'ಪಶ್ಚಿಮ ಬಂಗಾಳ, ಮಹಾರಾಷ್ಟ್ರದ ಬಗ್ಗೆ ಕೇಂದ್ರಕ್ಕೆ ಮಲತಾಯಿ ಧೋರಣೆ'
ಕೋಲ್ಕತ್ತಾ, ಜನವರಿ.02: ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಹಾವು-ಮುಂಗುಸಿಯಂತೆ ಕಿತ್ತಾಡುವುದು ಹೊಸ ವಿಷಯವೇನಲ್ಲ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಎನ್ ಸಿಪಿ ಸಂಸದೆ ಸುಪ್ರಿಯಾ ಸುಲೆ ಕಿಡಿ ಕಾರಿದ್ದಾರೆ.
ಜನವರಿ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪರೇಡ್ ನಡೆಸಲು ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ. ಇದು ಬಿಜೆಪಿ ಸರ್ಕಾರದ ಪೂರ್ವಾಗ್ರಹ ಪೀಡಿತ ನೀತಿ ಎಂದು ಸಂಸದೆ ಸುಪ್ರಿಯಾ ಸುಲೆ ಟ್ವಿಟರ್ ನಲ್ಲಿ ಹರಿ ಹಾಯ್ದಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಪ್ರಜೆಗಳ ಹೋರಾಟ ಅತ್ಯಂತ ಮಹತ್ವದ್ದಾಗಿದೆ. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎರಡು ರಾಜ್ಯಗಳ ಕೊಡುಗೆ ಅತ್ಯಮೂಲ್ಯವಾಗಿದ್ದು, ಅದನ್ನು ಬಿಂಬಿಸಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ನಿರ್ಧಾರಿಂದ ಪ್ರಜೆಗಳನ್ನು ಅವಮಾನ:
ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಉಗ್ರ ಹೋರಾಟಗಳೇ ನಡೆದಿದ್ದವು. ದೇಶಕ್ಕಾಗಿ ಹೋರಾಡಿದ ವೀರರಿಗೆ ಕೇಂದ್ರ ಸರ್ಕಾರವು ಗೌರವಿಸುತ್ತಿಲ್ಲ. ಬದಲಿಗೆ ಎರಡು ರಾಜ್ಯಗಳಿಗೆ ಕೋಷ್ಠಕದಲ್ಲಿ ಭಾಗವಹಿಸಲು ಅವಕಾಶ ನೀಡದೇ ಅವಮಾನಿಸುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳನ್ನು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಂತೆ ನೋಡುತ್ತಿದೆ ಎಂದು ಸಂಸದೆ ಸುಪ್ರಿಯಾ ಸುಲೆ ದೂರಿದ್ದಾರೆ.
ಜನವರಿ.26ರ ಗಣರಾಜ್ಯೋತ್ಸವದ ದಿನ ಪರೇಡ್ ನಲ್ಲಿ ಎಲ್ಲ ರಾಜ್ಯಗಳ ಕಲೆ, ಸಂಸ್ಕೃತಿ, ಸಂಪ್ರದಾಯವನ್ನು ಸಾರುವ ಸ್ತಬ್ಧಚಿತ್ರ, ಕೋಷ್ಠಕಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಅದಕ್ಕಾಗಿ ಈ ಬಾರಿ 16 ರಾಜ್ಯ ಹಾಗೂ 6 ಕೇಂದ್ರಾಡಳಿತ ಪ್ರದೇಶಗಳಿಂದ 56 ಪ್ರಸ್ತಾವನೆಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ 22 ಪ್ರಸ್ತಾವನೆಗಳಿಗೆ ಕೇಂದ್ರ ಸರ್ಕಾರವು ಒಪ್ಪಿಗೆ ಸೂಚಿಸಿದೆ. ಇದೇ ವೇಳೆ ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರ ಸರ್ಕಾರಗಳು ಸಲ್ಲಿಸಿದ ಪ್ರಸ್ತಾವನೆಯನ್ನು ತಜ್ಞರ ಸಮಿತಿಯು ತಿರಸ್ಕರಿಸಿದೆ.












Click it and Unblock the Notifications