ್ಮ ಕರ್ತವ್ಯ. ಇದರಲ್ಲಿ ಪ್ರಶಂಸೆ ತೆಗೆದುಕೊಳ್ಳುವುದೇನೂ ಇಲ್ಲ ಎಂದರು.












Click it and Unblock the Notifications