ಬಿಜೆಪಿ ಅಧ್ಯಕ್ಷ ನಡ್ಡಾ ವಾಹನದ ಮೇಲೆ ಕಲ್ಲು ತೂರಾಟ
ಪಶ್ಚಿಮ ಬಂಗಾಳ, ಡಿಸೆಂಬರ್ 10: ಕೋಲ್ಕತ್ತದಿಂದ ಪ.ಬಂಗಾಳದ ಡೈಮಂಡ್ ಹಾರ್ಬರ್ ಗೆ ತೆರಳುತ್ತಿದ್ದ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶದ ವಿಜಯವರ್ಗಿಯಾ ಅವರ ಕಾರಿನ ಮೇಲೂ ಕಲ್ಲು ತೂರಿರುವುದಾಗಿ ತಿಳಿದುಬಂದಿದೆ. ಬಂಗಾಳ ಚುನಾವಣೆ 2021ರ ಸಲುವಾಗಿ ಪಕ್ಷದ ಸಭೆಗೆ ಹಾಜರಾಗಲು ಮುಖಂಡರು ತೆರಳುತ್ತಿದ್ದರು. ಈ ಸಂದರ್ಭ ಪ್ರತಿಭಟನಾಕಾರರು ಕಲ್ಲು ತೂರಿರುವುದಾಗಿ ತಿಳಿದುಬಂದಿದೆ. ಕಲ್ಲು ತೂರಾಟದ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಬೆಂಗಾವಲು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ವಿಜಯವರ್ಗಿಯಾ ಅವರು ತಮ್ಮ ಕಾರಿನ ಗಾಜು ಪುಡಿಪುಡಿಯಾಗಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯಲ್ಲಿ ತಾವು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. "ಈ ಘಟನೆಯನ್ನು ಖಂಡಿಸುತ್ತೇವೆ. ಪೊಲೀಸರ ಉಪಸ್ಥಿತಿಯಲ್ಲೇ ನಾಯಕರ ಮೇಲೆ ದಾಳಿ ನಡೆದಿದೆ. ನಾವು ನಮ್ಮ ದೇಶದಲ್ಲಿದ್ದೇವೆಯೇ ಎಂಬ ಅನುಮಾನ ಮೂಡುತ್ತಿದೆ" ಎಂದು ಹೇಳಿಕೊಂಡಿದ್ದಾರೆ.

"ವಾಹನಗಳನ್ನು ತಡೆದ ಟಿಎಂಸಿ ಬೆಂಬಲಿಗರು, ನಡ್ಡಾ ಅವರ ವಾಹನ ಸೇರಿದಂತೆ ಇತರೆ ವಾಹನಗಳ ಮೇಲೂ ಕಲ್ಲು ತೂರಿದರು. ಈ ಘಟನೆಯಿಂದ ಟಿಎಂಸಿ ಅವರ ನಿಜ ಬಣ್ಣ ಬಯಲಾಗಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ದಿಲೀಪ್ ಘೋಷ್ ತಿಳಿಸಿದ್ದಾರೆ. ಬುಧವಾರವಷ್ಟೇ, ದಿಲೀಪ್ ಘೋಷ್, ಜೆ.ಪಿ.ನಡ್ಡಾ ಅವರ ಕಾರ್ಯಕ್ರಮದಲ್ಲಿ ಭದ್ರತೆ ಕೊರತೆ ಇರುವುದಾಗಿ ಆರೋಪಿಸಿದ್ದರು. ಇದರ ಬೆನ್ನಲ್ಲೇ ಈ ಸಂಗತಿ ನಡೆದಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ನಡ್ಡಾ ಅವರು, "ಪಶ್ಚಿಮ ಬಂಗಾಳದಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಗೂಂಡಾ ರಾಜ್ಯದ ಆಡಳಿತ ನಡೆಯುತ್ತಿದೆ" ಎಂದು ದೂರಿದ್ದಾರೆ.












Click it and Unblock the Notifications